ಅತ್ಯಾಚಾರಿ ಸಮಾಜದಲ್ಲಿ ಮಹಿಳೆಯರ ಅಸ್ತಿತ್ವ

Date:

Advertisements
ಭಾರತವು ಸ್ವಾತಂತ್ರ್ಯಗೊಂಡು 77 ವರ್ಷಗಳು ಘಟಿಸಿದ ನಂತರವೂ, ಮಹಿಳೆಯರ ಹಕ್ಕು ಇನ್ನೂ ಪುಸ್ತಕದ ಹಾಳೆಗಳಲ್ಲಿಯೇ ಹೆಚ್ಚು ಭದ್ರವಾಗಿವೆ. ಆ ಹಕ್ಕುಗಳನ್ನು ವ್ಯವಸ್ಥೆಯೊಳಗೆ ಜಾರಿ ಮಾಡುವುದಕ್ಕಾಗಿ ಹಲವಾರು ಹೋರಾಟಗಳು ನಡೆದಿವೆ. ನಡೆಯುತ್ತಿವೆ. ಇವುಗಳ ನಡುವೆಯೇ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು ಮಹಿಳೆಯರ ರಕ್ಷಣೆ ಪ್ರಶ್ನೆಯನ್ನು ಮುನ್ನೆಲೆಗೆ ತಂದಿವೆ...

ಆರ್.ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯೆಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಪ್ರತಿಭಟನೆಗಳು ದೇಶಾದ್ಯಂತ ಭುಗಿಲೇಳುತ್ತಿವೆ. ದುರ್ಘಟನೆಯು ನಿಧಾನವಾಗಿ ಔದ್ಯೋಗಿಕ, ಜಾತಿ ಮತ್ತು ವರ್ಗದ ಆಧಾರದಲ್ಲಿ ಜನರು ಸಂಘಟಿತರಾಗುವಂತೆ ಮಾಡಿದೆ. ದೇಶಾದ್ಯಂತ ವೈದ್ಯರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ನಡೆದ ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ, ಛತ್ತೀಸ್‌ಗಢದಲ್ಲಿ ಅತ್ಯಾಚಾರಗಳು ನಡೆದಿದ್ದು, ಎಲ್ಲ ವರ್ಗಗಳ ಜನರು ಈ ಕೃತ್ಯಗಳನ್ನು ಖಂಡಿಸಿ, ಹೋರಾಟಕ್ಕಿಳಿದಿದ್ದಾರೆ. ಮಹಿಳಾ ರಕ್ಷಣೆಯ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.

ಒಂದೆಡೆ, ರಾಜಕೀಯದಲ್ಲಿ ಮಹಿಳಾ ಮೀಸಲಾತಿಯನ್ನು ತರುತ್ತೇವೆಂದು ಮಸೂದೆ ಅಂಗೀಕರಿಸಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮಹಿಳೆಯರ ಮೂಗಿಗೆ ತುಪ್ಪ ಸವರಿದೆ. ‘ಬೇಟಿ ಬಚಾವೊ – ಬೇಟಿ ಪಡಾವೋ’ ಘೋಷಣೆ ಮುಂದಿಟ್ಟು, ‘ಅತ್ಯಾಚಾರಿ ಕೋ ಸಪೋರ್ಟ್‌ ಕರೋ – ಅತ್ಯಾಚಾರಿ ಕೋ ಸೇಫ್‌ ಕರೋ’ ಎಂಬಂತೆ ವರ್ತಿಸುತ್ತಿದೆ. ಮಹಿಳಾ ಕುಸ್ತಿಪಟುಗಳು ತಮಗೆ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ, ಪ್ರತಿಭಟನೆ ನಡೆಸಿದರು. ಆಗ, ಮೋದಿ ಸರ್ಕಾರ ದೆಹಲಿಯ ಬೀದಿಗಳಲ್ಲಿ ಕುಸ್ತಿಪಟುಗಳನ್ನು ಎಳೆದಾಡಿ ಅವಮಾನ ಮಾಡಿತು. ಕಾಶ್ಮೀರದ ಕಥುವಾದಲ್ಲಿ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನ ಪರವಾಗಿ ಬಿಜೆಪಿ ಶಾಸಕರು ಸೇರಿದಂತೆ ನಾಯಕರು ಪ್ರತಿಭಟನೆ ನಡೆಸಿದ್ದರು. ಬಿಲ್ಕೀಸ್ ಬಾನೋ ಪ್ರಕರಣದಲ್ಲಿ ಕಾಮುಕರನ್ನು ಜೈಲಿನಿಂದ ಹೊರಬಿಟ್ಟಾಗ, ಬಿಜೆಪಿಗರೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಉನ್ನಾವೋದಲ್ಲಿ ಬಿಜೆಪಿ ಶಾಸಕನೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಆಡಳಿತಾರೂಢ ಬಿಜೆಪಿಯ ಮುಖಂಡರು, ಕಾರ್ಯಕರ್ತರೇ ಭಾಗಿಯಾಗಿರುವ ಇಂತಹ ಹಲವಾರು ಪ್ರಕರಣಗಳು ದೇಶದಲ್ಲಿವೆ.

‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಅಧಿಕಾರದಲ್ಲಿರುವ ಬಿಜೆಪಿಯೇ ಅತ್ಯಾಚಾರಿಗಳನ್ನು ಬೆಳೆಸುತ್ತಿರುವಾಗ, ಅತ್ಯಾಚಾರಿಗಳನ್ನು ಬೆಂಬಲಿಸುತ್ತಿರುವಾಗ, ಮಹಿಳೆಯರ ರಕ್ಷಣೆ ಪ್ರಶ್ನೆಯಾಗಿ ಎದುರಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ, 2022ರಲ್ಲಿ ಭಾರತದಲ್ಲಿ 31,516 ಅತ್ಯಾಚಾರ ಪ್ರಕರಣಗಳು ಮತ್ತು 4,45,256 ದೌರ್ಜನ್ಯ ಪ್ರಕರಣಗಳು ನಡೆದಿವೆ. ಅಂದರೆ, ದಿನಕ್ಕೆ ಸರಾಸರಿ 86 ಅತ್ಯಾಚಾರ ಮತ್ತು ಪ್ರತಿ ಗಂಟೆಗೆ ಸರಾಸರಿ 49 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದಿವೆ. ಬೆಂಗಳೂರಿನಲ್ಲಿಯೇ ಕಳೆದ ಮೂರು ವರ್ಷಗಳಲ್ಲಿ 444 ಅತ್ಯಾಚಾರ ಮತ್ತು 2,439 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಇವಲ್ಲದೆ, ವರದಕ್ಷಿಣೆ ಕಿರುಕುಳ, ಅಪಹರಣ, ಕಳ್ಳಸಾಗಣೆ, ಕೌಟುಂಬಿಕ ದೌರ್ಜನ್ಯಗಳು ಸೇರಿದಂತೆ ನಾನಾ ರೀತಿಯಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

Advertisements
image 9 8

ಈ ಪ್ರಮಾಣದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ, ಅಪರಾಧಿಗಳಿಗೆ ಶಿಕ್ಷೆಯಾಗಿರುವ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನಿಗೆ ತಿದ್ದುಪಡಿ ತರುವಂತೆ ಕಿಚ್ಚು ಹಚ್ಚಿದ 2012ರಲ್ಲಿ ನಡೆದ ನಿರ್ಭಯಾ ಪ್ರಕರಣದಲ್ಲಿಯೂ ಕೂಡ ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗುವುದಕ್ಕೆ ಬರೋಬ್ಬರಿ 8 ವರ್ಷಗಳೇ ಬೇಕಾಯಿತು.

