- ʼಬೆಂಗಳೂರಿಗೆ ಕುಡಿಯುವ ನೀರು ಕೊಟ್ಟಿದ್ದು ದೇವೇಗೌಡರುʼ
- ʼಕಾವೇರಿ ಅಚ್ಚುಕಟ್ಟು ರೈತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ʼ
ದೇಶದ ಬಹುತೇಕ ರಾಜ್ಯಗಳಲ್ಲಿ ಡಿಎಂಕೆ, ಟಿಆರ್‌ಎಸ್, ಎಎಪಿ, ಟಿಎಂಸಿ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಅಭಿವೃದ್ಧಿ ಮಾಡುತ್ತಿವೆ. ಹಾಸನ ಜಿಲ್ಲೆ ಹಾಗೂ ರಾಜ್ಯದಲ್ಲಿಯೂ ಅದೇ ರೀತಿಯ ಪ್ರಗತಿ ಕಾಣಲು ಜೆಡಿಎಸ್ ಬೆಂಬಲಿಸಿ ಎಂದು ಮತದಾರರಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಮನವಿ ಮಾಡಿದರು.
ಹಾಸನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಗುರುವಾರ ಜೆಡಿಎಸ್‌ನ ಪ್ರಣಾಳಿಕೆ ಬಿಡುಗಡೆ ಆಗಿದೆ. ಅದರಲ್ಲಿ ನಾವು ಏನು ಮಾಡುತ್ತೇವೆಂದು ಹೇಳಿದ್ದೇವೆ. ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿರೋ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಅಭಿವೃದ್ಧಿ ನಡೆಯುತ್ತಿದೆ. ಇಲ್ಲೂ ಹಾಗೆಯೇ ಆಗಬೇಕು ಎಂಬುದು ನಮ್ಮ ಕಾಳಜಿ” ಎಂದರು.
“ಚುನಾವಣೆ ಸಮೀಪಿಸಿದಾಗ ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರು ರಾಜ್ಯದತ್ತ ಬರುತ್ತಾರೆ. ಚುನಾವಣೆ ಮುಗಿದ ಬಳಿಕ ತಿರುಗಿಯೂ ನೋಡಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಕೊಡುಗೆ ಏನು? ಇದನ್ನು ನಮ್ಮ ಜನ ಅರ್ಥ ಮಾಡಿಕೊಳ್ಳಬೇಕು” ಎಂದರು.
“ಈಗ ಗ್ಯಾರಂಟಿ ಕಾರ್ಡ್ ಕೊಡುವ ಕಾಂಗ್ರೆಸ್ 5 ವರ್ಷ ಅಧಿಕಾರದಲ್ಲಿ ಇದ್ದಾಗ ಏಕೆ ಕೊಡಲಿಲ್ಲ? ಈಗ ಮನೆಗೆ ಹೋಗೋದು ಗ್ಯಾರಂಟಿ ಎಂದು ಕಾರ್ಡ್ ಕೊಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಈ ಸುದ್ದಿ ಓದಿದ್ದೀರಾ? ಹೊಳೆನರಸೀಪುರ ಕ್ಷೇತ್ರ | ರೇವಣ್ಣರ ಗೆಲುವಿಗೆ ಅವರ `ಬಾಯಿ’ ತೊಡಕಾಗಲಿದೆಯೇ?
“ಬೆಂಗಳೂರಿಗೆ ಕುಡಿಯುವ ನೀರು ಕೊಟ್ಟಿದ್ದು ದೇವೇಗೌಡರು. ಇವರು ಕೃಷ್ಣ ಬಿಟ್ಟು ಕಾವೇರಿ ಹಿಡಿದು ಕೊಂಡಿದ್ದಾರೆ. ಈಗ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಾವೇರಿ ಅಚ್ಚುಕಟ್ಟು ರೈತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್. ಬಿಜೆಪಿ-ಕಾಂಗ್ರೆಸ್ ಒಗ್ಗೂಡಿ ಅಡೆಸ್ಟ್ ಮೆಂಟ್ ರಾಜಕೀಯ ಮಾಡುತ್ತಿವೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ತೆಗೆಯಲು ಕಾಂಗ್ರೆಸ್-ಬಿಜೆಪಿ ಒಂದಾಗಿವೆ” ಎಂದು ದೂರಿದರು.
“ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ರಾಜ್ಯಾದ್ಯಂತ 123 ಸ್ಥಾನ ಗೆದ್ದು ಅಧಿಕಾರ ಹಿಡಿಯಬೇಕು. ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಆ ನಂತರ 2(ಬಿ) ಮೀಸಲಾತಿ ಮರು ಜಾರಿ ಮಾಡಲಾಗುವುದು” ಎಂದರು.