ವೈದ್ಯಕೀಯ ಸಿಬ್ಬಂದಿ ಸುರಕ್ಷತೆ; ಸರ್ಕಾರ – ಸಮಾಜದ ಕರ್ತವ್ಯಗಳ ಕುರಿತು ತಜ್ಞರು ಹೇಳುವುದೇನು?

Date:

Advertisements
ಆಸ್ಪತ್ರೆಗೆ ಬರುವ ಬಡ ರೋಗಿಯ ಉಚಿತ, ನ್ಯಾಯಯುತ ಮತ್ತು ಸಂಪೂರ್ಣ ಆರೋಗ್ಯದ ನಿರೀಕ್ಷೆಗಳು ಈಡೇರುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಹೊರಗಿನ ವೆಚ್ಚವನ್ನು ಕಡಿಮೆ ಮಾಡಬೇಕು. ಆದ್ದರಿಂದ, ಜಾರಿಗೊಳಿಸುವ ಕಾನೂನುಗಳು ವೈದ್ಯ – ನಾಗರಿಕ ಸಮಾಜದ ಸಹಬಾಳ್ವೆಯನ್ನು ಸೃಷ್ಟಿಸಬೇಕು. ಸಮ ಸಮಾಜ ನಿರ್ಮಾಣವಾಗಬೇಕು ಎಂದು ಐಎಂಎ ಅಧ್ಯಕ್ಷ ಆರ್.ವಿ. ಅಶೋಕನ್ ಮತ್ತು ಸಾಮಾಜಿಕ ಸಮಾನತೆಗಾಗಿ ವೈದ್ಯರ ಸಂಘಟನೆಯ ಕಾರ್ಯದರ್ಶಿ ಶಾಂತಿ ರವೀಂದ್ರನ್ ಅಭಿಮತ...

ಕೋಲ್ಕತ್ತದ ಆರ್‌ ಜಿ ಕರ್‌ ಆಸ್ಪತ್ರೆಯಲ್ಲಿ ಇತ್ತೀಚಿಗೆ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಘಟನೆ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ಕಳೆದ 12 ವರ್ಷಗಳ ಹಿಂದೆ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ದುಷ್ಕರ್ಮಿಗಳು ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದರು. ಆ ಪ್ರಕರಣದ ನಂತರ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ತರಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಕೇಂದ್ರ ಸರ್ಕಾರ ಕೂಡ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯವೆಸಗುವ ದುಷ್ಟರಿಗೆ ಶಿಕ್ಷೆ ವಿಧಿಸುವ ‘ನಿರ್ಭಯಾ ಕಾಯ್ದೆ’ ಜಾರಿಗೊಳಿಸಿತ್ತು. ಈ ಕಾಯ್ದೆ ಅನುಷ್ಠಾನಕ್ಕೆ ಬಂದ ನಂತರವೂ ಮಹಿಳೆಯರ ವಿರುದ್ಧ ಅಮಾನುಷ ಕೃತ್ಯಗಳು ಕಡಿಮೆಯಾಗಿಲ್ಲ. ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲೆ ಸಂಖ್ಯೆಗಳು ಹೆಚ್ಚಾಗುತ್ತಲೇ ಇವೆ.

