ಕೊಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನಿರತ ಕಿರಿಯ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಘಟನೆಯನ್ನು ಖಂಡಿಸಿ ಇಂದು ಎಐಡಿಎಸ್ಓ ವತಿಯಿಂದ ತುಮಕೂರು ಟೌನ್ ಹಾಲ್ ವೃತ್ತದಿಂದ ಸ್ವಾತಂತ್ರ್ಯ ಚೌಕದವರೆಗೆ ಮೋಂಬತ್ತಿ ಮೆರವಣಿಗೆ ಮಾಡಲಾಯಿತು.
ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಸಿ.ಬಿ. ಮಾತನಾಡಿ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳಿಗೆ ಮಾದ್ಯಮಗಳಲ್ಲಿ ನಿರಂತರವಾಗಿ ಮತ್ತು ಅವ್ಯಾಹತವಾಗಿ ಅಶ್ಲೀಲತೆ ಮತ್ತು ಕ್ರೌರ್ಯಗಳ ಪ್ರದರ್ಶನ, ಇಂಟರ್‌ನೆಟ್, ಮೊಬೈಲ್‌ಗಳ ಮೂಲಕ ಪೋರ್ನೋಗ್ರಫಿಕ್ ವೆಬ್‌ಸೈಟ್‌ಗಳನ್ನು ಹರಿಬಿಡುತ್ತಿರುವುದು, ದುರಭ್ಯಾಸಗಳಿಗೆ ವ್ಯಸನಿಗಳನ್ನಾಗಿಸುತ್ತಿರುವುದು ಮೂಲ ಕಾರಣವಾಗಿವೆ. ವಿಕೃತ ಮನಸ್ಥಿತಿ ಬೆಳೆಸಿಕೊಂಡು ಬಾಲಕಿಯರ ಮೇಲೆ, ಮಹಿಳೆಯರ ಮೇಲೆ ಅತ್ಯಾಚಾರದಂತಹ ಹೀನ, ಅನಾಗರಿಕ, ಅಮಾನವೀಯ ಕೃತ್ಯವನ್ನು ಎಸಗುತ್ತಿದ್ದಾರೆ. ದೆಹಲಿಯ ನಿರ್ಭಯ ಪ್ರಕರಣದ ನಂತರ ನಡೆದ ಪ್ರಭಲ ಹೋರಾಟದ ಫಲವಾಗಿ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ವರ್ಮಾ ಆಯೋಗ ಹಲವಾರು ಶಿಫಾರಸ್ಸುಗಳನ್ನು ಮಾಡಿದ್ದರೂ ಸರ್ಕಾರಗಳು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಂಡಿಲ್ಲ. ಜೊತೆಗೆ ಇಂದಿನ ನ್ಯಾಯಾಂಗ ವ್ಯವಸ್ಥೆಯಲ್ಲಿನ ಸಡಿಲತೆ, ನೂನ್ಯತೆಗಳಿಂದಾಗಿ ಎಷ್ಟೋ ಇಂತಹ ಅಪರಾಧಗಳನ್ನು ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ವಿದ್ಯಾರ್ಥಿ-ಯುವಜನರು, ಪುರುಷ-ಮಹಿಳೆಯರು ಒಂದಾಗಿ ನಮ್ಮ ದೇಶದ ನವೋದಯ ಹರಿಕಾರರ, ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳ ಜೀವನ ಹೋರಾಟಗಳಿಂದ ಸ್ಪೂರ್ತಿ ಪಡೆದು ಉನ್ನತವಾದ ನೀತಿ, ನೈತಿಕತೆ, ಸಂಸ್ಕೃತಿಯ ತಳಹದಿಯ ಮೇಲೆ ಪ್ರಭಲ ಹೋರಾಟ ಕಟ್ಟಿ ಬೆಳೆಸಬೇಕಾಗಿದೆ. ಇಂತಹ ಹೋರಾಟದ ಮೂಲಕ ಮಾತ್ರವೇ ನಿಜವಾದ ಸಮಾನತೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸಾದ್ಯ ಎಂದು ಹೇಳಿದರು.

