- ನೆಲಮಂಗಲದಲ್ಲಿ ದೇವೇಗೌಡರ ಪ್ರಚಾರ
- ಸಕ್ಕರೆ ನಾಡಲ್ಲಿ ಕಾಂಗ್ರೆಸ್ ನಾಯಕರು
ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 11 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಅಬ್ಬರದ ಜೋರಾಗಿದೆ.
ಒಂದೆಡೆ ಬಿಜೆಪಿಯು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಕರೆಸಿ ರೋಡ್ ಶೋ ಮೂಲಕ ಮತದಾರರನ್ನ ಸೆಳೆಯುತ್ತಿದ್ದರೇ ಮತ್ತೊಂದೆಡೆ ಕಾಂಗ್ರೆಸ್ ಸಹ ರಾಹುಲ್ ಗಾಂಧಿ , ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನ ಕರೆಸಿ ಕ್ಯಾಂಪೇನ್ ನಡೆಸುತ್ತಿದೆ.
ರಾಜ್ಯ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ನೈಸ್ ರಸ್ತೆಯಿಂದ ಸುಮನಹಳ್ಳಿ ಜಂಕ್ಷನ್ವರೆಗೆ ರೋಡ್ ಶೋ ನಡೆಸಲಿದ್ದಾರೆ.
ಈ ಮಧ್ಯೆ ಇಂದು ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅದ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಅವರು ಪ್ರಚಾರ ಕೈಗೊಂಡಿದ್ದಾರೆ. ಮಳವಳ್ಳಿ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರಸ್ವಾಮಿ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
ಮಂಡ್ಯದಲ್ಲಿನ ಪ್ರಚಾರದ ಬಳಿಕ ಕಾಂಗ್ರೆಸ್ ನಾಯಕರು ಸಕಲೇಶಪುರ ಹಾಗೂ ಅರಕಲಗೂಡು ಕ್ಷೇತ್ರಗಳಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುರಳಿ ಮೋಹನ್ ಪರವಾಗಿ ಕ್ಯಾಂಪೇನ್ ನಡೆಯಲಿದ್ದು, ನಂತರ ಅರಕಲಗೂಡು ಕ್ಷೇತ್ರದ ಅಭ್ಯರ್ಥಿ ಶ್ರೀಧರ್ ಗೌಡ ಪರ ಮತಯಾಚನೆ ಮಾಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೊಳೆನರಸೀಪುರ ಕ್ಷೇತ್ರ | ರೇವಣ್ಣರ ಗೆಲುವಿಗೆ ಅವರ `ಬಾಯಿ’ ತೊಡಕಾಗಲಿದೆಯೇ?
ಹರಪನಹಳ್ಳಿ ಕ್ಷೇತ್ರದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಲಿದ್ದು ಮಧ್ಯಾಹ್ನ 1.15ಕ್ಕೆ ಹರಪನಹಳ್ಳಿಗೆ ಆಗಮಿಸಲಿದ್ದಾರೆ. ಹರಪನಹಳ್ಳಿ ಪಟ್ಟಣದಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಹರಪನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಎನ್ ಕೊಟ್ರೇಶ್ ಪರ ಮತಯಾಚನೆ ಮಾಡಲಿದ್ದಾರೆ.
ಬೆಂಗಳೂರು ಗ್ರಾ. ಜಿಲ್ಲೆ ನೆಲಮಂಗಲದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಪ್ರಚಾರ ನಡೆಸಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶಾಸಕ ಶ್ರೀನಿವಾಸಮೂರ್ತಿ ಪರ ಮತಯಾಚನೆ ಮಾಡಲಿದ್ದಾರೆ.