ತುಮಕೂರು|ಜಯಮಂಗಲಿ ನದಿ ಪ್ರವಾಹ ಸಾಧ್ಯತೆ : ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಡಿಸಿ ಸೂಚನೆ

Date:

Advertisements

ಮಳೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಜಯಮಂಗಲಿ ನದಿ ಪ್ರವಾಹ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜನ-ಜಾನುವಾರುಗಳ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಹ ಉಂಟಾಗಬಹುದಾದ ಜಿಲ್ಲೆಯ ಮಧುಗಿರಿ ತಾಲ್ಲೂಕು ಕೋಡಗದಾಲ ಗ್ರಾಮ ಪಂಚಾಯತಿ ವ್ಯಾಪ್ತಿ ಚನ್ನಸಾಗರ, ನಂಜಾಪುರ ಗ್ರಾಮಗಳಿಗಿಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಹಾಗೂ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಕಳೆದ 2 ವರ್ಷಗಳ ಹಿಂದೆ ಭಾರಿ ಮಳೆಯಿಂದ ಉಂಟಾದ ಜಯಮಂಗಲಿ ನದಿ ಪ್ರವಾಹದಿಂದ ಚನ್ನಸಾಗರ ಗ್ರಾಮವು ಸಂಪೂರ್ಣ ಜಲಾವೃತವಾಗಿ ಜನ-ಜೀವನ ಅಸ್ತವ್ಯಸ್ತವಾಗಿತ್ತು. ಇದೇ ರೀತಿ ಧಾರಾಕಾರ ಮಳೆ ಮುಂದುವರೆದರೆ ನದಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ ಮಾಡಬೇಕೆಂದು ತಹಶೀಲ್ದಾರ್ ಮಂಜುನಾಥ್ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುತ್ತುರಾಜ್ ಅವರಿಗೆ ಸೂಚನೆ ನೀಡಿದರು.

ಮುಂಜಾಗೃತ ಕ್ರಮವಾಗಿ ಕೋಡಗದಾಲ ಪಂಚಾಯತಿ ವ್ಯಾಪ್ತಿಯ ಅಧಿಕಾರಿ/ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಚನ್ನಸಾಗರ ಗ್ರಾಮದಲ್ಲಿಯೇ ಮೊಕ್ಕಾಂ ಹೂಡಬೇಕು. ಪ್ರವಾಹ ಮುನ್ಸೂಚನೆ ಕಂಡು ಬಂದ ಕೂಡಲೇ ಸ್ಥಳೀಯ ಅಧಿಕಾರಿಗಳು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತುರ್ತಾಗಿ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.

Advertisements
WhatsApp Image 2024 08 20 at 11.20.06 PM

ಚನ್ನಸಾಗರ ಗ್ರಾಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸುತ್ತಿರುವುದು

ತೋಟದ ಮನೆಗಳಲ್ಲಿ ವಾಸಿಸುತ್ತಿರುವವರು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಮನವಿ ಮಾಡಿದರಲ್ಲದೆ, ಚನ್ನಸಾಗರ ಗ್ರಾಮದ ರಾಜಗಾಲುವೆಗಳಲ್ಲಿರುವ ಕಸ-ಕಡ್ಡಿಗಳನ್ನು ಕೂಡಲೇ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರಲ್ಲದೆ, ಮುಂದಿನ 2 ದಿನ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜಯಮಂಗಲಿ ನದಿ ನೀರು ಪ್ರವಾಹ ಹೆಚ್ಚಾಗಿ ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಪ್ರವಾಹ ಉಂಟಾದಲ್ಲಿ ಚೆನ್ನಸಾಗರ ಗ್ರಾಮದಲ್ಲಿರುವ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಶ್ರೀ ಜಯಮಂಗಲಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಬೇಕೆಂದು ಸೂಚನೆ ನೀಡಿದರು.

