ಕಾಂಗ್ರೆಸ್‌-ಬಿಜೆಪಿ ವಾಕ್ಸಮರ: ರಾಷ್ಟ್ರ ಮತ್ತು ರಾಜ್ಯ ನಾಯಕರ ಪ್ರಚಾರ ನಿಷೇಧಕ್ಕೆ ಒತ್ತಾಯ

Date:

Advertisements
ಮೋದಿಯನ್ನು ವಿಷಸರ್ಪ ಎಂದಿದ್ದ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಹೇಳಿಕೆಯನ್ನು ದಾಳವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿತ್ತು. ಇದೇ ಹೊತ್ತಿನಲ್ಲಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ಬಿಜೆಪಿ ಶಾಸಕ ಯತ್ನಾಳ್‌ ವಿಷಕನ್ಯೆ ಎಂದು ಕರೆದಿದ್ದು, ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. 

ಕರ್ನಾಟಕದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿದೆ. ಉಭಯ ಪಕ್ಷಗಳು ತಮ್ಮ ರಾಷ್ಟ್ರ ನಾಯಕರು ಮತ್ತು ಇತರ ರಾಜ್ಯಗಳ ಸ್ಟಾರ್‌ ಪ್ರಚಾರಕನ್ನು ಪ್ರಚಾರಕ್ಕಾಗಿ ರಾಜ್ಯಕ್ಕೆ ಕರೆಸುತ್ತಿವೆ. ಈ ನಡುವೆ, ಇದೇ ಪಕ್ಷಗಳು ಹೊರ ರಾಜ್ಯಗಳ ನಾಯಕರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಬೇಕೆಂದು ಚುನಾವಣಾ ಆಯೋಗದ ಮೊರೆ ಹೋಗಿವೆ.

ಮೋದಿ ಅವರನ್ನು ವಿಷಸರ್ಪವೆಂದಿರುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಮತ್ತು ಅವರು ಪ್ರಚಾರ ಮಾಡದಂತೆ ನಿರ್ಬಂಧಿಸಬೇಕೆಂದು ಬಿಜೆಪಿ ಕೋರಿದೆ. ಇತ್ತ, ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ ನೀಡಿ, ಕೋಮು ಪ್ರಚೋದನೆ ನೀಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ನಿರ್ಬಂಧ ಹೇರಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

ಕೇಂದ್ರ ಸಚಿವ ಭೂಪೇಂದರ್ ಯಾದವ್ ನೇತೃತ್ವದ ಬಿಜೆಪಿ ನಿಯೋಗವು ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ, ಖರ್ಗೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಡೆಯಬೇಕು ಎಂದು ಒತ್ತಾಯಿಸಿದೆ.

Advertisements

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, “ಖರ್ಗೆ ಅವರ ಹೇಳಿಕೆ ಕೇವಲ ಅಚಾನಕ್‌ ಆಗಿ ಹೇಳಿರುವುದಲ್ಲ. ಅದು, ಕಾಂಗ್ರೆಸ್‌ನ ದ್ವೇಷ ರಾಜಕೀಯದ ಭಾಗವಾಗಿದೆ. ಮೋದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಖರ್ಗೆ ವಿರುದ್ಧ ಮಾನನಷ್ಟಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 499 ಮತ್ತು 500 ಹಾಗೂ ಉದ್ದೇಶಪೂರ್ವಕ ಅವಮಾನ ಮತ್ತು ಪ್ರಚೋದನೆಗೆ ಸಂಬಂಧಿಸಿದ ಸೆಕ್ಷನ್ 504ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಒತ್ತಾಯಿದ್ದೇವೆ” ಎಂದಿದ್ದಾರೆ.

“ಭಾರತೀಯ ಸಮಾಜದಲ್ಲಿ ಯಾರನ್ನಾದರೂ ವಿಷಪೂರಿತ ಹಾವಿಗೆ ಹೋಲಿಸುವುದೆಂದರೆ, ಆ ವ್ಯಕ್ತಿಯನ್ನು ‘ಶತ್ರು, ನಂಬಲಾಗದ ವಿಶ್ವಾಸದ್ರೋಹಿ, ವಿಶ್ವಾಸಘಾತುಕ ಮತ್ತು ವಂಚಕ’ ಎಂದು ಬಿಂಬಿಸಿದಂತೆ. ಖರ್ಗೆ ಅವರನ್ನು ಕರ್ನಾಟಕ ಚುನಾವಣೆಗಳಲ್ಲಿ ಪ್ರಚಾರ ಮಾಡದಂತೆ ನಿರ್ಬಂಧಿಸಬೇಕು ಮತ್ತು ಇಂತಹ ಕಟುವಾದ ಪ್ರಚಾರವನ್ನು ತಡೆಗಟ್ಟಬೇಕು” ಎಂದು ಬಿಜೆಪಿ ಒತ್ತಾಯಿಸಿದೆ.

ಮೋದಿ ಕುರಿತ ಹೇಳಿಕೆ ಬಗ್ಗೆ ಆಕ್ರೋಶ ಭುಗಿಲೆದ್ದ ಬಳಿಕ, ಖರ್ಗೆ ಅವರು “ತಮ್ಮ ಹೇಳಿಕೆಗಳು ಪ್ರಧಾನಿಯನ್ನು ಉದ್ದೇಶಿಸಿಲ್ಲ. ಆದರೆ, ಆಡಳಿತಾರೂಢ ಬಿಜೆಪಿ ಮತ್ತು ಅದರ ಸಿದ್ಧಾಂತವನ್ನು ಗುರಿಯಾಗಿಸಿಕೊಂಡಿವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಮೀಕ್ಷಾ ವರದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಖರ್ಗೆ ಅವರ ಹೇಳಿಕೆಗೆ ಪ್ರತಿಯಾಗಿ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ‘ವಿಷಕನ್ಯೆ’ ಎಂದು ಕರೆದು, ವಿವಾದ ಸೃಷ್ಟಿಸಿದ್ದಾರೆ.

