ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಪೂರ್ಣಗೊಳ್ಳುವ ಹಂತ ತಲುಪಿದ್ದು ಸದ್ಯದಲ್ಲೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದರು.
ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಹೈದರಾಬಾದ್‌ನಿಂದ ಎಫ್ಎಸ್‌ಎಲ್ ವರದಿಗಳು ಬರಬೇಕಿದೆ. ಇಂದು ಸಂಜೆ ಅಥವಾ ನಾಳೆ ವರದಿಗಳು ಕೈ ಸೇರಬಹುದು. ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಎಲ್ಲ ವರದಿಗಳೂ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಕೈಸೇರಿವೆ” ಎಂದರು.
ನಟ ಚಿಕ್ಕಣ್ಣ ಕುರಿತು ಪ್ರತಿಕ್ರಿಯಿಸಿ, “ಕೊಲೆ ಮಾಡಿದ್ದ ಆರೋಪದಡಿ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದು ಅವರನ್ನು ನಟ ಚಿಕ್ಕಣ್ಣ ಭೇಟಿಯಾಗಿದ್ದಾರೆ. ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಜೂನ್ 8ರಂದು ಕೃತ್ಯ ನಡೆಯುವುದಕ್ಕೂ ಮೊದಲು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ನಟ ಚಿಕ್ಕಣ್ಣ ಅವರು ದರ್ಶನ್ ಜೊತೆಗೆ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಅವರಿಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರು. ನಂತರ ಅವರನ್ನು ಸಾಕ್ಷಿಧಾರರನ್ನಾಗಿ ಮಾಡಿ ನ್ಯಾಯಾಧೀಶರ ಎದುರು 164ರ ಅಡಿ ಹೇಳಿಕೆ ದಾಖಲಿಸಲಾಗಿದೆ. ಸಾಕ್ಷಿಧಾರ ಆರೋಪಿಯನ್ನು ಭೇಟಿಯಾಗಿದ್ದರಿಂದ ಚಿಕ್ಕಣ್ಣ ಮೇಲೆ ಕಾನೂನು ಕ್ರಮ ಆಗುವ ಸಧ್ಯತೆ ಹೆಚ್ಚಿದೆ.