ಪ್ರಸ್ತುತ ಕೋಲ್ಕತ್ತದ ಪ್ರಕರಣ ವೈದ್ಯರು, ದಾದಿಯರು, ಅರೆ ವೈದ್ಯಕೀಯ ವೃತ್ತಿನಿರತರು, ಪ್ರಯೋಗಾಲಯಗಳ ಪರೀಕ್ಷಕರು ಮುಂತಾದ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗಾಗಿ ದೇಶಾದ್ಯಂತ ಅನ್ವಯವಾಗುವ ಏಕರೂಪ ಕಾನೂನು ರೂಪಿಸಲು ಒತ್ತಡ ಬಂದಿದೆ. ಸುಪ್ರೀಂ ಕೋರ್ಟ್ ಕೂಡ ಮಧ್ಯ ಪ್ರವೇಶಿಸಿ ಕಠಿಣ ಕಾನೂನು ರೂಪಿಸುವಂತೆ ಆದೇಶಿಸಿದೆ. ಕಳೆದ ಎರಡು ಮೂರು ದಶಕಗಳಲ್ಲಿ ಇಂತಹ ಹಿಂಸಾಚಾರದ ಘಟನೆಗಳನ್ನು ನಾವು ಆಗಾಗ ಕಾಣುತ್ತಿದ್ದೇವೆ. ದೇಶದ 25 ರಾಜ್ಯಗಳು ವೈದ್ಯಕೀಯ ಸಿಬ್ಬಂದಿ ಸುರಕ್ಷತೆಯ ಬಗ್ಗೆ ತಮ್ಮದೆ ಆದ ಕಾನೂನುಗಳನ್ನು ಜಾರಿಗೊಳಿಸಿವೆ. ಆದರೆ ರಾಷ್ಟ್ರಮಟ್ಟದಲ್ಲಿ ವೈದ್ಯಕೀಯ ಸಿಬ್ಬಂದಿಗಾಗಿ ಪ್ರಬಲವಾದ ಕಾನೂನನ್ನು ರೂಪಿಸಲಾಗಿಲ್ಲ. 2019ರಲ್ಲಿ ವೈದ್ಯಕೀಯ ಸೇವಾ ಕಾರ್ಯಕರ್ತರಿಗೆ ಮಸೂದೆಯನ್ನು ರಚಿಸಲು ಕರಡು ಸಿದ್ದಪಡಿಸಲಾಯಿತಾದರೂ ಇಲ್ಲಿಯವರೆಗೂ ಕಾರ್ಯಗತಗೊಂಡಿಲ್ಲ.

Doc protest 1

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ವಿರುದ್ಧ ಹಲವು ರೀತಿಯಲ್ಲಿ ವಾರ್ಷಿಕ ಶೇ 8 ರಿಂದ 38ರಷ್ಟು ಹಿಂಸಾತ್ಮಕ ಪ್ರಕರಣಗಳು ಜರುಗುತ್ತಿರುತ್ತವೆ. ಪ್ರತಿಯೊಂದು ರಾಷ್ಟ್ರವು ಸೇವೆ, ರಕ್ಷಣೆ ಮುಂತಾದವನ್ನು ಒಳಗೊಂಡು ಆರೋಗ್ಯ ಕ್ಷೇತ್ರಕ್ಕಾಗಿ ತಮ್ಮ ಜಿಡಿಪಿಯಲ್ಲಿ ಶೇ.6 ರಷ್ಟು ಮೀಸಲಿಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಮಾನದಂಡವನ್ನು ವಿಧಿಸಿದೆ. ಆದರೆ ಕೆಲವೇ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ ವಿಶ್ವದ ಯಾವೊಂದು ರಾಷ್ಟ್ರವು ಈ ನಿಯಮವನ್ನು ಪಾಲಿಸುತ್ತಿಲ್ಲ. ಭಾರತ ಆರೋಗ್ಯ ಸೇವೆಗಾಗಿ ಖರ್ಚು ಮಾಡುತ್ತಿರುವುದು ದೇಶದ ಜಿಡಿಪಿಯಲ್ಲಿ ಶೇ. 2ಕ್ಕಿಂತ ಕಡಿಮೆ. ಆರೋಗ್ಯ ಕ್ಷೇತ್ರದ ಪರಿಣಿತರ ಪ್ರಕಾರ ಸರ್ಕಾರಿ ಮಟ್ಟದಲ್ಲಿ ಪಾರದರ್ಶಕತೆಯೊಂದಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಗಳು ಸಾರ್ವಜನಿಕರಿಗೆ ಲಭಿಸಿದರೆ ಹಿಂಸಾತ್ಮಕ ಪ್ರಕರಣಗಳು ಆದಷ್ಟು ಇಳಿಕೆಯಾಗುತ್ತವೆ. ಆದರೆ ಆಳುವ ಸರ್ಕಾರಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಖಾಸಗಿಯವರಿಗೆ ಹೆಚ್ಚು ಆದ್ಯತೆ ನೀಡುತ್ತಾ ಜನ ಸಾಮಾನ್ಯರನ್ನು ಬಲಿಪಶುಗಳನ್ನಾಗಿ ಮಾಡುತ್ತಿವೆ.

Advertisements

ಗುಣಮಟ್ಟದ ಸೌಕರ್ಯ ಅಗತ್ಯ

ಹೆಚ್ಚಿನ ಆಸ್ಪತ್ರೆಗಳು, ವಿಶೇಷವಾಗಿ ಸರ್ಕಾರಿ ಮತ್ತು ವೈದ್ಯಕೀಯ ಕಾಲೇಜುಗಳು ತಮ್ಮ ಆಡಳಿತವನ್ನು ನಡೆಸಲು ಇಂಟರ್ನಿಗಳು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಆಯಾ ವಿಭಾಗದಲ್ಲಿ ತರಬೇತಿ ಪಡೆದಿರುವ ಸೂಪರ್ ಸ್ಪೆಷಾಲಿಟಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತವೆ. ಇವರೆಲ್ಲರೂ ಆರೋಗ್ಯ ಸೇವೆಯ ಶಕ್ತಿಯಾಗಿ ಸಾಮಾನ್ಯ ಜನರೊಂದಿಗೆ ದೀರ್ಘ ಸಮಯದವರೆಗೂ ಕೆಲಸ ಮಾಡುತ್ತಾರೆ. ಸಾರ್ವಜನಿಕರೊಂದಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸರಿಯಾದ ತರಬೇತಿಯಿರದ ಕಾರಣ ವಿದ್ಯಾರ್ಥಿಗಳು ಹಿಂಸೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಬರುವ ವಿದ್ಯಾರ್ಥಿಗಳು ತಮ್ಮ ವೃತ್ತಿಬದುಕಿಗಾಗಿ ಕಲಿಯಲು ಬರುತ್ತಾರೆಯೇ ಹೊರತು ಶಾಶ್ವತ ವೈದ್ಯರಾಗಿ ಬರುವುದಿಲ್ಲ.

ಆದರೆ ಪೂರ್ಣಾವಧಿ ಸೇವೆ ಸಲ್ಲಿಸುವ ವೈದ್ಯರು ಹೆಚ್ಚಾಗಿ ಟ್ರೈನಿ ವಿದ್ಯಾರ್ಥಿಗಳಿಗೆ ಹೊರೆ ನೀಡಿ ತಾವು ಸಲೀಸಾಗುವ ಸಂದರ್ಭಗಳೇ ಬಹುತೇಕ ಕಡೆ ಹೆಚ್ಚಿರುತ್ತವೆ. ರಾಷ್ಟ್ರೀಯ ಮಾನಸಿಕ ಆಯೋಗ(ಎನ್‌ಎಂಸಿ) ಇತ್ತೀಚಿಗೆ ಅಧ್ಯಯನವನ್ನು ಪ್ರಕಟಿಸಿದ್ದು, ಕೆಲಸದ ಒತ್ತಡ ಹಾಗೂ ಮುಂತಾದ ಕಾರಣಗಳಿಂದಾಗಿ ಹೆಚ್ಚಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ. ಕೇಂದ್ರ ಸರ್ಕಾರವು ಸಿದ್ಧಪಡಿಸಹೊರಟಿರುವ ನೂತನ ಮಸೂದೆಯಲ್ಲಿ ಈ ಅಂಶವನ್ನು ಪ್ರಮುಖವಾಗಿ ಪರಿಗಣಿಸಬೇಕಾಗಿದೆ. ಅಲ್ಲದೆ ಗುಣಮಟ್ಟದ ಸೌಕರ್ಯವು ಇಂತಹ ವಿದ್ಯಾರ್ಥಿಗಳ ಸುರಕ್ಷತೆಗೆ ಸಹಾಯ ಮಾಡುತ್ತದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಮುಖ್ಯ ನಿರ್ಧಾರಗಳಿಂದ ಹಿಂದೆ ಸರಿದ ಮೋದಿ, ಇದು ಪ್ರಜಾಸತ್ತೆಯ ಗೆಲುವು

