ಪತ್ನಿಯ ಆತ್ಮಹತ್ಯೆ ಹಾಗೂ ಆಕೆಯ ಅನುಮಾನಾಸ್ಪದ ಸಾವಿನ ಪರಿಸ್ಥಿತಿಯನ್ನು ಎದುರಿಸಲಾಗದೆ ಪತಿಯೂ ಸಾವಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಗದ್ದೆ ಹೊಸೂರು ಗ್ರಾಮದಲ್ಲಿ ನಡೆದಿದೆ.
ಸ್ವಾತಿ (21) ಎಂಬ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಗದ್ದೆ ಹೊಸೂರು ಗ್ರಾಮದ ಮೋಹನ್ (26) ಪತ್ನಿಯ ಸಾವಿಗೆ ಹೆದರಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮೋಹನ್ ತನ್ನ ಪತ್ನಿಯ ಸಾವಿನಿಂದಾಗಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ವಾತಿ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಖಚಿತವಾಗಿಲ್ಲ. ಇದು ಪತಿಯ ಮನೆಯವರೇ ಮಾಡಿದ ಕೊಲೆ ಎಂದು ಸ್ವಾತಿ ಪೋಷಕರು ಆರೋಪಿಸಿದ್ದಾರೆ.

ಸ್ವಾತಿ ಮಂಗಳವಾರ ರಾತ್ರಿ ಮೋಹನ್ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಯ ನಂತರ ಪತಿ ಮೋಹನ್ ಮತ್ತು ಆತನ ಪೋಷಕರು ಮನೆಯಿಂದ ಪರಾರಿಯಾಗಿದ್ದಾರೆ. ಪತಿ ಮತ್ತು ಆತನ ಕುಟುಂಬದವರು ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತ ಗೃಹಿಣಿಯ ಪೋಷಕರು ಆರೋಪಿಸಿದ್ದು, ರಾತ್ರಿ ವೇಳೆ ಗೃಹಿಣಿ ಸಂಬಂಧಿಕರು ಗಂಡನ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ.
ಬುಧವಾರ ಬೆಳಗ್ಗೆ ಗ್ರಾಮದ ಕೆರೆಯಲ್ಲಿ ಗಂಡ ಮೋಹನ್ ಶವ ಪತ್ತೆಯಾಗಿದೆ. ಕಿಕ್ಕೇರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಅನಾಥವಾದ ಒಂದೂವರೆ ವರ್ಷದ ಮಗು!
ಇನ್ನು ಮೋಹನ್- ಸ್ವಾತಿ ದಂಪತಿಗೆ ಒಂದೂವರೆ ವರ್ಷದ ಮಗು ಇದ್ದು, ತಂದೆ-ತಾಯಿ ದಾರುಣ ಅಂತ್ಯದಿಂದ ಮಗು ಅನಾಥವಾಗಿದೆ.
ಇದನ್ನು ಓದಿದ್ದೀರಾ? ಚಿಂತಾಮಣಿ | ನಿರ್ಮಾಣ ಹಂತದ ಗೋಡೆ ಕುಸಿತ; ದಂಪತಿಯ ಸ್ಥಿತಿ ಗಂಭೀರ
ಕೆರೆಯಲ್ಲಿದ್ದ ಮೋಹನ್ ಮೃತದೇಹವನ್ನು ಪೊಲೀಸರು ಗ್ರಾಮಸ್ಥರ ಸಹಾಯದೊಂದಿಗೆ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