ನಿರ್ಭಯಾ ಪ್ರಕರಣದ ವಿರುದ್ಧ ದೇಶಾದ್ಯಂತ ನಡೆದ ಹೋರಾಟಗಳ ಫಲವಾಗಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ಕೇಂದ್ರ ಸರ್ಕಾರ, 2013ರ ಮಾರ್ಚ್ 21ರಂದು ನಿರ್ಭಯಾ ಕಾಯ್ದೆಯೆಂದೇ ಹೆಸರಾದ ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ-2013ರನ್ನು ಜಾರಿಗೆ ತಂದಿತು. ಈ ಕಾಯ್ದೆಯಡಿ ಮಹಿಳೆಯರ ಮೇಲಿನ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುತ್ತೇವೆ ಮತ್ತು ಅಪರಾಧಗಳನ್ನು ತಡೆಯುತ್ತೇವೆಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಕಾಯ್ದೆಯ ಉದ್ದೇಶಗಳು ಇಂದಿಗೂ ಈಡೇರಿಲ್ಲ. ಈಗಲೂ ಮಹಿಳೆಯರ ಮೇಲೆ ಪೈಶಾಚಿತ ಕೃತ್ಯಗಳು ನಡೆಯುತ್ತಲೇ ಇವೆ. ಈ ಕಠಿಣ ಕಾಯ್ದೆಯ ಜೊತೆಗೆ, ಮೋದಿ ಅವರ ‘ಬೇಟಿ ಬಚಾವೋ – ಬೇಟಿ ಪಡಾವೋ’ ಕೂಡ ಫಲ ನೀಡುತ್ತಿಲ್ಲ. ಇದೆಲ್ಲವೂ ಮೋದಿ ಅವರು ನಿಜಕ್ಕೂ ಹೆಣ್ಣುಮಕ್ಕಳ ರಕ್ಷಣೆಗೆ ಒತ್ತುಕೊಡುತ್ತಿದ್ದಾರೆಯೇ, ಅಥವಾ ಕೆಂಪುಕೋಟೆಯ ಮೇಲೆ ನಿಂತು ಹೇಳುವ ಘೋಷಣೆಗಷ್ಟೇ ಸೀಮಿತವಾಗಿದ್ದಾರೆಯೇ ಎಂಬುದಕ್ಕೆ ಕನ್ನಡಿ ಹಿಡಿದಿವೆ.

ಕಾನೂನು ಚೌಕಟ್ಟಿನಲ್ಲಿ ಲೈಂಗಿಕ ದೌರ್ಜನ್ಯವನ್ನು ಎದುರಿಸುವುದು ಮತ್ತು ಮಹಿಳಾ ಹಕ್ಕುಗಳು ಕಾಗದದ ಮೇಲೆ ನೋಡಲು ಮಾತ್ರ ಸಿಗುವಂತ ಪರಿಸ್ಥಿತಿ ಈಗ ಭಾರತದಲ್ಲಿದೆ. ಮನುವಾದವನ್ನೇ ಜೀವಾಳವಾಗಿಸಿಕೊಂಡಿರುವ ಬಿಜೆಪಿ-ಆರ್‌ಎಸ್‌ಎಸ್, ಮಹಿಳೆಯರು ಭೋಗದ ವಸ್ತುವೂ, ಮಕ್ಕಳನ್ನು ಹೆರುವ ಯಂತ್ರವೂ ಆಗಿರಬೇಕು. ಗಂಡಿಗೆ ಅಧೀನಳಾಗಿರಬೇಕು ಎಂದೇ ಬಯಸುತ್ತವೆ. ಮಹಿಳೆಯರನ್ನು ಜಾತಿ-ಕೋಮು ಗಲಭೆಗಳಲ್ಲಿಯೂ ಅತ್ಯಾಚಾರವನ್ನು ಅಸ್ತ್ರವನ್ನಾಗಿ ಮಹಿಳೆಯರ ಮೇಲೆ ಬಳಸುವ ಪೈಶಾಚಿಕ ಮನೋವೃತ್ತಿ ಜಗತ್ತಿನಲ್ಲಿ ಹರಡಿಕೊಂಡಿದೆ.