ಎಐಡಿಎಸ್ಓ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಮಾತನಾಡಿ ಸಂತ್ರಸ್ತೆಗೆ ತ್ವರಿತ ನ್ಯಾಯಕ್ಕಾಗಿ ಒತ್ತಾಯಿಸಿ ಕಿರಿಯ ವೈದ್ಯರು ಕೆಲಸವನ್ನು ನಿಲ್ಲಿಸಿ, ಪ್ರತಿಭಟನೆಗಳನ್ನು ಆಯೋಜಿಸುತ್ತಿರುವುದು ನಿರೀಕ್ಷಿತ ಮತ್ತು ನ್ಯಾಯಸಮ್ಮತವಾಗಿದೆ. ಅಲ್ಲದೆ ದೇಶದಾದ್ಯಂತ ಜನರು ಈ ಘಟನೆಯನ್ನು ಖಂಡಿಸಿ ಹಾಗೂ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯ ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಾಮಾಜಘಾತುಕ ಶಕ್ತಿಗಳು ಈ ಘಟನೆಯ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ದಾಳಿ ಮಾಡಿದ್ದಾರೆ. ಸಾಕ್ಷ್ಯವನ್ನು ನಾಶಪಡಿಸುವ ಮತ್ತು ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಮತ್ತು ಪ್ರತಿಭಟನಾಕಾರರ ಮನಸ್ಸಿನಲ್ಲಿ ಭಯದ ಭಾವನೆಯನ್ನು ಹುಟ್ಟಿಸಲು 14 ಆಗಸ್ಟ್ 2024 ರಂದು ಮಧ್ಯರಾತ್ರಿ ಆರ್ ಜಿ ಕಾರ್ ವೈದ್ಯಕೀಯ ಕಾಲೇಜಿಗೆ ನುಗ್ಗಿ ಪ್ರತಿಭಟನೆಯ ಸ್ಥಳವನ್ನು ಧ್ವಂಸಗೊಳಿಸಿದ್ದಾರೆ. ಈ ಕೃತ್ಯ ಎಸಗಿಸುವ ಅಪರಾಧಿಗಳನ್ನು ರಕ್ಷಿಸಲು ಗೂಂಡಾಗಳು ನಡೆಸಿರುವ ಈ ಉದ್ದೇಶಪೂರ್ವಕ ಮತ್ತು ವ್ಯವಸ್ಥಿತ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆಸ್ಪತ್ರೆಯ ಅಧಿಕಾರಿಗಳು ಸಹ ಈ ಘಟನೆಗೆ ತಕ್ಷಣ ಪ್ರತಿಕ್ರಿಯಿಸಿಲ್ಲ, ಬದಲಾಗಿ ಅಪರಾಧಿಗಳೊಂದಿಗೆ ಶಾಮೀಲಾಗಿದ್ದು ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ. ಗುಂಡಾಗಳ ಇಂತಹ ಕೃತ್ಯಗಳು ಅಪರಾಧ ಎಸಗಿದವರಿಗೆ ಮಾತ್ರ ಸಹಾಯ ಮಾಡುತ್ತವೆ ಮತ್ತು ನಿಜವಾದ ಪ್ರತಿಭಟನಾಕಾರರನ್ನು ಸಮಾಜ ವಿರೋಧಿಗಳೆಂದು ಬಿಂಬಿಸುವ ಮತ್ತು ಚಳವಳಿಯನ್ನು ಹತ್ತಿಕ್ಕುವ ಶಕ್ತಿಯ ಕೈಗಳನ್ನು ಬಲಪಡಿಸುತ್ತವೆ. ಆದ್ದರಿಂದ ಸಂತ್ರಸ್ತೆಗೆ ನ್ಯಾಯ ಸಿಗುವವರೆಗೆ ಜಾಗರೂಕತೆಯಿಂದ ಹೋರಾಟವನ್ನು ಬೆಳೆಸಬೇಕಾಗಿದೆ ಎಂದರು.
ಎಐಡಿಎಸ್ಓ ನ ಭರತ್, ಸೈಯದ್, ಸುಮಂತ್ ಮುಂತಾದವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.