‘ವಿಷಕನ್ಯೆ’ ಹೇಳಿಕೆ ನೀಡಿರುವ ಯತ್ನಾಳ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಒತ್ತಾಯಿಸಿದೆ. “ಶಾ ಮತ್ತು ಆದಿತ್ಯನಾಥ್ ಅವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ‘ಸುಳ್ಳು, ಪಕ್ಷಪಾತ ಮತ್ತು ಕೋಮುವಾದಿ’ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೋಮು ಸೌಹಾರ್ದತೆಯ ವಾತಾವರಣವನ್ನು ಕದಡಲು ಯತ್ನಿಸುತ್ತಿದ್ದಾರೆ. ಅವರು ರಾಜ್ಯದಲ್ಲಿ ಪ್ರಚಾರ ಮಾಡದಂತೆ ನಿಷೇಧಿಸಬೇಕು” ಎಂದು ಚುನಾವಣಾ ಆಯೋಗವನ್ನು ಕಾಂಗ್ರೆಸ್‌ ಒತ್ತಾಯಿಸಿದೆ.

“ಚುನಾವಣೆ ಮುಗಿಯುವವರೆಗೆ ಎಲ್ಲ ಪ್ರಚಾರ ಚಟುವಟಿಕೆಗಳಿಂದ ಅಮಿತ್ ಶಾ ಅವರನ್ನು ನಿರ್ಬಂಧಿಸಬೇಕು. ಅವರು ಆಕ್ಷೇಪಾರ್ಹ ಹೇಳಿಕೆ ನೀಡಿರುವ ವಿಡಿಯೋಗಳ ಪ್ರಚಾರವನ್ನು ತಡೆಯಬೇಕು” ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ಬೆಂಗಳೂರಿನ ಚುನಾವಣಾ ಆಯೋಗದ ಕಚೇರಿ ಹೊರಗೆ ಮಾತನಾಡಿದ ಸುರ್ಜೇವಾಲಾ, “ನಾವು ಆಯೋಗದೊಂದಿಗೆ ಮಹತ್ವದ ಸಭೆ ನಡೆಸಿದ್ದೇವೆ. ವಿಶೇಷವಾಗಿ ಬಿಜೆಪಿಯ ಉನ್ನತ ನಾಯಕತ್ವದಿಂದ ಬರುವ ಅತ್ಯಂತ ಆಕ್ಷೇಪಾರ್ಹ, ಪಕ್ಷಪಾತ, ಕೋಮುವಾದಿ ಮತ್ತು ಸುಳ್ಳು ಹೇಳಿಕೆಗಳನ್ನು ನೀಡುವವರ ಬಗ್ಗೆ ದೂರು ನೀಡಿದ್ದೇವೆ. ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಅಂತಹ ವ್ಯಕ್ತಿಗಳ ಪ್ರಚಾರವನ್ನು ನಿಷೇಧಿಸುವಂತೆ ಮನವಿ ಮಾಡಿದ್ದೇವೆ” ಎಂದಿದ್ದಾರೆ.

“ಚುನಾವಣಾ ಸೋಲಿನ ಭಯದಿಂದ ಮತ್ತು ಮತದಾರರನ್ನು ತಮ್ಮತ್ತ ಸೆಳೆಯುವ ಉದ್ದೇಶದಿಂದ ಅಮಿತ್ ಶಾ ಅವರು ಮತದಾರರ ಮುಂದೆ ಸುಳ್ಳು ಮತ್ತು ಆಧಾರರಹಿತ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ನೀಡುತ್ತಿದ್ದಾರೆ. ಆ ಮೂಲಕ, ರಾಜ್ಯದ ಕಾನೂನು ಪಾಲಿಸುವ ಮತದಾರರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ. ಅವರ ವಿವಾದಾತ್ಮಕ ಹೇಳಿಕೆಯ ವಿಡಿಯೋವನ್ನು ಬಿಜೆಪಿ ಹೆಚ್ಚಾಗಿ ಪ್ರಸಾರ ಮಾಡುತ್ತಿದೆ” ಎಂದು ಕಾಂಗ್ರೆಸ್‌ ದೂರಿದೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಮೀಕ್ಷೆ | ಬಿಜೆಪಿಗೆ ನಿದ್ರಾಭಂಗ; ಕಾಂಗ್ರೆಸ್‌ನಲ್ಲಿ ಹೊಸ ಹುಮ್ಮಸ್ಸು

“ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಬಂಧನದಲ್ಲಿದ್ದ ಎಲ್ಲಾ ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದರು. ಬಿಜೆಪಿ ಸರ್ಕಾರವೇ ಅವರನ್ನು ಪತ್ತೆ ಮಾಡಿ ಮತ್ತೆ ಜೈಲಿಗಟ್ಟಿತು” ಎಂದು ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು.

ಏಪ್ರಿಲ್ 26 ರಂದು ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, “ಕರ್ನಾಟಕದಲ್ಲಿ ಪಿಎಫ್‌ಐನಂತಹ ನಿಷೇಧಿತ ಸಂಘಟನೆಗಳನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ. ಆ ಮೂಲಕ ಒಡೆದು ಆಳುವ ರಾಜಕೀಯ ಮಾಡುತ್ತಿದೆ” ಎಂದು ಆರೋಪಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X