ಯಾವುದೇ ಕಾಮಗಾರಿ ಇರಲಿ ಕೆಲಸ ಪೂರ್ಣಗೊಳ್ಳದೆ ಬಿಲ್ ಪಾವತಿಸಬೇಡಿ. ಕೆಲಸದ ಗುಣಮಟ್ಟ ಪರಿಶೀಲನೆ ನಡೆಸಿ ಕೊನೆಯ ಹಂತದಲ್ಲಿ ಬಿಲ್ ಪಾವತಿ ಪ್ರಕ್ರಿಯೆ ನಡೆಸಿ. ಕಾಮಗಾರಿಗಳನ್ನು ಅರ್ಧಕ್ಕೆ ಕೈಬಿಟ್ಟ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಇಂಜಿನಿಯರ್‌ಗಳಿಗೆ ಶಾಸಕ ಎಸ್.ಆರ್.ಶ್ರೀನಿವಾಸ್ ಖಡಕ್ ಎಚ್ಚರಿಕೆ ನೀಡಿದರು.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾವಾರು ಅಂಕಿ ಅಂಶಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಒಂದು ಕೋಟಿ ರೂಗಳ ಕೆಲಸ ಬಾಕಿ ಇರುವ ಬಗ್ಗೆ ಕಿಡಿಕಾರಿ, ಯಾರೇ ಗುತ್ತಿಗೆದಾರ ಆದರೂ ಸರಿ ಕೆಲಸ ಪೂರ್ಣ ಮಾಡಿದ ಬಳಿಕ ಬಿಲ್ ನೀಡಬೇಕು ಎಂದು ಸೂಚಿಸಿದರು.
ಅಂಬೇಡ್ಕರ್ ಭವನ ಹಾಗೂ ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ ಗ್ರಾಮಗಳಲ್ಲಿ ಅವಕಾಶ ನೀಡಲಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಮೂಲಕ ಸಿಎ ನಿವೇಶನ ಪಡೆದು ಕೆಲಸ ಆರಂಭಿಸಲು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸಲಹೆ ನೀಡಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ನಮ್ಮ ರೈತರ ತೆಂಗು ಅಡಿಕೆ ಮರಗಳಿಗೆ ತಗುಲುವ ಸುಳಿ ರೋಗ, ನುಸಿ ರೋಗದ ಬಗ್ಗೆ ವಿಜ್ಞಾನಿಗಳನ್ನು ಕರೆತಂದು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಸೂಚಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುವ ಪೌಷ್ಟಿಕ ಆಹಾರ ತಯಾರಿಕಾ ಘಟಕದಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ವೇತನ ಸರಿಯಾಗಿ ನೀಡಲು ಹೇಳಿದರು. ತಾಲೂಕಿನಲ್ಲಿ ಸ್ವಂತ ಕಟ್ಟಡ ಇಲ್ಲದ 37 ಕೇಂದ್ರಕ್ಕೆ ಕೂಡಲೇ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲು ಸೂಚಿಸಿ ಭಾಗ್ಯಲಕ್ಷ್ಮಿ ಬಾಂಡ್ ಗಾಗಿ 186 ಅರ್ಜಿಗಳು ಬಂದಿದೆ. ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎಂದು ತಿಳಿಸಿದರು. ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನಾಥಾಲಯ ಮಕ್ಕಳ ಬಗ್ಗೆ ಸರಿಯಾಗಿ ನಿಗಾ ವಹಿಸಬೇಕು. ಅಂತಹ ಮಕ್ಕಳಿಗೆ ತೊಂದರೆ ಅದಲ್ಲಿ ಅಮಾನತು ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ಡೆಂಘೀ ಜೊತೆ ಚಿಕುನ್ ಗುನ್ಯಾ ವೈರಸ್ ಹರಡದಂತೆ ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಹೇಳಿ ಕೆರೆಗಳಲ್ಲಿ ಊಳು ಎತ್ತುವ ಕೆಲಸಕ್ಕೆ ಸರ್ಕಾರ ಹಣ ನೀಡಲು ಅಸಾಧ್ಯ. ಈ ನಿಟ್ಟಿನಲ್ಲಿ ರೈತರು ತಮ್ಮ ಜಮೀನಿಗೆ ಕೆರೆಯಲ್ಲಿ ಎರಡು ಅಡಿ ಆಳದಲ್ಲಿ ಮಣ್ಣು ತೆಗೆದರೆ ಅಡ್ಡಿ ಪಡಿಸಬೇಡಿ. ಹೆಚ್ಚು ಆಳ ಮಣ್ಣು ತೆಗೆದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಗುಬ್ಬಿಗೆ ಕುಡಿಯುವ ನೀರು ಒದಗಿಸುವ ಹೇರೂರು ಕೆರೆಗೆ ಹೇಮಾವತಿ ನೀರು ಹರಿಸುವ ನಾಲೆಯ ಅಭಿವೃದ್ದಿ ಕಡೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು. ಗೌಡನಕಟ್ಟೆಗೆ ನೀರು ಒದಗಿಸಲು ಕೆಲಸ ಇನ್ನೂ ಮೂರು ತಿಂಗಳಲ್ಲಿ ಪೂರ್ಣ ಗೊಳಿಸಲು ತಿಳಿಸಿ ಡಿಸೆಂಬರ್ ಮಾಹೆಯಲ್ಲಿ ಹಾಗಲವಾಡಿ ಕೆರೆಗೆ ಹೇಮಾವತಿ ಹರಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ಆಯನೂರಿನ ಬೇಕರಿಯಲ್ಲಿ ಸಿಲಿಂಡರ್ ಸ್ಫೋಟ: ತಪ್ಪಿದ ಭಾರೀ ದುರಂತ
ಮೀನುಗಾರಿಕೆ, ಶಿಕ್ಷಣ, ಕೃಷಿ, ತೋಟಗಾರಿಕೆ, ಕಾರ್ಮಿಕ ಹೀಗೆ ಎಲ್ಲಾ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ತಹಶೀಲ್ದಾರ್ ಬಿ.ಆರತಿ, ತಾಪಂ ಆಡಳಿತಾಧಿಕಾರಿ ಪುಷ್ಪಲತಾ, ತಾಪಂ ಇಓ ಶಿವಪ್ರಕಾಶ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಇದ್ದರು.
