ನಾಗಪುರ ದೀಕ್ಷಾ ಭೂಮಿಗೆ ತೆರಳಲು ಅರ್ಜಿ ಸಲ್ಲಿಸಲು ಆಗಸ್ಟ್ 31 ಅಂತಿಮ ದಿನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದೀಕ್ಷಾಭೂಮಿ ಯಾತ್ರೆಗೆ ಹೋಗಬಯಸುವ ಅರ್ಹ ಅಭ್ಯರ್ಥಿಗಳು https://swdservices.karnataka.gov.in/ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ಸೇಡಂನ ಗೈಡ್ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಪತ್ರಿಕೆ ಪ್ರಕಟಣೆ ತಿಳಿಸಿರುವ ಅವರು, “2024-25ನೇ ಸಾಲಿನಲ್ಲಿ ಅಕ್ಟೋಬರ್ 12(ವಿಜಯದಶಮಿ ಶನಿವಾರ)ರಂದು ನಾಗಪುರ ದೀಕ್ಷಾಭೂಮಿಯಲ್ಲಿ ಅಕ್ಟೋಬರ್ 10 ರಿಂದ 14ರವರೆಗೆ ನಡೆಯುವ ದಮ್ಮ ಪ್ರವರ್ತನ ದಿನ ಕಾರ್ಯಕ್ರಮಕ್ಕೆ ಪ್ರತಿ ವರ್ಷದಂತೆ ಕರ್ನಾಟಕ ರಾಜ್ಯದಿಂದ ಡಾ. ಬಿ ಆರ್ ಅಂಬೇಡ್ಕರ್ ಅನುಯಾಯಿಗಳನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಾಗಪೂರ ದೀಕ್ಷಾಭೂಮಿ ಯಾತ್ರೆ ಕೈಗೊಳ್ಳಲು ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿದೆ. ಈ ಸಂಬಂಧ ಅರ್ಹ ಯಾತ್ರಾರ್ಥಿಗಳು ಅರ್ಜಿ ಸಲ್ಲಿಸಬಹುದು” ಎಂದು ತಿಳಿಸಿದ್ದಾರೆ.
“ದೀಕ್ಷಾಭೂಮಿ ಯಾತ್ರೆಗೆ ಹೋಗಬಯಸುವ ಡಾ. ಬಿ ಆರ್ ಅಂಬೇಡ್ಕರ್ ಅವರ ಅನುಯಾಯಿಗಳು ಬಿಪಿಎಲ್ ಕಾರ್ಡ್ ಹೊಂದಿರಬೇಕು. 18 ವರ್ಷ ವಯೋಮಿತಿ ಮೇಲ್ಪಟ್ಟವರು ಮತ್ತು ಒಂದು ಕುಟುಂಬದಲ್ಲಿ ಇಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಜತೆಗೆ ಇಲಾಖೆಯು ವಿಧಿಸುವ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಡಿ ದೇವರಾಜ ಅರಸು ಜನ್ಮದಿನಾಚರಣೆ
“ಆಸಕ್ತರು ಅಂತಿಮ ದಿನಾಂಕದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಮೊದಲು ಅರ್ಜಿ ಸಲ್ಲಿಸಿದವರಿಗೆ ಪ್ರಥಮ ಆಧ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕರ ಕಾರ್ಯಾಲಯಕ್ಕೆ ಸಂಪರ್ಕಿಸಲು ಕೋರಲಾಗಿದೆ” ಎಂದು ತಿಳಿಸಿದ್ದಾರೆ.