- ಯೋಗೇಂದ್ರ ಯಾದವ್ ಹಂಚಿಕೊಂಡ ಅಂಕಿ ಅಂಶ ನಿರಾಕರಿಸಿದ ಬಿ ಎಲ್ ಸಂತೋಷ್
- ಕಾಂಗ್ರೆಸ್ ಕರ್ನಾಟಕದಲ್ಲಿ ಬಹುಮತ ಗಳಿಸಲಿದೆ ಎಂದ ‘ಈ ದಿನ.ಕಾಮ್’ ಸಮೀಕ್ಷೆ
ಈದಿನ.ಕಾಮ್ ಸಮೀಕ್ಷೆಯ ವಿವರಗಳನ್ನು ಪರಿಗಣಿಸಿ ಸಾಮಾಜಿಕ ಕಾರ್ಯಕರ್ತ, ಚುನಾವಣಾ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು “ಕರ್ನಾಟಕದಲ್ಲಿ ಕಾಂಗ್ರೆಸ್ ಅಲೆ ಇದೆ” ಎಂದು ಹೇಳಿದ್ದಾರೆ.
ಅವರು ಕನ್ನಡದ ಜಾಲತಾಣ ‘ಈ ದಿನ.ಕಾಮ್’ ನಡೆಸಿದ ಸಮೀಕ್ಷೆಯ ಅಂಕಿ ಅಂಶಗಳನ್ನು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಈದಿನ.ಕಾಮ್ ಸಮೀಕ್ಷೆ ಮುಂದಿಟ್ಟಿರುವ ಅಂಕಿ ಅಂಶಗಳನ್ನು ಬಿಜೆಪಿ ನಿರಾಕರಿಸಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಅವರು ಯೋಗೇಂದ್ರ ಯಾದವ್ ಅವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಇದು ಕಲ್ಪಿತ ಸಮೀಕ್ಷೆ” ಎಂದು ಟೀಕಿಸಿದ್ದಾರೆ. ಯೋಗೇಂದ್ರ ಅವರು ಇದಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
“ಸತ್ಯದ ಬೇಳೆ ರುಚಿಸದವರು ಅಡುಗೆ ಮಾಡಿದವರನ್ನೇ ದೂಷಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಶಾಸಕರನ್ನು ಖರೀದಿಸಿ ತಮ್ಮ ಬಹುಮತದ ಬೇಳೆ ಬೇಯಿಸಿಕೊಳ್ಳುತ್ತಿದ್ದವರಿಗೆ ಸಮೀಕ್ಷೆಯಿಂದ ತೊಂದರೆಯುಂಟಾಗಿರುವುದು ಆಶ್ಚರ್ಯ ಉಂಟು ಮಾಡಿದೆ. ಬಿಜೆಪಿಯ ಆಂತರಿಕ ಸಮೀಕ್ಷೆಗಳಿಗೆ ‘ಈದಿನ’ ಜಾಲತಾಣದ ಸಮೀಕ್ಷೆ ಅನುರಣಿಸುತ್ತಿದೆಯೇ?” ಎಂದು ಯೊಗೇಂದ್ರ ಅವರು ಕುಟುಕಿದ್ದಾರೆ.
ಯೋಗೇಂದ್ರ ಅವರನ್ನು ಟೀಕಿಸಿ ಬಿ ಎಲ್ ಸಂತೋಷ್ ಈ ಮೊದಲು ಟ್ವೀಟ್ ಮಾಡಿದ್ದರು.
“ತನ್ನ ಯಜಮಾನರನ್ನು ಮೆಚ್ಚಿಸಲು ಪಾದಯಾತ್ರೆಗಳು ಮತ್ತು ಆಂದೋಲನಗಳ ನಡುವೆ ಸಮೀಕ್ಷೆಗಳಿಗೆ ಅವರು ಸಮಯ ಕಂಡುಕೊಂಡಿರುವುದು ನಿಜಕ್ಕೂ ಆಶ್ಚರ್ಯಕರ” ಎಂದು ಯೋಗೇಂದ್ರ ಅವರ ಹೆಸರನ್ನು ಟ್ಯಾಗ್ ಮಾಡಿ ಬಿ ಎಲ್ ಸಂತೊಷ್ ಟ್ವೀಟ್ ಮಾಡಿದ್ದರು.
ಯೋಗೇಂದ್ರ ಯಾದವ್ ಅವರು ಇದಕ್ಕೂ ಮೊದಲು ‘ಈದಿನ’ ಜಾಲತಾಣ ನಡೆಸಿರುವ ಸಮೀಕ್ಷೆಯ ಅಂಕಿ ಅಂಶಗಳನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಕರಗಿ ನೀರಾಗಿರುವ ಗುಜರಾತ್ ರಸ್ತೆಗಳು; ಗುಜರಾತ್ ಮಾಡೆಲ್‌ಗೆ ಟೀಕಿಸಿದ ವಿಪಕ್ಷಗಳು
‘ಈದಿನ.ಕಾಮ್’ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಈ ಬಾರಿ ಕಾಂಗ್ರೆಸ್ 134-140 ಸ್ಥಾನಗಳ ಮೂಲಕ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ಹೇಳಿದೆ.
ಬಿಜೆಪಿಯು 57-65 ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಕಾಂಗ್ರೆಸ್‌ನ ಇತರ ನಾಯಕರೂ ಸಮೀಕ್ಷೆಯ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದಾರೆ.