ಮೋದಿಯವರ ಕೇಂದ್ರ ಸರ್ಕಾರದ ಮೂರು ಮುಖ್ಯ ನಿರ್ಧಾರ- ಲ್ಯಾಟರಲ್ ಎಂಟ್ರಿ, ಬ್ರಾಡ್ ಕಾಸ್ಟಿಂಗ್, ವಕ್ಫ್ ಮಸೂದೆಗಳಿಗೆ ಹಿನ್ನಡೆ ಉಂಟಾಗಿದೆ. ವಿರೋಧ ಪಕ್ಷಗಳಷ್ಟೇ ಅಲ್ಲ, ಮೈತ್ರಿಕೂಟದ ಮಿತ್ರಪಕ್ಷಗಳು ಕೂಡ ತೀವ್ರವಾಗಿ ವಿರೋಧಿಸಿದ್ದರಿಂದ, ಕೇಂದ್ರ ಸರ್ಕಾರ ತನ್ನ ತೀರ್ಮಾನದಿಂದ ಹಿಂದೆ ಸರಿದಿದೆ. ಇದು ಪ್ರಜಾಸತ್ತೆಯ ಜಯ. ಸಂವಿಧಾನಕ್ಕೆ ಸಂದ ಜಯ. ಜನರ ಜಯ.
ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೇರಿ ಇವತ್ತಿಗೆ ಕೇವಲ 73 ದಿನಗಳಾಗಿವೆ. ಈ 73 ದಿನಗಳಲ್ಲಿ ಮೂರು ಮುಖ್ಯ ನಿರ್ಧಾರಗಳಿಂದ ಹಿಂದೆ ಸರಿದಿದ್ದಾರೆ.
ಆ. 20ರಂದು ಲ್ಯಾಟರಲ್ ಎಂಟ್ರಿ, ಆ. 12ರಂದು ಬ್ರಾಡ್ ಕಾಸ್ಟಿಂಗ್ (ನಿಯಂತ್ರಣ) ಮಸೂದೆ 2024 ಮತ್ತು ಆ. 8ರಂದು ವಕ್ಫ್ (ತಿದ್ದುಪಡಿ) ಮಸೂದೆ- ಈ ಮಹತ್ವದ ಮೂರು ನಿರ್ಧಾರಗಳಿಂದ ಮೋದಿಯವರ ಕೇಂದ್ರ ಸರ್ಕಾರ ಹಿಂದೆ ಸರಿದಿದೆ.
ಆ. 17ರಂದು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿಯಂತಹ 24 ಕೇಂದ್ರ ಸಚಿವಾಲಯಗಳ 45 ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ(ನೇರ ನೇಮಕಾತಿ) ಮೂಲಕ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿತ್ತು. ಸೆಪ್ಟೆಂಬರ್ 17ರ ಒಳಗೆ ಇವುಗಳನ್ನು ಭರ್ತಿ ಮಾಡಲು ಮುಂದಾಗಿತ್ತು. ವಿರೋಧ ವ್ಯಕ್ತವಾಗುತ್ತಿದ್ದಂತೆ ಆ. 20ರಂದು ವಾಪಸ್ ಪಡೆಯಿತು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದಲ್ಲಿ ಪ್ರಸಾರ ಸೇವೆಗಳಿಗೆ ನಿಯಂತ್ರಕ ಚೌಕಟ್ಟನ್ನು ಕೂಲಂಕಷವಾಗಿ ಪರಿಶೀಲಿಸುವ ಗುರಿಯನ್ನು ಹೊಂದಿರುವ ಪ್ರಸ್ತಾವಿತ ಕಾನೂನು- ಬ್ರಾಡ್‌ಕಾಸ್ಟಿಂಗ್ (ನಿಯಂತ್ರಣ) ಮಸೂದೆ 2024ರ ಎರಡನೇ ಕರಡು ಆವೃತ್ತಿಯನ್ನು ಮಂಡಿಸಲು ಸಿದ್ಧವಾಗಿತ್ತು. ಆದರೆ, ವಿರೋಧ ವ್ಯಕ್ತವಾಗುತ್ತಿದ್ದಂತೆ ಆ.12ರಂದು ಹಿಂತೆಗೆದುಕೊಂಡಿತು. ಅಷ್ಟೇ ಅಲ್ಲ, ಕೇಂದ್ರ ಸರ್ಕಾರ ಅ. 15ರವರೆಗೆ ಮೊದಲ ಕರಡು ಪ್ರತಿಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸಿತು.
