ಯಾದಗಿರಿ ನಗರ ಠಾಣೆಯ ಪಿಎಸ್ಐ ಪರಶುರಾಮ ಚಲವಾದಿಯವರ ಅನುಮಾನಾಸ್ಪದ ಸಾವಿಗೆ ಕಾರಣೀಕರ್ತರಾದ ಯಾದಗಿರಿಯ ಶಾಸಕ ಚನ್ನಾರೆಡ್ಡಿ ಪಾಟಿಲ ತುನ್ನೂರ ಹಾಗೂ ಅವರ ಮಗ ಪಂಪಣ್ಣಗೌಡನನ್ನು ಕೂಡಲೇ ಬಂಧಿಸಬೇಕು ಹಾಗೂ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವಂತೆ ಆಗ್ರಹಿಸಿ ಕಲಬುರಗಿಯಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಕಲಬುರಗಿ ಎರಡು ಸಂಘಟನೆಗಳು ಜಂಟಿಯಾಗಿ ಕಲಬುರಗಿ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, “ಯಾದಗಿರಿ ನಗರ ಪಿ.ಎಸ್.ಐ ಆದ ಪರಶುರಾಮ ಅವರ ಅನುಮಾನಸ್ಪದ ಸಾವಿನ ಪ್ರಕರಣವನ್ನು ಸಿಬಿಗೆ ವಹಿಸಬೇಕು. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟಿಲ ತುನ್ನೂರ ಮತ್ತು ಅವರ ಮಗನಾದ ಪಂಪಣ್ಣಗೌಡ ಇವರನ್ನು ಕೂಡಲೇ ಬಂಧಿಸಬೇಕು. ಪಿ.ಎಸ್.ಐ ಆದ ಪರಶುರಾಮ ಇವರ ಕುಟುಂಬಕ್ಕೆ ಸರ್ಕಾರದಿಂದ 10 ಎಕರೆ ಜಮೀನು ಮಂಜೂರಾತಿ ನೀಡಬೇಕು, ಪಿ.ಎಸ್.ಐ ಕುಟುಂಬಕ್ಕೆ ಸರ್ಕಾರದಿಂದ 5 ಕೋಟಿ ರೂಪಾಯಿ ಪರಿಹಾರವಾಗಿ ಕೊಡಬೇಕು, ಮೃತ ಪಿ.ಎಸ್.ಐ ರವರ ಧರ್ಮಪತ್ನಿಯ ವಿದ್ಯಾರ್ಹತೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗ ನೀಡಬೇಕು” ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಈ ಸಂದರ್ಭದಲ್ಲಿ ಮರಿಯಪ್ಪ ಹಳ್ಳಿ, ಮಲ್ಲಿಕಾರ್ಜುನ ಕ್ರಾಂತಿ, ಮರೆಪ್ಪ ಚಟ್ಟರಕರ್, ಅರ್ಜುನ ಭದ್ರೆ ,ಮರಪ್ಪ ಮೇತ್ರ, ಮಹಾಂತೇಶ ಬಡದಾಳ, ಶಿವಶರಣಪ್ಪ ಕುರ್ನಳ್ಳಿ, ಮಲ್ಲಿಕಾರ್ಜುನ ಖನ್ನಾ, ಜಯಕುಮಾರ ನೂಲಕರ, ಶಿವಕುಮಾರ ಸಂಗನ್, ಉದಯ ಕುಮಾರ ಸಾಗರ, ಸೂರ್ಯಕಾಂತ ಆಜಾದಪೂರ, ರಾಜಕುಮಾರ ನಿಂಬಾಳ, ಸಂತೋಷ ತೇಗನೂರ, ಶಿವಕುಮಾರ ಕೊರಳ್ಳಿ, ಸೈಬಣ್ಣ ಕೋಟನೂರಕರ್ ಇನ್ನಿತರರು ಉಪಸ್ಥಿತರಿದ್ದರು.