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಶಿಫಾರಸ್ಸು ಅನ್ವಯ ದೇಶದ ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ರೋಗಿಗಳ ನಡುವೆ ಬಾಂಧವ್ಯವನ್ನು ಸುಧಾರಿಸುವ ಮೂಲಕ ಸುರಕ್ಷತಾ ಕ್ರಮಗಳನ್ನು ಖಾತ್ರಿಪಡಿಸಬೇಕಿದೆ. ವಿಶೇಷವಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಭದ್ರತಾ ಪ್ರೋಟೋಕಾಲ್‌ಅನ್ನು ಅಳವಡಿಸಿಕೊಳ್ಳುವ ಮೂಲಕ ವೈದ್ಯಕೀಯ ಸಿಬ್ಬಂದಿ – ರೋಗಿಗಳೊಂದಿಗೆ ಸಂಬಂಧಿಸಿದ ಹಿಂಸಾಚಾರದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಈ ಬಗ್ಗೆ ಎನ್‌ಎಂಸಿ ವೈದ್ಯಕೀಯ ಕಾಲೇಜುಗಳಿಗೆ ಈಗಾಗಲೇ ಆಸ್ಪತ್ರೆ ಆವರಣದೊಳಗೆ ವಿದ್ಯಾರ್ಥಿಗಳು ಮತ್ತು ಆರೋಗ್ಯ ವೃತ್ತಿಪರರ ಸುರಕ್ಷತೆಯನ್ನು ಹೆಚ್ಚಿಸಲು ಪ್ರತಿ ವೈದ್ಯಕೀಯ ಕಾಲೇಜು ಸಮಗ್ರ ನೀತಿಯನ್ನು ಅಭಿವೃದ್ಧಿಪಡಿಸುವ ಮತ್ತು ಅನುಷ್ಠಾನಗೊಳಿಸುವ ಅಗತ್ಯವನ್ನು ಒತ್ತಿಹೇಳುವ ಸಲಹೆಯನ್ನು ನೀಡಿದೆ. ಈ ಅಂಶವು ನಿಜವಾಗಿಯೂ ಸುರಕ್ಷತೆ ದೃಷ್ಟಿಯಿಂದ ಹೆಚ್ಚು ಸಹಾಯಕವಾಗುತ್ತದೆ. ಆಸ್ಪತ್ರೆಯ ಭದ್ರತೆಯ ಎಲ್ಲ ಅಂಶಗಳನ್ನು ಪರಿಶೀಲಿಸಲು ಪ್ರತಿ ಆಸ್ಪತ್ರೆಯು ಆಸ್ಪತ್ರೆ ಸಂರಕ್ಷಣಾ ಸಮಿತಿಯನ್ನು ಹೊಂದಿರಬೇಕು. ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತಾ ಸಿಬ್ಬಂದಿ ಇರಬೇಕು. ಅವರು ಆಸ್ಪತ್ರೆಯಲ್ಲಿ ಕೆಲಸ ಮಾಡುವ ವಿಶೇಷವಾಗಿ ಆರೋಗ್ಯ ಕಾರ್ಯಕರ್ತರ ಸುರಕ್ಷತೆ ಮತ್ತು ಭದ್ರತೆಗೆ ಜವಾಬ್ದಾರರಾಗಿರಬೇಕು.

ಅನುಷ್ಠಾನಗೊಳ್ಳದ 2019ರ ಮಸೂದೆ

ಹಲವು ಕಡೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳ ನಂತರ ವೈದ್ಯಕೀಯ ಸಿಬ್ಬಂದಿಗೆ ಸುರಕ್ಷತೆಯ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ 2019ರಲ್ಲಿ ಆರೋಗ್ಯ ಸಚಿವರ ಅಡಿಯಲ್ಲಿ, ಮೂರು ಗೃಹ, ಕಾನೂನು ಮತ್ತು ಆರೋಗ್ಯ ಸಚಿವಾಲಯಗಳನ್ನು ಒಳಗೊಂಡ ಮಸೂದೆಯನ್ನು ರಚಿಸಿತ್ತು. ವಿಧೇಯಕ ರಚನೆಗೂ ಮುನ್ನ ಸಾಕಷ್ಟು ಸಮಾಲೋಚನೆ ನಡೆಸಲಾಗಿತ್ತು. ಆರೋಗ್ಯ ಕ್ಷೇತ್ರದ ಪರಿಣಿತರ ಅಂಶಗಳು ನೂತನ ಕರಡಿನಲ್ಲಿ ಒಳಗೊಂಡಿತ್ತು. ಈ ಮಸೂದೆಯಲ್ಲಿ ವೈದ್ಯರ ಜೊತೆ ಚಿಕಿತ್ಸೆಗೆ ಬಂದ ರೋಗಿಗಳು ಹಾಗೂ ಸಾರ್ವಜನಿಕರೂ ಈ ಶಿಷ್ಟಾಚಾರದ ಪ್ರಯೋಜನ ಪಡೆಯಬಹುದಾಗಿತ್ತು. ಆದರೆ ಆ ಮಸೂದೆಯನ್ನು ಅನುಷ್ಠಾನಗೊಳಿಸಲಾಗಲಿಲ್ಲ. ಹಣಕಾಸು ಅಥವಾ ಖಾಸಗಿ ರಂಗದ ಕಾಣದ ಕೈಗಳ ಒತ್ತಡದಿಂದಲೋ ಏನೋ ಕೇಂದ್ರವು ಇಂತಹ ಮಸೂದೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿತ್ತು. ಕೆಲವೊಂದು ವಿಚಾರದಲ್ಲಿ ತತ್‌ಕ್ಷಣದಲ್ಲಿ ಕ್ರಮ ಕೈಗೊಳ್ಳುವ ಕೇಂದ್ರ ಸರ್ಕಾರ ಆರೋಗ್ಯಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳಲ್ಲಿ ಮಾತ್ರ ಹಿಂದೇಟು ಹಾಕುತ್ತಿದೆ. ಕೋಲ್ಕತ ಘಟನೆ ಮುನ್ನೆಲೆಗೆ ಬಂದಿರುವ ಕಾರಣ 2019ರ ಮಸೂದೆಯನ್ನು ಮತ್ತಷ್ಟು ಪ್ರಮುಖ ಅಂಶಗಳ ತಿದ್ದುಪಡಿಗಳೊಂದಿಗೆ ಪುನಃ ಅನುಷ್ಠಾನಗೊಳಿಸಬೇಕೆಂದು ಆಗ್ರಹ ಕೇಳಿ ಬರುತ್ತಿದೆ.

Doc protest 2

ವೈದ್ಯ – ನಾಗರಿಕ ಸಮಾಜ ಸಹಬಾಳ್ವೆ ಅಗತ್ಯ

ಕೋಲ್ಕತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಇತ್ತೀಚಿನ ಆದೇಶದಂತೆ ವೈದ್ಯಕೀಯ ಕ್ಷೇತ್ರ ಸಿಬ್ಬಂದಿ ಸುರಕ್ಷತೆಗಾಗಿ ರಾಷ್ಟ್ರೀಯ ಕಾರ್ಯಪಡೆ ರಚಿಸಬೇಕೆಂದು ಆದೇಶಿಸಿದೆ. ದೇಶದಲ್ಲಿ ವೈದ್ಯರ ಮೇಲೆ ನೂರಾರು ದಾಳಿಗಳು ನಡೆದರೂ ಕೆಲವೇ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಕೇರಳ ಸರ್ಕಾರದ ಕಾಯ್ದೆ ವೈದ್ಯಕೀಯ ಸಿಬ್ಬಂದಿಗೆ ಒಂದಷ್ಟು ಅನುಕೂಲಗಳನ್ನು ಒದಗಿಸುತ್ತದೆ. ಕೇರಳದಲ್ಲಿ 2023ರಲ್ಲಿ ಕಿರಿಯ ವೈದ್ಯೆ ವಂದನಾ ದಾಸ್ ಅವರನ್ನು ಶಿಕ್ಷಕನೊಬ್ಬ ಕೊಲೆ ಮಾಡಿದ್ದ. ಅದರ ನಂತರ ಹೈಕೋರ್ಟ್ ಆದೇಶದ ಮೇರೆಗೆ ಕೇರಳವು ಆರೋಗ್ಯ ಸುರಕ್ಷತಾ ಕಾಯ್ದೆಗೆ ತಿದ್ದುಪಡಿ ತಂದು ಕಠಿಣ ಕಾನೂನನ್ನು ರೂಪಿಸಿತು. ಹೊಸ ನಿಯಮದ ಅನ್ವಯ ವೈದ್ಯರು, ಕ್ಲರ್ಕ್‌ಗಳು, ಭದ್ರತಾ ಸಿಬ್ಬಂದಿ ಮತ್ತು ಆಸ್ಪತ್ರೆಯ ಇತರ ಕೆಲಸಗಾರರ ಮೇಲೆ ಹಲ್ಲೆ ನಡೆದರೆ ಒಂದು ಗಂಟೆಯಲ್ಲಿ ಎಫ್‌ಐಆರ್ ದಾಖಲಿಸಿ ತ್ವರಿತಗತಿಯಲ್ಲಿ ವಿಚಾರಣೆ ಕೈಗೊಳ್ಳಬೇಕಾಗಿದೆ. ಕೇರಳದ ನೂತನ ಕಾಯ್ದೆಯನ್ನು ಕೇಂದ್ರ ಅಳವಡಿಸಿಕೊಳ್ಳಬೇಕೆಂದು ಐಎಂಎ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ.