ಇನ್ನು ಆ. 8ರಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ವಕ್ಫ್ (ತಿದ್ದುಪಡಿ) ಮಸೂದೆ 2024ನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ವಿರೋಧ ವ್ಯಕ್ತವಾದಾಗ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ತೀರ್ಮಾನಿಸಲಾಯಿತು.
ಅಂದರೆ, ಮೋದಿಯವರ ಕೇಂದ್ರ ಸರ್ಕಾರದ ಮೂರು ಮುಖ್ಯ ನಿರ್ಧಾರಗಳಿಗೆ ಹಿನ್ನಡೆ ಉಂಟಾಗಿದೆ. ವಿರೋಧ ಪಕ್ಷಗಳಷ್ಟೇ ಅಲ್ಲ, ಮೈತ್ರಿಕೂಟದ ಮಿತ್ರಪಕ್ಷಗಳು ಕೂಡ ತೀವ್ರವಾಗಿ ವಿರೋಧಿಸಿದ್ದರಿಂದ, ಕೇಂದ್ರ ಸರ್ಕಾರ ತನ್ನ ತೀರ್ಮಾನದಿಂದ ಹಿಂದೆ ಸರಿದಿದೆ.
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿಯವರಿಗೆ ಈ ರೀತಿ ಹಿನ್ನಡೆ ಉಂಟಾಗಿರಲಿಲ್ಲ. ಅವರನ್ನು ಪ್ರಶ್ನಿಸುವ, ಅವರ ತೀರ್ಮಾನಗಳನ್ನು ಮರುಪರಿಶೀಲನೆಗೆ ಒಳಪಡಿಸುವ, ಟೀಕಿಸುವ ವಾತಾವರಣವೇ ದೇಶದಲ್ಲಿ ಇರಲಿಲ್ಲ. ಏಕೆಂದರೆ ಬಿಜೆಪಿ ಬಹುಮತದ ಬಲದಿಂದ ವಿರೋಧ ಪಕ್ಷಗಳ ದನಿಯನ್ನು ದಮನ ಮಾಡಿತ್ತು. ಪ್ರಜಾಪ್ರಭುತ್ವದ ಆಶಯವನ್ನು ಮಣ್ಣುಪಾಲು ಮಾಡಿತ್ತು. ಸಂವಿಧಾನಕ್ಕೆ ಹಣೆ ಇಟ್ಟು ನಮಸ್ಕರಿಸುತ್ತಲೇ, ಅದನ್ನು ನಿರ್ಲಕ್ಷಿಸಿ ಅಟ್ಟಹಾಸ ಮೆರೆದಿತ್ತು.
ಈಗ, ಮೋದಿಯವರು ಮೂರನೇ ಬಾರಿಗೆ ಅಧಿಕಾರಕ್ಕೇರಿದಾಗ, ಕೇಂದ್ರ ಸರ್ಕಾರ ತರಲು ಹೊರಟಿದ್ದ ಕಾಯ್ದೆಗಳು, ಕಾನೂನುಗಳು ಹಾಗೂ ತಿದ್ದುಪಡಿಗಳು ಜನವಿರೋಧಿ ಕ್ರಮಗಳು ಅಲ್ಲದಿರಬಹುದು. ಆದರೆ ಅವುಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಮಾಡಿದಂತೆ, ಮಂಡಿಸಿದಂತೆ, ಅಂಕಿತ ಹಾಕಿಸಿಕೊಂಡಂತೆ ಈಗ ಮಾಡಲಾಗುತ್ತಿಲ್ಲ.
