ಸಾವಯವ ಕೃಷಿ ಪದ್ಧತಿಯಲ್ಲಿ ತಂಬಾಕು ಬೆಳೆಯುವಂತಾಗಬೇಕು. ಇದರಿಂದಾಗಿ ರೈತರಿಗೆ ಖರ್ಚು ಉಳಿಯುತ್ತದೆ ಮತ್ತು ಗೊಬ್ಬರದ ನಿರ್ವಹಣೆಗೆ ತಗುಲುವ ವೆಚ್ಚ ಉಳಿತಾಯವಾಗುತ್ತದೆ. ಇದೊಂದು ಉತ್ತಮವಾದ ಪದ್ಧತಿ ಎಂದು ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.
ಮೈಸೂರು ಜಿಲ್ಲೆಯ ಹುಣಸೂರಿನ ತಂಬಾಕು ಮಂಡಳಿಯಿಂದ ಹೊಸೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿರುವ ತಂಬಾಕಿನ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
“ತಂಬಾಕು ಹದಮಾಡಲು ಲಕ್ಷಾಂತರ ಟನ್ ಸೌದೆಗಾಗಿ ಮರಗಳನ್ನು ಕಡಿಯಲಾಗುತ್ತದೆ. ಇದರಿಂದ ಅರಣ್ಯನಾಶ, ಮರಗಿಡಗಳ ನಾಶವಾಗುತ್ತಿದೆ. ಸದ್ಯ ಬೇರೆ ದಾರಿ ಕಾಣದೆ ರೈತರು ಸೌದೆಯ ಮೊರೆ ಹೋಗಿದ್ದಾರೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ತಂಬಾಕನ್ನು ಸೌದೆರಹಿತ ಕ್ಯೂರಿಂಗ್ ಮಾಡುವ ತಂತ್ರಜ್ಞಾನವನ್ನು ಕಂಡುಹಿಡಿಯಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಎಲ್ಲವೂ ಸಾಧ್ಯ. ವಿದ್ಯುತ್ ಉಪಕರಣ, ಸೋಲಾರ್ ಇತ್ಯಾದಿ ಬಳಸುವುದರ ಮೂಲಕ ಮರಗಿಡಗಳನ್ನು ರಕ್ಷಿಸಲು ನೆರವಾಗಬೇಕು” ಎಂದು ಮನವಿ ಮಾಡಿದರು.
ತಂಬಾಕು ಮಂಡಳಿ ಹರಾಜು ಅಧೀಕ್ಷಕ ನಿವೇಶ ಕುಮಾರ್ ಪಾಂಡೆ ಮಾತನಾಡಿ, “ತಂಬಾಕು ಬೆಳೆಯಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ರೈತರಿಗೆ ಲಾಭವೇ ಹೊರತು ಅನಾನುಕೂಲಗಳಿಲ್ಲ. ವೆಚ್ಚ ಉಳಿತಾಯ, ಗೊಬ್ಬರದ ಉಳಿತಾಯ ಮಾಡಬಹುದು. ಕೆಲಸವೂ ಕೂಡ ಸರಾಗವಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶ ಆಯ್ಕೆ ಪಟ್ಟಿ ಬಿಡುಗಡೆಗೆ ಎಸ್ಎಫ್ಐ ಆಗ್ರಹ
“ತಂಬಾಕು ಮಂಡಳಿಯಿಂದ ನಿಲ್ಸೋಡ್ ರೈತರಿಗೆ ಮತ್ತು ಕಡಿಮೆ ಸೊಪ್ಪನ್ನು ಮಾರಾಟ ಮಾಡಿದ ರೈತರಿಗೆ ವಿಧಿಸುತ್ತಿದ್ದ ದಂಡವನ್ನು ರದ್ದು ಮಾಡಲಾಗಿದೆ” ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ರಾಮೇಗೌಡ, ಚಿಕ್ಕ ತಮ್ಮಪ್ಪ, ಮಂಜೇಗೌಡ, ಹಳೆ ವರಂಜಿ ಲೋಕೇಶ, ಸಾವಯವ ಕೃಷಿ ಪದ್ಧತಿ ಮಾಡಿರುವ ಹೊಸೂರಿನ ರೈತ ಸುರೇಶ್, ವಿ ಎಸ್ ರಘು, ಗುರು, ಪುರದ ಪ್ರಕಾಶ್ ತಂಬಾಕು ಮಂಡಳಿಯ ಕ್ಷೇತ್ರ ಅಧಿಕಾರಿ ನಿರುಪಾದಿ ಸ್ವಾಮಿ, ಕ್ಷೇತ್ರ ಸಹಾಯಕ ನಾರಾಯಣ ಐಟಿಸಿ ಮತ್ತು ಜಿಪಿಐ ಕಂಪನಿಯ ಸಿಬ್ಬಂದಿಗಳು ಇದ್ದರು.