ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ಖಂಡಿಸಿ ಧಾರವಾಡದಲ್ಲಿ ಎಐಎಂಎಸ್ಎಸ್, ಎಐಡಿವೈಒ ಹಾಗೂ ಎಐಡಿಎಸ್ಒ ಸಂಘಟನೆಗಳು ಪ್ರತಿಭಟನಾ ರ್ಯಾಲಿ ನಡೆಸಿದವು.
ಧಾರವಾಡದ ಕಲಾಭವನ ಮೈದಾನದಿಂದ ವಿವೇಕಾನಂದ ವೃತ್ತದವರೆಗೆ ರ್‍ಯಾಲಿ ನಡೆಸಿದ ಪ್ರತಿಭಟನಾಕಾರರು, “ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗೂಂಡಾಗಳು ದಾಳಿ ಮಾಡಿರುವುದು ಖಂಡನೀಯ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದರು.
ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೋಕರೆ ಮಾತನಾಡಿ, “ಸಂತ್ರಸ್ತೆಗೆ ತ್ವರಿತ ನ್ಯಾಯಕ್ಕಾಗಿ ಒತ್ತಾಯಿಸಿ ಕಿರಿಯ ವೈದ್ಯರು ಕೆಲಸವನ್ನು ನಿಲ್ಲಿಸಿ, ಪ್ರತಿಭಟನೆಗಳನ್ನು ಆಯೋಜಿಸುತ್ತಿರುವುದು ನಿರೀಕ್ಷಿತ ಮತ್ತು ನ್ಯಾಯಸಮ್ಮತವಾಗಿದೆ. ಸಮಾಜಘಾತುಕ ಶಕ್ತಿಗಳು ಈ ಘಟನೆಯ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ದಾಳಿ ಮಾಡಿದ್ದಾರೆ. ಈ ಕೃತ್ಯ ಎಸಗಿರುವ ಅಪರಾಧಿಗಳನ್ನು ರಕ್ಷಿಸಲು ಗೂಂಡಾಗಳು ನಡೆಸಿರುವ ಉದ್ದೇಶಪೂರ್ವಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ” ಎಂದರು.
ಎಐಡಿವೈಒ ಜಿಲ್ಲಾಧ್ಯಕ್ಷ ಭವಾನಿಶಂಕರ್ ಎಸ್ ಗೌಡ ಮಾತನಾಡಿ, “ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಮಾಧ್ಯಮಗಳಲ್ಲಿ ನಿರಂತರವಾಗಿ ಮತ್ತು ಅವ್ಯಾಹತವಾಗಿ ಅಶ್ಲೀಲತೆ ಮತ್ತು ಕ್ರೌರ್ಯಗಳ ಪ್ರದರ್ಶನಗಳ ಮೂಲಕ ಪೋರ್ನೋಗ್ರಫಿ ವೆಬ್‌ಸೈಟ್‌ಗಳನ್ನು ಹರಿಬಿಡುತ್ತಿರುವುದು, ದುರಾಭ್ಯಾಸಗಳಿಗೆ ವ್ಯಸನಿಗಳನ್ನಾಗಿಸುತ್ತಿರುವುದು ಮೂಲ ಕಾರಣಗಳಾವೆ. ಸರ್ಕಾರಗಳು ಉದ್ಯೋಗ ಸೃಷ್ಟಿ ಮಾಡದಿರುವುದರ ಪರಿಣಾಮವಾಗಿ ಯುವಕರು ಇಂತಹ ಅನಾರೋಗ್ಯಕರ ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ” ಎಂದರು.
“ದೆಹಲಿಯ ನಿರ್ಭಯ ಪ್ರಕರಣದ ನಂತರ ನಡೆದ ಪ್ರಭಲ ಹೋರಾಟದ ಫಲವಾಗಿ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ವರ್ಮಾ ಆಯೋಗ ಹಲವಾರು ಶಿಫಾರಸುಗಳನ್ನು ಮಾಡಿದ್ದರೂ ಕೂಡ ಸರ್ಕಾರಗಳು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಕೈಗೊಂಡಿಲ್ಲ. ಜತೆಗೆ ಇಂದಿನ ನ್ಯಾಯಾಂಗ ವ್ಯವಸ್ಥೆಯಲ್ಲಿನ ಸಡಿಲತೆ, ನೂನ್ಯತೆಗಳಿಂದಾಗಿ ಎಷ್ಟೋ ಅಪರಾಧಗಳನ್ನು ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ; ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಸ್ಎಫ್ಐ ಆಗ್ರಹ
ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಮಧುಲತಾ ಗೌಡರ್, ಸಿಂಧು ಕೌದಿ, ರಣಜಿತ್ ದೂಪದ್, ದೇವಮ್ಮ ದೇವತ್ಕಲ್, ಪ್ರೀತಿ ಸಿಂಗಾಡಿ, ಸ್ಪೂರ್ತಿ ಚಿಕ್ಮಠ್, ಸಿಮೋನ್ ಸೂರ್ಯವಂಶಿ, ಶಾಂತೇಶ್ ಸೇರಿದಂತೆ ಬಹುತೇಕರು ಇದ್ದರು.