ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರನ್ನು ಕಾಯಂ ಮಾಡುವಂತೆ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲೆಯ ಹುಣಸೂರಿನ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ
ಎನ್‌ಎಚ್‌ಎಂ ಒಳಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ದು, “ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಆರೋಗ್ಯ ಇಲಾಖೆಯ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರನ್ನು ಕಾಯಂ ಮಾಡುವ ಘೋಷಣೆ ಮಾಡಿತ್ತು. ಆದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ” ಎಂದರು.
ಎನ್‌ಎಚ್‌ಎಂ ಒಳಗುತ್ತಿಗೆ ನೌಕರ ಡಾ ಹರ್ಷ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈವರೆಗೆ ನುಡಿದಂತೆ ನಡೆದಿರುವ ಸರ್ಕಾರ ನಮ್ಮಗಳ ವಿಚಾರದಲ್ಲಿಯೂ ನುಡಿದಂತೆ ನಡೆದುಕೊಳ್ಳಬೇಕು. ಒಳಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು” ಎಂದು ಮನವಿ ಮಾಡಿದರು.
“17 ವರ್ಷಗಳಿಂದ ಆಯುಷ್ಮಾನ್ ವಿಭಾಗದಲ್ಲಿ ಗುತ್ತಿಗೆ ಆಧಾರಿತ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈವರೆಗೆ ಕಾಯಮಾತಿ ಆಗಲಿಲ್ಲ. ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುವ ನಮಗೆ ಯಾವುದೇ ಭದ್ರತೆ ಇಲ್ಲ. ಸರ್ಕಾರ ನಮ್ಮಗಳ ಸೇವೆಯನ್ನು ಗುರುತಿಸಿ ಕಾಯಂ ಮಾಡಬೇಕು” ಎಂದರು.
ನರ್ಸಿಂಗ್ ಆಫೀಸರ್ ಬೃಂದಾ ಮಾತನಾಡಿ, “ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಆರು ತಿಂಗಳೇ ಕಳೆಯುತ್ತ ಬಂದಿದ್ದರೂ ಕೂಡಾ ಗುತ್ತಿಗೆ ಸಿಬ್ಬಂದಿಗಳನ್ನು ಕಾಯಂ ಮಾಡುವ ಕೆಲಸಕ್ಕೆ ಮುಂದಾಗಿಲ್ಲ. ಸುಮಾರು 6 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಕೇವಲ ₹12,000 ವೇತನ ಪಡೆಯಬೇಕಿದೆ. ನಮ್ಮದು ಒಂದು ರೀತಿಯ ಜೀತ ಪದ್ಧತಿಯೇ ಸರಿ. ಕಡಿಮೆ ಸಂಬಳಕ್ಕೆ ಇಡೀ ದಿನ ದುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“₹12 ಸಾವಿರದಲ್ಲಿ ಬದುಕುವುದಾದರೂ ಹೇಗೆ? ಮಕ್ಕಳನ್ನು ಶಾಲೆಗೆ ಕಳಿಸುವುದಾ? ಮನೆ ಬಾಡಿಗೆ ಕಟ್ಟಲು ಆಗುತ್ತದೆಯೇ, ಇಲ್ಲ ತಿಂಗಳ ಜೀವನದ ನಿರ್ವಹಣೆ ಆಗುತ್ತಾ? ಇದನ್ನೆಲ್ಲ ಸರ್ಕಾರ ಯೋಚಿಸಬೇಕಿತ್ತು. ಆದರೆ ಈವರೆಗೆ ನಮ್ಮಗಳ ಕಷ್ಟ ತಿಳಿಯಲೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶ ಆಯ್ಕೆ ಪಟ್ಟಿ ಬಿಡುಗಡೆಗೆ ಎಸ್ಎಫ್ಐ ಆಗ್ರಹ
“ನೌಕರರನ್ನು ಕಾಯಂಗೊಳಿಸುವುದು ಬಹಳ ದಿನಗಳ ಬೇಡಿಕೆಯಾಗಿದೆ. ಯಾವುದೇ ಸರ್ಕಾರ ಬಂದರೂ ಕೇವಲ ಭರವಸೆಯಾಗಿ ಉಳಿಯುತ್ತದೆಯೇ ಹೊರತು ಅನುಷ್ಠಾನ ಆಗುವುದೇ ಇಲ್ಲ. ನಾವುಗಳು ಕೇವಲ ಪ್ರಚಾರದ ಸರಕಾಗಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಹಾಗಾಗಿ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಕೈಗೆ ಕಪ್ಪುಪಟ್ಟಿ ಧರಿಸಿ ರೋಗಿಗಳಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಣೆ ಮಾಡುತ್ತ ಮೌನ ಪ್ರತಿಭಟನೆ ಮಾಡುತ್ತಿದ್ದೇವೆ” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮೋಹನ್, ರಶ್ಮಿ ಸೇರಿದಂತೆ ಹಲವರು ಇದ್ದರು.