ರಸ್ತೆ ಮೇಲೆಯೇ ಹರಿಯುವ ಕೊಳಚೆ ನೀರು, ನಿತ್ಯವು ದುರ್ನಾತ, ಮೂಗು ಮುಚ್ಚಿಕೊಂಡು, ಹರಿಯುವ ಕೊಳಚೆಯಲ್ಲಿ ನಡೆದಾಡುವ ರಸ್ತೆ. ರಸ್ತೆಯುದ್ಧಕ್ಕೂ ತಗ್ಗು ಗುಂಡಿಗಳು, ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವ ಸ್ಥಿತಿಗೆ ಗ್ರಾಮದ ಜನರು ರೋಸಿ ಹೋಗಿದ್ದಾರೆ. ಇದು ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯ ದುಸ್ಥಿತಿ.
ಮಾಡಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೈನಾಪುರ ಗ್ರಾಮದಲ್ಲಿರುವ ಪರಿಶಿಷ್ಟರ ಕಾಲೋನಿಯಲ್ಲಿ ಚರಂಡಿಯಲ್ಲಿ ಹರಿಯುವ ಕೊಳಚೆ ರಸ್ತೆ ಮೇಲೆ ಹರಿಯುತ್ತಿದ್ದರೂ, ಸ್ಥಳೀಯ ಗ್ರಾಮ ಪಂಚಾಯಿತಿಯಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲೀ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಯಾರೊಬ್ಬರು ಗಮನ ಹರಿಸುತ್ತಿಲ್ಲ. ಈ ಅವ್ಯವಸ್ಥೆಯಿಂದಾಗಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಗ್ರಾಮಸ್ಥರು ದಿನದೂಡುತ್ತಿದ್ದಾರೆ.
ಗ್ರಾಮದ ಮುಖ್ಯ ರಸ್ತೆಯಲ್ಲಿಯೇ ಸುಮಾರು ವರ್ಷಗಳಿಂದ ಕೊಳಚೆ ನೀರು ಹರಿಯುತ್ತಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಸರಾಗವಾಗಿ ಹರಿಯಬೇಕಿದ್ದ ಕೊಳಚೆ ನೀರು, ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸೊಳ್ಳೆಗಳು ಜಾಸ್ತಿ ಆಗುತ್ತಿವೆ. ಡೆಂಘೀ ಸೇರಿದಂತೆ ಸಾಂಕ್ರಾಮಿಕ ಕಾಯಿಲೆ ಭೀತಿಯಲ್ಲಿ ಗ್ರಾಮಸ್ಥರನ್ನು ಕಾಡುತ್ತಿದೆ. ದ್ವಿಚಕ್ರ ವಾಹನ ಸವಾರರು, ವಿದ್ಯಾರ್ಥಿಗಳು, ವೃದ್ಧರು ಈ ರಸ್ತೆಯಲ್ಲಿ ಆತಂಕದಿಂದಲೇ ಪ್ರಯಾಣಿಸುತ್ತಾರೆ. ಮಳೆಯಾದರಂತು ರಸ್ತೆ ತುಂಬೆಲ್ಲ ನೀರು ನಿಂತು ಕೆಸರಿನಂತಾಗುತ್ತದೆ. ಇದರಲ್ಲಿಯೇ ದುರ್ಗಾದೇವಿ ಗುಡಿಗೆ ಹೋಗುವಂತಾಗಿದೆ.