ಭಾರತದಲ್ಲಿ ಅತ್ಯಾಚಾರವು ನಿರಂತರವಾಗಿ ನಡೆಯುತ್ತಿರುವ ಕೃತ್ಯಗಳಲ್ಲಿ ಒಂದಾಗಿದೆ. ಎಲ್ಲ ಅಂಕಿ-ಅಂಶಗಳ ಆಚೆಗೂ 99% ಲೈಂಗಿಕ ದೌರ್ಜನ್ಯ ಪ್ರಕರಣಗಳು ಭಾರತದಲ್ಲಿ ವರದಿಯಾಗುವುದಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ವೈವಾಹಿಕ ಅತ್ಯಾಚಾರ ಮತ್ತು ದೌರ್ಜನ್ಯವನ್ನು ವಿಶ್ಲೇಷಣೆಯಿಂದ ತೆಗೆದುಹಾಕಿದರೂ, ಸುಮಾರು 85% ಲೈಂಗಿಕ ದೌರ್ಜನ್ಯಗಳು ವರದಿಯಾಗುವುದಿಲ್ಲ. ಈ ಪ್ರಕರಣಗಳಲ್ಲಿ ಹೆಚ್ಚಿನವು ಕುಟುಂಬ ಸದಸ್ಯರು ಅಥವಾ ಪರಿಚಯಸ್ಥರಿಂದಲೇ ಎಸಗಲ್ಪಟ್ಟ ಕೃತ್ಯಗಳಾಗಿರುತ್ತವೆ.

ಈ ಸಂದರ್ಭಗಳಲ್ಲಿ, ಪ್ರಕರಣಗಳನ್ನು ಸಾಮಾನ್ಯವಾಗಿ ಸಮುದಾಯದಲ್ಲಿಯೇ ನಿರ್ವಹಿಸಲಾಗುತ್ತದೆ. ನ್ಯಾಯವು ಕುಟುಂಬ ಮತ್ತು ಸಮುದಾಯದ ಗೌರವದ ಪರಿಗಣನೆಯ ಮೇಲೆ ಮುಗಿದುಹೋಗುತ್ತದೆ. ಇನ್ನು, ವರದಿಯಾಗುವ ಅಪರೂಪದ ಸಂದರ್ಭಗಳಲ್ಲಿಯೂ ಹಲವು ಪ್ರಕರಣಗಳು, ಸಮುದಾಯದ ನೇತೃತ್ವದ ಮಾತುಕತೆಗಳೊಂದಿಗೆ, ಅತ್ಯಾಚಾರಿ ಮತ್ತು ಸಂತ್ರಸ್ತೆಯರ ನಡುವಿನ ವಿವಾಹದೊಂದಿಗೆ ಮುಚ್ಚಿಹೋಗುತ್ತವೆ. ಕೆಲವು ಮಾತ್ರ, ನ್ಯಾಯಾಲಯದಲ್ಲಿ ಪೂರ್ಣ ವಿಚಾರಣೆಗೆ ಒಳಪಡುತ್ತವೆ. ಅದರಲ್ಲಿಯೂ ನ್ಯಾಯ ಹೊರಬರುವ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರವೇ.

