ಪ್ರತಿಯೊಬ್ಬರೂ ಕೂಡ ಡಿ ದೇವರಾಜ ಅರಸು ಚಿಂತನೆ ಹಾಗೂ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಸಲಹೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾಮಾಜಿಕ ಪರಿವರ್ತನೆಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಸಾಮಾಜಿಕ ಬದಲಾವಣೆಯ ಮುಂದಾಳು ಡಿ ದೇವರಾಜ ಅರಸು ಅವರು ಕೇವಲ ಒಬ್ಬ ರಾಜಕಾರಣಿ ಅಲ್ಲ ಆದರ್ಶ ವ್ಯಕ್ತಿತ್ವವುಳ್ಳವರು. ಅವರ ಚಿಂತನೆಯಲ್ಲಿ, ಸಮಾಜವಾದಿ ತತ್ವ, ಏಳಿಗೆಪರ ಚಿಂತನೆ, ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಬದಲಾವಣೆಯ ದೃಷ್ಟಿಕೋನವನ್ನು ಇಟ್ಟುಕೊಂಡಿದ್ದವರು. ಹಾಗಾಗಿ ಅವರನ್ನು ತಿಳಿವಳಿಕೆಯುಳ್ಳ ಒಬ್ಬ ಮಹಾನ್ ನಾಯಕರೆಂದು ಕರೆಯಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಕರ್ನಾಟಕ ನಾಡಿನಲ್ಲಿ ಸುಮಾರು 8 ಏಡುಗಳ(ವರ್ಷ) ಕಾಲ ನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅರಸು ಅವರು, ಕೇವಲ ರಾಜಕೀಯ ಚಿಂತನೆಯಲ್ಲದೆ ನಾಡಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಏಳಿಗೆಯ ಹಮ್ಮುಗೆ ಹಾಕಿಕೊಟ್ಟಂತಹ ವ್ಯಕ್ತಿ” ಎಂದರು.
“ಮೈಸೂರು ನಾಡಿಗೆ ʼಕರ್ನಾಟಕʼ ಎಂದು ನಾಮಕರಣ ಮಾಡಿದವರು ಅರಸು. ಇಂದು ಕರ್ನಾಟಕ ನಾಡಿನ ಸಂಭ್ರಮ 50ರ ಗಡಿ ದಾಟಿದ ಉತ್ಸವದಲ್ಲಿ ನಾವಿದ್ದೇವೆ. 50 ಏಡುಗಳ ಹಿಂದೆ ಅವರು ಹಾಕಿಕೊಟ್ಟಿರುವ ಚಿಂತನೆಗಳು ಹಾಗೂ ಕೊಡುಗೆಗಳು ಇವತ್ತಿಗೂ ಪ್ರಸ್ತುತ. ಹಾಗಾಗಿ, ನಾವು ಅರಸು ಅವರನ್ನು ಇಂದಿಗೂ ನೆನೆಯುತ್ತೇವೆ” ಎಂದು ಸ್ಮರಿಸಿದರು.
“ದೇವರಾಜ ಅರಸು ಅವರ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕವಾಗಿವೆ. ಅಸಮಾನತೆ, ತಾರತಮ್ಯವನ್ನು ಹೋಗಲಾಡಿಸಿ ಸಾಮಾಜಿಕ ನ್ಯಾಯವನ್ನು ದೊರಕಿಸುವ ಮೂಲಕ ಅನೇಕ ಕೊಡುಗೆಯನ್ನು ನೀಡಿದ್ದಾರೆ” ಎಂದರು.
“ಭೂ ಸುಧಾರಣೆ ಕಾಯಿದೆಯು ಜಾರಿಗೆ ಬಂದಂಥ ಸನ್ನಿವೇಶದಲ್ಲಿ ಅದನ್ನು ಯಶಸ್ವಿಯಾಗಿ ಜಾರಿಗೊಳಿಸಿದಂತಹ ಏಕೈಕ ನಾಡೆಂದರೆ ಕರ್ನಾಟಕ. ಅಂದಿನ ಕಾಲಘಟ್ಟದಲ್ಲಿ ದೊಡ್ಡ ದೊಡ್ಡ ಭೂ ಹಿಡುವಳಿದಾರರು, ಜಮೀನ್ದಾರರು ಹಾಗೂ ಶ್ರೀಮಂತರ ಎದುರು ಹಾಕಿಕೊಂಡು ಭೂ ಮಾಲೀಕರ ಜಾಗದಲ್ಲಿ ಗೇಣಿದಾರರನ್ನು ಕೂರಿಸಿ ಬಡವರಿಗೆ ನೆರವು ನೀಡುವುದು ಅಷ್ಟು ಸುಲಭವಾದ ಮಾತಾಗಿರಲಿಲ್ಲ. ಅದನ್ನು ಯಶಸ್ವಿಯಾಗಿ ನಿಭಾಯಿಸಿ ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದರು” ಎಂದು ಸ್ಮರಿಸಿದರು.