ಜಯಮಂಗಲಿ ನದಿ ಸುತ್ತ-ಮುತ್ತಲಿರುವ ನಾಗಮ್ಮನ ಪಾಳ್ಯ, ಚನ್ನಸಾಗರ, ನಂಜಾಪುರ ಗ್ರಾಮಗಳಲ್ಲಿರುವ ಜನ-ಜಾನುವಾರುಗಳ ಪಟ್ಟಿ ಮಾಡಬೇಕೆಂದು ನಿರ್ದೇಶಿಸಿದ ಅವರು, ಸದರಿ ಗ್ರಾಮಗಳಲ್ಲಿರುವ ಜಾನುವಾರುಗಳ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿದ್ಧನ ಗೌಡ ಮಾತನಾಡಿ, ನಾಗಮ್ಮನ ಪಾಳ್ಯ, ಚನ್ನಸಾಗರ, ನಂಜಾಪುರ ಗ್ರಾಮಗಳಲ್ಲಿ ಒಟ್ಟು 167 ಹಸು, 7 ಎಮ್ಮೆ, 43 ಕುರಿ, 43 ಮೇಕೆ, 15000 ಕೋಳಿ(ಪೌಲ್ಟ್ರಿ ಫಾರಂ)ಗಳಿದ್ದು, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಮಾಲೀಕರಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಪ್ರವಾಹ ಹೆಚ್ಚಾದ ನಂತರ ಸುರಕ್ಷಿತ ಕ್ರಮ ಕೈಗೊಳ್ಳುವುದಕ್ಕಿಂತ ಸಂಭವನೀಯ ಪ್ರವಾಹದ ಮುನ್ನವೇ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದು ಸೂಕ್ತ. ಕಾಳಜಿ ಕೇಂದ್ರದಲ್ಲಿ ಔಷಧಿ, ಆಹಾರ ದಾಸ್ತಾನಿಗೆ ಅಧಿಕಾರಿಗಳನ್ನು ನಿಯೋಜಿಸಿ ಜವಾಬ್ದಾರಿವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರಿಗೆ ಸೂಚನೆ ನೀಡಿದರು.

ಮಳೆ ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಯಲು ನೀರನ್ನು ಪರೀಕ್ಷೆಗೊಳಪಡಿಸಬೇಕು ಹಾಗೂ ಕುಡಿಯುವ ನೀರನ್ನು ಕ್ಲೋರಿನೇಷನ್ ಮಾಡಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಹದ ಮುನ್ನೆಚ್ಚರಿಕೆ ಮಾಹಿತಿಯನ್ನು ಡಂಗೂರ ಮೂಲಕ ಗ್ರಾಮಸ್ಥರಿಗೆ ತಿಳಿಸಬೇಕು ಹಾಗೂ ಸ್ವಚ್ಛತಾ ವಾಹನಗಳಲ್ಲಿ ಪ್ರಚುರಪಡಿಸಬೇಕು. ಪ್ರವಾಹದ ಮುನ್ನೆಚ್ಚರಿಕಾ ಸಂದೇಶ ಬಂದ ಕೂಡಲೇ ಜನರು ಮನೆಯಿಂದ ಹೊರ ಬಂದು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಬೇಕು. ಸ್ಥಳೀಯ ಪಶು ಚಿಕಿತ್ಸಾಲಯದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಬೇಕು. ಲೈಫ್ ಜಾಕೆಟ್, ರೋಪ್, ಬೋಟ್, ಮತ್ತಿತರ ಸುರಕ್ಷತಾ ಸಲಕರಣೆಗಳನ್ನು ಸಿದ್ಧವಿಟ್ಟುಕೊಳ್ಳಬೇಕು ಎಂದು ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ: ಗಿರೀಶ್ ಬಾಬು ರೆಡ್ಡಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ನೂತನ ಧ್ವಜಕಟ್ಟೆ ನಿರ್ಮಿಸಿದ ತಹಶೀಲ್ದಾರ್ ಗೆ ನಾಗರಿಕರ ಸನ್ಮಾನ

ಸ್ವಾಂತಂತ್ರ್ಯ ದಿನಾಚರಣೆ ಮುನ್ನ ನಡೆದ ಪೂರ್ವಭಾವಿ ಸಭೆಯಲ್ಲಿ ನೂತನ ಧ್ವಜಕಟ್ಟೆ...

ಕೊರಟಗೆರೆ | 79 ನೇ ಭಾರತ ಸ್ವಾತಂತ್ರೋತ್ಸವ : ಸಾಧಕರಿಗೆ ಗೌರವ ಸಮರ್ಪಣೆ

ಸ್ವತಂತ್ರ ಭಾರತದಲ್ಲಿ ಇಂದು ನಾವು ಬದುಕಿದ್ದೇವೆ ಎಂದರೆ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್...

ತುಮಕೂರು | ದೆಹಲಿಯಲ್ಲಿ ನನ್ನ ವಿರುದ್ಧ ಮೂರು ಜನರಿಂದ ಪಿತೂರಿ : ಮಾಜಿ ಸಚಿವ ಕೆ ಎನ್ ರಾಜಣ್ಣ

"ಕಳೆದ ಬುಧವಾರ ಸಚಿವನಾಗಿದ್ದೆ, ಇಂದು ಮಾಜಿ ಸಚಿವನಾಗಿದ್ದೇನೆ, ಆದರೆ ನನಗೆ ಯಾವುದೂ...

ಗುಬ್ಬಿ | ಎಂ.ಎಚ್.ಪಟ್ಟಣ ಗ್ರಾಪಂನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ 79 ನೇ...

Download Eedina App Android / iOS

X