image 9

ಇಂತಹ ನಿರ್ಬಂಧಿತ ಚೌಕಟ್ಟಿನ ಸಂದರ್ಭದಲ್ಲಿ ಆರ್‌.ಜಿ ಕರ್‌ ಆಸ್ಪತ್ರೆಯಲ್ಲಿ ನಡೆದ ಪ್ರಕರಣವು ಮಹಿಳೆಯರ ಸುರಕ್ಷತೆಯ ಬಗೆಗಿನ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಆದಾಗ್ಯೂ, ಸರ್ಕಾರಗಳ ಮೌನ ಮತ್ತು ಪ್ರಬಲ ರಾಜಕೀಯ ಸಿದ್ಧಾಂತಗಳು ಸಾರ್ವಜನಿಕ ವಲಯದಲ್ಲಿ ಲಿಂಗ ಆಧಾರಿತ ಹಿಂಸೆಯ ಬಗ್ಗೆ ಚರ್ಚಿಸುವ ವಿಧಾನವನ್ನೂ ಸಹ ರೂಪಿಸುತ್ತವೆ. ಉದಾಹರಣೆಗೆ, ಬಿಜೆಪಿ-ಆರ್‌ಎಸ್‌ಎಸ್‌ ಹಿಂದುತ್ವವನ್ನು ಮುಂದಿಟ್ಟು ‘ಲವ್ ಜಿಹಾದ್’ನಂತಹ ಬೊಗಳೆ ಪ್ರತಿಪಾದನೆಯನ್ನು ಮುನ್ನೆಲೆಗೆ ತಂದಿವೆ. ಅತ್ಯಾಚಾರ ಮತ್ತು ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು, ಕೃತ್ಯಗಳನ್ನೂ ರಾಜಕೀಯವಾಗಿ ಹೈಜಾಕ್ ಮಾಡಿಕೊಂಡಿವೆ. ಇದು ಹಿಂದೂ ಮಹಿಳೆಯರಿಗೆ ಕೇವಲ ಮುಸ್ಲಿಂ ಪುರುಷರಿಂದ ಮಾತ್ರ ಅಪಾಯವಿದೆ ಎಂದು ಬಣ್ಣಿಸುತ್ತದೆ. ಹಿಂದು ಕಾಮುಕರೇ ಹಿಂದು ಮಹಿಳೆಯರ ಮೇಲೆ ಎಸಗುವ ಕೃತ್ಯಗಳಲ್ಲಿ ಸಂಘಪರಿವಾರವು ಮೌನವಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ, ಹುಬ್ಬಳ್ಳಿಯಲ್ಲಿ ನಡೆದ ಎರಡು ಕೊಲೆಗಳು. ನೇಹಾ ಹಿರೇಮಠ್ ಕೊಲೆ ಪ್ರಕರಣದಲ್ಲಿ ಆರೋಪಿ ಮುಸ್ಲಿಮನಾಗಿದ್ದಕ್ಕೆ ಬಿಜೆಪಿಗರು ಅಬ್ಬರದ ಹೋರಾಟ ನಡೆಸಿದ್ದರು. ಅದೇ, ಅಂಜಲಿ ಅಂಬಿಗೇರ ಪ್ರಕರಣದಲ್ಲಿ ಆರೋಪಿ ಹಿಂದುವಾಗಿದ್ದಕ್ಕೆ ಬಿಜೆಪಿ ತುಟಿಬಿಚ್ಚಲಿಲ್ಲ.

ಇಂತಹ ಕೋಮುವಾದಿ ರಾಜಕಾರಣಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯಗಳು, ಅತ್ಯಾಚಾರಗಳು ಬಳಕೆಯಾಗುತ್ತಿವೆ. ಭಾರತದಲ್ಲಿ ಮಹಿಳೆಯರು ರಾಜಕೀಯಕ್ಕೆ ದಾಳವಾಗಿ ಬಳಕೆಯಾಗುತ್ತಿರುವುದು ಹೊಸತೇನಲ್ಲ. ದೇಶವು ಸ್ವಾತಂತ್ರ್ಯ ಪಡೆದ ಹೊಸತರಲ್ಲಿ, ಸಂವಿಧಾನದ ಮೂಲಕ ಸಮಾನತೆ ಮತ್ತು ಹಕ್ಕುಗಳನ್ನು ಪಡೆದರೂ, ಸಮಾಜದಲ್ಲಿ ಅವರು ಶೋಷಣೆಯಿಂದ ಮುಕ್ತಿ ಪಡೆಯಲಾಗಿಲ್ಲ. ಅವರು ಹಲವಾರು ಕೋಮು ಹಿಂಸಾಚಾರದಲ್ಲಿ ಅತ್ಯಾಚಾರಗಳಿಗೆ ಬಲಿಯಾಗಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ದೇಶ ವಿಭಜನೆ ಹಾಗೂ ಇತರ ಸಂದರ್ಭಗಳಲ್ಲಿ ನಡೆದ ಹಲವು ಕೋಮು ಹಿಂಸಾಚಾರಗಳ ವೇಳೆ ಕನಿಷ್ಠ 1,50,000 ಮಹಿಳೆಯರ (ಹಿಂದು, ಮುಸ್ಲಿಂ ಮತ್ತು ಸಿಖ್) ಅಪಹರಣ, ಅತ್ಯಾಚಾರಗಳು ನಡೆದಿವೆ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.