ದೇಶವೆಂದರೆ, ಒಂದು ಧರ್ಮ, ಒಂದು ನಿಲುವು, ಒಂದು ಅಭಿಪ್ರಾಯವಲ್ಲ. ಬಹುತ್ವ ಭಾರತದಲ್ಲಿ ಕಟ್ಟಕಡೆಯ ವ್ಯಕ್ತಿಯೂ ಮುಖ್ಯ. ಎಲ್ಲರ ಅನಿಸಿಕೆ, ಅಭಿಪ್ರಾಯಗಳೂ ಮುಖ್ಯ. ಸರ್ವರಿಗೂ ಅನ್ವಯಿಸುವ ಕಾಯ್ದೆಗಳನ್ನು ಜಾರಿಗೆ ತರುವಾಗ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಸಂಸದೀಯ ನಡವಳಿಕೆಗಳನ್ನು ಪಾಲಿಸಬೇಕು. ಪ್ರಜಾಪ್ರಭುತ್ವದ ದೇಗುಲವೆಂದು ಕರೆಯುವ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ, ಜನಪ್ರತಿನಿಧಿಗಳ ಪರ-ವಿರೋಧ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕು. ಅಲ್ಲಿಂದ ಮಥಿಸಿ ಬಂದದ್ದನ್ನು ತಿದ್ದುಪಡಿ ಮಾಡಿ, ನಂತರ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಬೇಕು.
ಆದರೆ ಸಂಘ ಪರಿವಾರ ಮತ್ತು ಬಿಜೆಪಿಯಿಂದ ಬಂದ ಮೋದಿಯವರು ಈಗಲೂ, ಸ್ವಹಿತಾಸಕ್ತಿಗೆ ತಕ್ಕಂತೆ ಕಾಯ್ದೆ-ಕಾನೂನುಗಳಿಗೆ ತಿದ್ದುಪಡಿ ತಂದು, ಯಾವುದೋ ಒಂದು ಧರ್ಮದ, ಒಂದಷ್ಟು ಜನರ ಅನುಕೂಲಕ್ಕೆ ಆಗುವ, ಬಹುಜನರ ವಿರುದ್ಧವಿರುವ ತೀರ್ಮಾನಗಳನ್ನು ತೆಗೆದುಕೊಂಡಿದ್ದರು. ಅದನ್ನು ಸಂಸತ್ತಿನಲ್ಲಿ ಮಂಡಿಸಿ, ಏಕಮುಖವಾಗಿ ಅನುಮೋದಿಸಿ, ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಿ ಗೆದ್ದು ಮೆರೆಯಲು ನೋಡಿದ್ದರು. ಅಂದರೆ, ದೇಶದ ಜನರಿಗಾಗಿ ಮಾಡುವ ಕಾಯ್ದೆ-ಕಾನೂನುಗಳನ್ನು ಜನರ ಮುಂದಿಡದೆ ಪ್ರಜಾಪ್ರಭುತ್ವವನ್ನು ಅಣಕಿಸಲು ಹವಣಿಸಿದ್ದರು. ಆದರೆ, ಅದಾಗಲಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಜ್ಯಪಾಲರು ಸಂವಿಧಾನ ರಕ್ಷಿಸಬೇಕೇ ಅಥವಾ ತಮ್ಮ ಒಡೆಯರ ಅಡಿಯಾಳಾಗಬೇಕೇ?
ಆಡಳಿತಾರೂಢ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಈ ದುಂಡಾವರ್ತನೆ ನಮಗೆ ಸ್ಪಷ್ಟವಾಗಿ ಅರ್ಥವಾಗಬೇಕಾದರೆ, 2020ರಲ್ಲಿ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳತ್ತ ನೋಡಬೇಕು. ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುತ್ತಲೇ ರೈತರನ್ನು ಒಕ್ಕಲೆಬ್ಬಿಸುವ ಮೂರು ಕರಾಳ ಕಾಯ್ದೆಗಳನ್ನು ಏಕಮುಖವಾಗಿ ತೀರ್ಮಾನಿಸಲಾಗಿತ್ತು. ಈ ಕಾಯ್ದೆಗಳ ವಿರುದ್ಧ ದೇಶದ ರೈತರು ದಿಲ್ಲಿಯ ಗಡಿಯಲ್ಲಿ ಸುಮಾರು ಒಂದು ವರ್ಷ ಕಾಲ ಧರಣಿ ಕೂತರು. 700ಕ್ಕೂ ಹೆಚ್ಚು ರೈತರು ಪ್ರಾಣ ತೆತ್ತರು. ಇಷ್ಟೆಲ್ಲ ಆದಮೇಲೆ 2021ರಲ್ಲಿ ಮಣಿದ ಪ್ರಧಾನಿ ಮೋದಿಯವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದರು.
