- ಎರಡು ಗುಂಪುಗಳ ನಡುವೆ ಗಲಾಟೆ ವೇಳೆ ಕೊಲೆಯಾದ ವಿದ್ಯಾರ್ಥಿ
- ರೇವಾ ಕಾಲೇಜಿನಲ್ಲಿ ವಾರ್ಷಿಕೋತ್ಸವದ ವೇಳೆ ಈ ಘಟನೆ ನಡೆದಿದೆ
ಬೆಂಗಳೂರಿನ ರೇವಾ ಕಾಲೇಜಿನಲ್ಲಿ ಚಾಕುವಿನಿಂದ ಇರಿದು ಮೆಕ್ಯಾನಿಕಲ್ ವಿದ್ಯಾರ್ಥಿಯ ಬರ್ಬರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ನಡೆದ ಮೂರು ದಿನಗಳ ಬಳಿಕ ಇಬ್ಬರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಭಾಸ್ಕರ್ ಜೆಟ್ಟಿ (22) ಮೃತ ವಿದ್ಯಾರ್ಥಿ. ಈತ ಮೂಲತಃ ಗುಜರಾತ್ ರಾಜ್ಯದವನು. ನಗರದ ರೇವಾ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದನು. ಕಾಲೇಜು ಕಾರ್ಯಕ್ರಮದಲ್ಲಿ ಆರೋಪಿ ಭರತೇಶ್ ಮತ್ತು ಮೃತ ಭಾಸ್ಕರ್ ಜೆಟ್ಟಿ ನಡುವೆ ಗಲಾಟೆ ನಡೆದಿತ್ತು. ಪ್ರಕರಣ ಸಂಬಂಧ ಕಳೆದ ಭಾನುವಾರವೇ ಭರತೇಶ್‌ನನ್ನು ಬಂಧಿಸಲಾಗಿತ್ತು.
ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದ ಪ್ರಮುಖ ಆರೋಪಿ ಅನಿಲ್ ಮತ್ತು ಗಲಾಟೆ ಮಾಡಿದ್ದ ಮತ್ತೊಬ್ಬ ಆರೋಪಿ ಶೃಂಗ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ರೇವಾ ಕಾಲೇಜಿನಲ್ಲಿ ಪ್ರತಿ ವರ್ಷದ ಆಚರಣೆಯಂತೆ ಈ ವರ್ಷವೂ ಕಾಲೇಜು ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ವೇಳೆ, ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ. ಗಲಾಟೆ ವೇಳೆ ಕೊಲೆಯಾದ ವಿದ್ಯಾರ್ಥಿ ಕೂಡ ಒಂದು ಗುಂಪಿನಲ್ಲಿ ಭಾಗವಹಿಸಿದ್ದನು ಎಂದು ತಿಳಿದುಬಂದಿದೆ. ತೀವ್ರ ವಿಕೋಪಕ್ಕೆ ತಿರುಗಿದ ಗಲಾಟೆಯಲ್ಲಿ ಭಾಸ್ಕರ್ ಜೆಟ್ಟಿ ಎಂಬ ವಿದ್ಯಾರ್ಥಿಯನ್ನು ಭೀಕರವಾಗಿ ವಿದ್ಯಾರ್ಥಿಗಳು ಕೊಲೆ ಮಾಡಿದ್ದಾರೆ ಎಂದು ಮೊದಲ ಹಂತದಲ್ಲಿ ತಿಳಿದುಬಂದಿತ್ತು.
ಗಲಾಟೆ ನಡೆದು ವಿದ್ಯಾರ್ಥಿ ಸಾವನ್ನಪ್ಪಿದ ಬೆನ್ನಲ್ಲೇ ಕಾಲೇಜು ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಲೇಜು ಸಮಾರಂಭವನ್ನು ಸ್ಥಗಿತಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದರು. ಕೊಲೆಯ ಘಟನೆಯ ಬಗ್ಗೆ ಕಾಲೇಜು ಆವರಣದೊಳಗಿನ ಎಲ್ಲ ಸಿಸಿಟಿವಿ ಫೂಟೇಜ್‌ಗಳನ್ನು ಬಾಗಲೂರು ಪೊಲೀಸರು ಪರಿಶೀಲನೆ ಮಾಡಿದ್ದರು. ಅನುಮಾನಾಸ್ಪದ ಯುವಕರನ್ನು ವಶಕ್ಕೆ ಪಡೆದಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಪ್ರಧಾನಿ ಮೋದಿ: ಎಲ್ಲೆಲ್ಲಿ ಸಂಚಾರ ನಿರ್ಬಂಧ? ಇಲ್ಲಿದೆ ನೋಡಿ!
ಪೊಲೀಸ್ ವಿಚಾರಣೆಯ ಬಳಿಕ ಹೊರಬಂದ ಸತ್ಯ
ಕಾಲೇಜು ಕಾರ್ಯಕ್ರಮದಲ್ಲಿ ಆರೋಪಿ ಭರತೇಶ್ ಮತ್ತು ಮೃತ ಭಾಸ್ಕರ್ ಜೆಟ್ಟಿ ನಡುವೆ ಗಲಾಟೆ ನಡೆದಿತ್ತು. ಆದರೆ, ಆರೋಪಿ ಅನಿಲ್ ಎಂಬಾತನಿಗೂ ಈ ಗಲಾಟೆಗೂ ಸಂಬಂಧವಿಲ್ಲದಿದ್ದರೂ, ಜಗಳದಲ್ಲಿ ಹೆಚ್ಚಿನ ಜೋಶ್ ಬರಬೇಕು ಎಂದು ಇಂಜಿನಿಯರಿಂಗ್ ವಿದ್ಯಾರ್ಥಿ ಭರತ್ ಜೆಟ್ಟಿ ಎದೆಗೆ ಬಿಕಾಂ ಓದುತ್ತಿದ್ದ ಅನಿಲ್ ಎಂಬಾತ ಚಾಕುವನ್ನು ಚುಚ್ಚಿದ್ದಾನೆ.
ದುರದೃಷ್ಟಕರ ಸಂಗತಿ ಎಂದರೆ, ಯುವಕನ ಎದೆಗೆ ಚುಚ್ಚಿದ ಚಾಕು ಜೆಟ್ಟಿಯ ಎದೆಯೊಳಗೆ ಇಳಿದು, ತೀವ್ರ ರಕ್ತಸ್ರಾವವಾಗಿ ಭಾಸ್ಕರ್ ಕುಸಿದು ಬೀಳುತ್ತಿದ್ದಂತೆ, ಆತ ಸಾವನ್ನಪ್ಪಿದ್ದಾನೆ. ಈ ಘಟನೆಯ ಬೆನ್ನಲ್ಲೇ ಕೊಲೆ ಆರೋಪಿಗಳು ಕಾರಿನಲ್ಲಿ ಮೂಡಿಗೆರೆಗೆ ಪರಾರಿಯಾಗಿದ್ದಾರೆ. ಅರಣ್ಯದ ತಗ್ಗು ಪ್ರದೇಶವೊಂದರಲ್ಲಿ ತಲೆಮರೆಸಿಕೊಂಡಿದ್ದರು.
ಆರೋಪಿಗಳ ಸ್ನೇಹಿತನ ಫೋನ್ ಜಾಡು ಹಿಡಿದ ಬಾಗಲೂರು ಪೊಲೀಸರು, ಮೂಡಿಗೆರೆಯ ಅರಣ್ಯದ ತಗ್ಗು ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಅನಿಲ್ ಮತ್ತು ಶೃಂಗ ಎಂಬಾತನನ್ನು ಬಂಧಿಸಿದ್ದಾರೆ.