ಈ ವರದಿ ಓದಿದ್ದೀರಾ?: ಈ ದಿನ ವಿಶೇಷ | ದಮನಿತರ ಸಾಧನೆಗಳೇ ಮಾತನಾಡುವ ಕಾಲದಲ್ಲಿ

ಭಾರತವು ಸ್ವಾತಂತ್ರ್ಯಗೊಂಡು 77 ವರ್ಷಗಳು ಘಟಿಸಿದ ನಂತರವೂ, ಮಹಿಳೆಯರ ಹಕ್ಕು ಇನ್ನೂ ಪುಸ್ತಕದ ಹಾಳೆಗಳಲ್ಲಿಯೇ ಹೆಚ್ಚು ಭದ್ರವಾಗಿವೆ. ಆ ಹಕ್ಕುಗಳನ್ನು ವ್ಯವಸ್ಥೆಯೊಳಗೆ ಜಾರಿ ಮಾಡುವುದಕ್ಕಾಗಿ ಹಲವಾರು ಹೋರಾಟಗಳು ನಡೆದಿವೆ. ನಡೆಯುತ್ತಿವೆ. ಮಹಿಳಾ ಶಕ್ತಿ ಗಟ್ಟಿ ದನಿಯಾಗಿ ಪುಟಿದೇಳುತ್ತಿದೆ. ಇದೇ ಹೊತ್ತಿನಲ್ಲಿ, ರಾಜಕೀಯದಲ್ಲಿ ಮಹಿಳಾ ಮೀಸಲಾತಿಯ ಚರ್ಚೆಯೂ ಮುನ್ನೆಲೆಯಲ್ಲಿದೆ.

ಮಹಿಳೆಯರಿಗೆ ರಾಜಕೀಯವಾಗಿ ಮೀಸಲಾತಿ ಕೊಡುವುದಾಗಿ ಮಸೂದೆ ಅಂಗೀಕರಿಸಿದ ಬಿಜೆಪಿ ಸರ್ಕಾರ, ಮೀಸಲಾತಿಯನ್ನು 2029ರ ಲೋಕಸಭಾ ಚುನಾವಣೆಗೆ ಜಾರಿಗೊಳಿಸುವುದಾಗಿ ಹೇಳಿಕೊಂಡಿದೆ. ಇದು, ಮಹಿಳೆಯರ ಮೂಗಿಗೆ ತುಪ್ಪ ಸವರುವ ಕ್ರಮವೆಂದು ಹಲವರು ಟೀಕಿಸಿದ್ದಾರೆ. ರಾಜಕೀಯವಾಗಿ ಮಹಿಳೆಯರು ಸಂಸತ್ತು, ವಿಧಾನಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಸುವ ತುರ್ತು ಭಾರತಕ್ಕಿದೆ. ಮಹಿಳೆಯರೇ ಮಹಿಳೆಯರ ಪರವಾಗಿ ಸದನಗಳಲ್ಲಿ ದನಿ ಎತ್ತಬೇಕಾಗಿದೆ. ರಾಜಕೀಯ ಅಸ್ತಿತ್ವ ಮತ್ತು ಅವಕಾಶದ ಜೊತೆಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿಯೂ ಮಹಿಳೆಯರು ಸದೃಢರಾಗಬೇಕಿದೆ. ಇದೇ ಸಮಯದಲ್ಲಿ ಭಾರತದ ಗಂಡು ಜಾತಿಗೂ ಮಹಿಳೆಯರ ಹಕ್ಕು, ಸಮಾನತೆ ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ನೀಡುವ ತುರ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X