ಸರಿಯಾದ ಬಸ್ ವ್ಯವಸ್ಥೆ ಕೂಡ ಇಲ್ಲ
ನೈನಪುರ ಗ್ರಾಮವು ರೋಣ ತಾಲೂಕಿಗೆ ಒಳಪಟ್ಟಿದ್ದರೂ ಗ್ರಾಮದ ಜನರು ವ್ಯಾಪಾರ ವಹಿವಾಟು ನಡೆಸಲು ಬೇಲೂರು ಪಟ್ಟಣಕ್ಕೆ ಹೋಗುತ್ತಾರೆ. ಹಾಗೆ ಗ್ರಾಮದ ವಿದ್ಯಾರ್ಥಿಗಳು ಬೇಲೂರು, ಬಾದಾಮಿಗೆ ಹೆಚ್ಚಾಗಿ ಹೋಗುತ್ತಾರೆ. ಅದರೆ ನೈನಾಪುರ ಗ್ರಾಮದಿಂದ ಬೇಲೂರಿಗೆ ಏಳು ಕಿ ಲೋ ಮೀಟರ್ ಇದ್ದು, ರಸ್ತೆಯುದ್ಧಕ್ಕೂ ತಗ್ಗು ಗುಂಡಿಗಳಿವೆ. ಸುಮಾರು ವರ್ಷಗಳಿಂದ ಈ ಮಾರ್ಗವಾಗಿ ಬಸ್ಸಿನ ಸೌಲಭ್ಯಗಳೇ ಇಲ್ಲ. ವಿದ್ಯಾರ್ಥಿಗಳು ಜನರು ನಡೆದುಕೊಂಡು ಅಥವಾ ಆಟೋ, ಬೈಕ್ ಮೇಲೆ ತಗ್ಗು ಗುಂಡಿಗಳ ನಡುವೆ ಜೀವ ಕೈಯಲ್ಲಿ ಇಡಿದು ಸಂಚಾರ ಮಾಡುತ್ತಾರೆ.
ಈ ಕುರಿತು ಈ ದಿನ.ಕಾಮ್ನೊಂದಿಗೆ ಮಾತನಾಡಿದ ಗ್ರಾಮಸ್ಥ ಮಲ್ಲಪ್ಪ ಭಾವಿ, “ಸುಮಾರು ವರ್ಷಗಳಿಂದ ಗಟಾರ್ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಸಾಕಷ್ಟು ಮಂದಿ ಈಗಾಗಲೇ ರಸ್ತೆ ಗುಂಡಿಯಿಂದಾಗಿ ಬಿದ್ದಿದ್ದಾರೆ. ಅಧಿಕಾರಿಗಳಾಗಲಿ, ಶಾಸಕರಾಗಲಿ, ಗ್ರಾಮ ಪಂಚಾಯಿತಿಯವರಾಗಲೀ ಒಮ್ಮೆಯೂ ಕಣ್ಣು ಹಾಯಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ‘ಈ ದಿನ’ ಫಲಶೃತಿ | ಚಿಕ್ಕಮಗಳೂರಿನ ಬೆಳಗೋಡು ಅಂಗನವಾಡಿಗೆ ‘ವಿದ್ಯುತ್ ಭಾಗ್ಯ’
ಶಿವರಾಜ್ ಮಾದರ ಮಾತನಾಡಿ, “ಪರಿಶಿಷ್ಟರ ಕಾಲೋನಿಯಲ್ಲಿ ಗಟಾರ್ ಸಮಸ್ಯೆ ಬಾಳ್ ಐತಿ. ಸೊಳ್ಳೆಗಳು ಜಾಸ್ತಿ ಆಗ್ಯಾವೆ. ಯಾರ್ ಕೂಡ ಈ ಬಗ್ಗೆ ಮಾತ್ನಾಡಲ್ಲ, ಗಮನಾನೂ ಹರಿಸಲ್ಲ. ನಮ್ ಊರಿನ್ ಮಕ್ಳು ಬೇಲೂರು ಬಾದಾಮಿಗೆ ಶಾಲಿ-ಕಾಲೇಜಿಗೆ ಹೋಗ್ತಾರ. ಆದ್ರೆ ಬಸ್ಸೇ ಇಲ್ಲ. ದಿನನಿತ್ಯ ನಡ್ಕೊಂಡು ಆಟೋ ಬೈಕ್ ಕೈ ಮಾಡಿ ಹತಗೊಂಡು ಬರ್ತಾರ್ರಿ” ಎಂದು ಹೇಳಿದರು.
ಈ ಕುರಿತು ಈ ದಿನ.ಕಾಮ್ ಜೊತೆಗೆ ಗ್ರಾಮದ ಪಿಡಿಓ ಚನ್ನಪ್ಪ ಇಬ್ರಾಹೀಂಪುರ ಮಾತನಾಡಿ, ಕಾಲೋನಿಗಳಿಗೆ ಭೇಟಿ ನೀಡಿ, ಜನರೊಂದಿಗೆ ಮಾತನಾಡಿ, ರಸ್ತೆ ಮೇಲೆ ಚರಂಡಿ ನೀರು ಹರಿಯದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.