“ಅರಸು ಅವರು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಬಹಳ ದುಡಿದಿದ್ದಾರೆ. ಹಿಂದುಳಿದ ವರ್ಗಗಳ ವಸತಿ ನಿಲಯಗಳನ್ನು ಮೊಟ್ಟ ಮೊದಲು ಇವರು ಸ್ಥಾಪನೆ ಮಾಡಿ ಕಲಿಕೆ ಹಾಗೂ ಕೆಲಸದಲ್ಲಿ ಮೀಸಲಾತಿ ಇರಬೇಕು. ಹಳ್ಳಿಗಾಡು ಪ್ರದೇಶದ ಮಕ್ಕಳು ಓದಿ ದೊಡ್ಡ ಸಾಧನೆ ಮಾಡಬೇಕೆಂಬ ನಿಟ್ಟಿನಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯವನ್ನು ಸ್ಥಾಪಿಸಿದರು. ಇದರಿಂದಾಗಿ ಇಂದಿಗೂ ಅವರ ಹೆಸರಿನಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ” ಎಂದರು.
“ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ. ಆಡಳಿತಗಳು ಕಲಿಕೆಗಾಗಿ ಕೊಟ್ಟಿರುವ ಹಮ್ಮುಗೆಗಳನ್ನು ಸದುಪಯೋಗ ಮಾಡಿಕೊಂಡು, ಒಳ್ಳೆಯ ಕನಸನ್ನು ಕಟ್ಟಿಕೊಂಡು ಉತ್ತಮ ಸಾಧನೆ ಮಾಡಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು|ಜಯಮಂಗಲಿ ನದಿ ಪ್ರವಾಹ ಸಾಧ್ಯತೆ : ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಡಿಸಿ ಸೂಚನೆ
“ಪ್ರತಿಯೊಬ್ಬರು ದೇವರಾಜ ಅರಸುರವರ ಬದುಕಿನ ಚರಿತ್ರೆಯನ್ನು ಓದಿ. ನಿಮ್ಮ ಕುಟುಂಬದವರಿಗೂ ಅವರ ಸಾಧನೆ ಹಾಗೂ ಕೊಡುಗೆಗಳನ್ನು ತಿಳಿಸಿ. ಅವರ ಆಚಾರ-ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು” ಎಂದರು.
“ಇಂದು ನಾನು ಈ ವೇದಿಕೆಯ ಮೇಲೆ ಜಿಲ್ಲಾಧಿಕಾರಿಯಾಗಿ ಮಾತನಾಡುತ್ತಿದ್ದೀನೆಂದರೆ ಅದಕ್ಕೆ ಬಹುಮುಖ್ಯ ಕಾರಣ ನಾನು ಓದಿ ಬೆಳೆದಂತಹ ಬಿಸಿಎಂ ಹಾಸ್ಟೆಲ್. ಏಕೆಂದರೆ ಒಂದು ವೇಳೆ ನನಗೆ ಬಿಸಿಎಂ ಹಾಸ್ಟೆಲ್‌ನಲ್ಲಿ ಸೀಟು ಸಿಗದಿದ್ದರೆ, ಕಲಿಯುವ ಅವಕಾಶ ಇರಲಿಲ್ಲವಾಗಿದ್ದರೆ, ನಾನು ಹಳ್ಳಿಯಿಂದ ಬಂದು ನಗರದಲ್ಲಿ ಓದಲು ಅನುವಾಗುತ್ತಿರಲಿಲ್ಲ. ಇಡೀ ನನ್ನ ಕಲಿಕೆಯನ್ನು ನಾನು ಬಿಸಿಎಂ ಹಾಸ್ಟೆಲ್ಲಿನಲ್ಲಿ ಪಡೆದಿದ್ದೇನೆ. ಈ ಹಾಸ್ಟೆಲ್ ಕೇವಲ ಒಂದು ಕಟ್ಟಡವೆಂದು ನಾನು ನೋಡುವುದಿಲ್ಲ. ಅದೊಂದು ʼಜ್ಞಾನದ ದೇಗುಲʼವೆಂದೇ ಭಾವಿಸುತ್ತಿದ್ದೆ” ಎಂದರು.