ಈಗ, ಮೂರನೇ ಬಾರಿಗೆ ಪ್ರಧಾನಿಯಾಗಿರುವ ಮೋದಿಯವರು ದೇಶದ ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸುವ ವಕ್ಫ್(ತಿದ್ದುಪಡಿ) ಮಸೂದೆ ತರಲು ಮುಂದಾದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಲುವಾಗಿ ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆಗೂ ಕೈ ಹಾಕಿದರು. ಅಷ್ಟೇ ಅಲ್ಲ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಮೀಸಲಾತಿ ಮೇಲೆ ಗಂಭೀರ ಪರಿಣಾಮ ಬೀರುವ; ನಿರುದ್ಯೋಗ ಸಮಸ್ಯೆಯನ್ನು ಉಲ್ಬಣಿಸುವ ಲ್ಯಾಟರಲ್ ಎಂಟ್ರಿ- ಹಿಂಬಾಗಿಲ ಮೂಲಕ ನೇರ ನೇಮಕಾತಿಗೂ ಮುಂದಾದರು.
ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಜನ ನೀಡಿದ ತೀರ್ಪಿನಿಂದಾಗಿ, ಬಿಜೆಪಿ 240 ಸ್ಥಾನಗಳಿಗೆ ಕುಸಿದ ಪರಿಣಾಮವಾಗಿ, ಅವರ ಆಟ ನಡೆಯಲಿಲ್ಲ. ಅದಕ್ಕೆ ಕಾರಣ ಜನ 249ಕ್ಕೂ ಹೆಚ್ಚು ವಿರೋಧ ಪಕ್ಷದ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡಿದ್ದು. ಅವರು ಲೋಕಸಭೆಯಲ್ಲಿ ಜನರ ಪರವಾಗಿ ಗಟ್ಟಿಯಾಗಿ ದನಿ ಎತ್ತಿದ್ದು. ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿದ್ದು.
ಇದು ಪ್ರಜಾಸತ್ತೆಯ ಜಯ. ಸಂವಿಧಾನಕ್ಕೆ ಸಂದ ಜಯ. ಜನರ ಜಯ.
ದೇಶದ ಜನ ಮತದ ಈ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕಿದೆ. ಆಳುವ ಸರ್ಕಾರಕ್ಕೆ ಅಂಕುಶ ಹಾಕಿ, ಸರಿ ದಾರಿಯಲ್ಲಿ, ಎಲ್ಲರಿಗೂ ಒಳಿತಾಗುವ ಹಾದಿಯಲ್ಲಿ ಕಾಯ್ದೆ ಕಾನೂನುಗಳನ್ನು ರೂಪಿಸುವಂತೆ ಮಾಡುವಲ್ಲಿ ತಮ್ಮ ಒಂದು ಮತ ಮಾಡುವ ಬದಲಾವಣೆಯನ್ನು ಅರಿಯಬೇಕಿದೆ.

ಇದು ನಿಜವಾದ ಪರಜಾಪ್ರಭುತ್ವ. ಇದು ನಿಜವಾದ ಜನರ ಜಯ
ಈ ನಮ್ಮ ದೇಶದಲ್ಲಿ ಇನ್ನುಮುಂದೆ ಆದರೂ ಒಳ್ಳೆ ದಿನಗಳು ಬರತ್ತಾವೇ
ಎಂಬ ನಂಬಿಕೆ ನನಗಿದೆ. ಜನರು ಬುದ್ದಿವಂತರಗುತ್ತಿದ್ದಾರೆ.