ಮಗ ಅಕಾಲಿಕ ಮರಣ ಹೊಂದಿದ ಹಿನ್ನೆಲೆ ಕುಟುಂಬವೊಂದು ಅಂಗಾಂಗ ದಾನ ಮಾಡುವ ಮೂಲಕ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕೋಲಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ನಗರ ನಿವಾಸಿಗಳಾದ ಸಂಜೀವಪ್ಪ, ವಿಜಯ್ ಕುಮಾರಿ ದಂಪತಿ ಪುತ್ರ ಸಂಜಯ್(23) ಬುಧವಾರ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ದುರಾದೃಷ್ಟವಶಾತ್ ಸಂಜಯ್ ಮಿದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದರು.
ಮಗನ ಸಾವಿನ ಬಳಿಕ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ ಕುಟುಂಬ, ಅಂಗಾಂಗ ದಾನಕ್ಕೆ ಒಲ್ಲೆ ಎನ್ನುವ ಬಹುತೇಕರ ನಡುವೆ ಅಂಗಾಂಗ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದೆ. ಅಂಗಾಂಗ ದಾನದಿಂದ ಮೃತ ಸಂಜಯ್ ಅವರನ್ನು ಇತರರಲ್ಲಿ ಕಾಣುವ ಯತ್ನಕ್ಕೆ ಕುಟುಂಬ ಮುಂದಾಗಿದ್ದು ಇದೀಗ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ನಿರ್ಮಾಣ ಹಂತದ ಗೋಡೆ ಕುಸಿತ; ದಂಪತಿಯ ಸ್ಥಿತಿ ಗಂಭೀರ
ಈ ಕುರಿತು ಶ್ಲಾಘನೆ ವ್ಯಕ್ತಪಡಿಸಿರುವ ಆಸ್ಪತ್ರೆ ವೈದ್ಯರು, ಅಂಗಾಂಗ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದರೆ ಅನೇಕ ಜೀವಗಳಿಗೆ ದಾರಿದೀಪವಾಗುತ್ತದೆ. ಅಂಗಾಂಗ ದಾನದ ವಿಚಾರದಲ್ಲಿ ಮೃತ ವ್ಯಕ್ತಿಯ ಸಾವಿನ ನಂತರದ ಪ್ರತಿಯೊಂದು ನಿಮಿಷವು ಅತೀ ಮುಖ್ಯವಾಗಿರುತ್ತದೆ ಎಂದಿದ್ದಾರೆ.