ಅರಣ್ಯ ಭೂಮಿ ಅತಿಕ್ರಮಣ ಮಾಡಿ ಸಾಗುವಳಿ ಮಾಡಿದ್ದಾರೆಂದು ರೈತರನ್ನು ಒಕ್ಕಲೆಬ್ಬಿಸಲು ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ತಡೆದ ಮಹಿಳೆಯರು ವಿಷದ ಬಾಟಲಿ ಹಿಡಿದು ಪ್ರತಿಭಟಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದೇವಗಾಂವ ಗ್ರಾಮದಲ್ಲಿ ನಡೆದಿದೆ.
ಗೋವಿನ ಜೋಳ ಹಾಗೂ ಕಬ್ಬುಬೆಳೆ ನಾಶ ಮಾಡಿ ರಥರನ್ನು ಒಕ್ಕಲೆಬ್ಬಿಸಲು ಬಂದಿದ್ದ ಅಧಿಕಾರಿಗಳ ವಿರುದ್ಧ ದೇವಗಾಂವ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, “1957ರಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತ ಬಂದಿದ್ದೇವೆ. ಇದೀಗ ಇದ್ದಕಿದ್ದಂತೆ ಜೆಸಿಬಿ ಯಂತ್ರದ ಮೂಲಕ ಬಂದ ಅರಣ್ಯ ಇಲಾಖೆ ಅಧಿಕಾರಿಗಳು, ಗೋವಿನಜೋಳ ಕಬ್ಬುಬೆಳೆಗಳನ್ನು ನಾಶ ಮಾಡಿ, ಕೈಗೆ ಬಂದಿದ್ದು ಬಾಯಿಗೆ ಬರದಂತೆ ಮಾಡಲು ಮುಂದಾಗಿದ್ದಾರೆ” ಎಂದು ರೈತ ಮಹಿಳೆಯರು ಆರೋಪಿಸಿದರು.
“ಪಹಣಿ ಪತ್ರಿಕೆಯ ಸಾಗುವಳಿದಾರರ ಹೆಸರಿನಲ್ಲಿ ಕೆಲವರ ಹೆಸರುಗಳಿವೆ. ನಂತರದ ದಿನಗಳಲ್ಲಿ ಈ ಭೂಮಿಯನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಪಡೆಯಲಾಗಿದೆ. ಕೆಲವರಿಗೆ ಭೂಮಿ ಹಕ್ಕು ನೀಡಿ ನಮಗೇಕೆ ನೀಡುತ್ತಿಲ್ಲ. ಈ ಭೂಮಿಯಲ್ಲಿ ನಾವು ಇಷ್ಟು ವರ್ಷಗಳ ಕಾಲ ಬದುಕು ನಡೆಸಿದ್ದೇವೆ. ಸಾಲ ಮಾಡಿ ಬೆಳೆದ ಬೆಳೆಗಳನ್ನು ನಾಶಮಾಡಲು ಇದೀಗ ಅಧಿಕಾರಿಗಳು ಬಂದಿದ್ದಾರೆ. ಸಾಗುವಳಿ ಭೂಮಿಯಲ್ಲಿ ಟ್ರಂಚ್ ಹೊಡೆದು ಸಸಿ ನೆಡಲು ಬಂದಿದ್ದಾರೆ. ನಮ್ಮ ಜಾಗ ಬಿಟ್ಟು ನಾವು ಕದಲುವದಿಲ್ಲ” ಎಂದು ರೈತ ಮಹಿಳೆಯರು ವಿಷದ ಬಾಟಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಡಾ ಹಗರಣ ಪ್ರಕರಣ | ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮೈಸೂರು ವಕೀಲರ ಬೆಂಬಲ
ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘಟನೆಯ ಮುಖಂಡರಾದ ಎಂ ಎಫ್ ಜಕಾತಿ, ಅಪ್ಪೇಶ ದಳವಾಯಿ, ಬಿಷ್ಪಪ್ಪ ಶಿಂಧೆಯವರು ಘಟನಾ ಸ್ಥಳಕ್ಕೆ ಆಗಮಿಸಿ, ಟ್ರಂಚ್ ಹೊಡೆಯಲು ಅವಕಾಶ ಕೊಡುತ್ತೇವೆ. ಆದರೆ ಬೆಳೆ ನಾಶಮಾಡಬಾರದೆಂದು ಅಧಿಕಾರಿಗಳ ಜತೆಗೆ ಒಪ್ಪಂದ ಮಾಡಿಕೊಂಡ ಬಳಿಕ ರೈತರು ಟ್ರಂಚ್ ಹೊಡೆಯಲು ಅವಕಾಶ ನೀಡಿದ್ದಾರೆ.