ಭಾರತದಲ್ಲಿ ವೈದ್ಯಕೀಯ ಸಿಬ್ಬಂದಿ ವಿರುದ್ಧ ಹಿಂಸಾಚಾರ ನಡೆಯುತ್ತಿದೆ ಎಂಬುದನ್ನು ಸರಿಯಾದ ರೀತಿಯಲ್ಲಿ ಒಪ್ಪಿಕೊಳ್ಳುವಲ್ಲಿ ಸರ್ಕಾರಕ್ಕೆ ಸಮಸ್ಯೆ ಇದ್ದಂತಿದೆ. ಆದರೆ ವಾಸ್ತವವು ಎಲ್ಲರಿಗೂ ಗೋಚರಿಸುತ್ತದೆ. ಹಿಂಸಾಚಾರದ ವಿಷಯವನ್ನು ನೀವು ನೋಡಿದರೆ, ಭದ್ರತಾ ವ್ಯವಸ್ಥೆಗಳಿಂದಾಗಿ ಕಾರ್ಪೊರೇಟ್ ಆಸ್ಪತ್ರೆಗಳು ಹೆಚ್ಚು ಸುರಕ್ಷಿತವಾಗಿವೆ. ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ವಲಯದ ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳಲ್ಲಿ ಹಿಂಸಾಚಾರ ಹೆಚ್ಚಿರುತ್ತದೆ. ಭ್ರಷ್ಟಾಚಾರ, ಅವ್ಯವಸ್ಥೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಆಡಳಿತ ನಡೆಸುವವರ ಅಸಡ್ಡೆಯಿಂದಾಗಿ ಗಲಭೆಗಳು ಹೆಚ್ಚಾಗಿ ಸಂಭವಿಸುತ್ತಿದೆ.

ಇದೇ ಸಂದರ್ಭದಲ್ಲಿ ಮತ್ತೊಂದು ಪ್ರಮುಖ ವಿಚಾರವೆಂದರೆ, ಸರಕ್ಷತಾ ದೃಷ್ಟಿಯಿಂದ ವೈದ್ಯಕೀಯ ಸಿಬ್ಬಂದಿಗೆ ಕೇಂದ್ರದಿಂದ ಕಠಿಣ ಕಾಯಿದೆಯ ಅಗತ್ಯವಿದೆ. ಆದರೆ ಅದೇ ಸಮಯದಲ್ಲಿ, ಕೇಂದ್ರ ಕಾಯ್ದೆಯು ರಾಜ್ಯದ ಮತ್ತು ರೋಗಿಗಳ, ಸಾರ್ವಜನಿಕರ ಹಕ್ಕುಗಳನ್ನು ಕಸಿದುಕೊಳ್ಳಬಾರದು. ಆರೋಗ್ಯ ಕಾರ್ಯಕರ್ತರ ವಿರುದ್ಧ ಹಿಂಸಾಚಾರದ ಘಟನೆಗಳನ್ನು ಕಡಿಮೆ ಮಾಡಲು ಕಾನೂನು ಸಹಾಯ ಮಾಡುತ್ತದೆ. ಆದರೆ ಈ ಘಟನೆಗಳು ಏಕೆ ಸಂಭವಿಸುತ್ತಿವೆ ಎಂಬುದನ್ನು ನೀತಿ ನಿರೂಪಕರು ಪರಿಶೀಲಿಸಬೇಕಿದೆ. ಆಸ್ಪತ್ರೆಗೆ ಬರುವ ಬಡ ರೋಗಿಯ ಉಚಿತ, ನ್ಯಾಯಯುತ ಮತ್ತು ಸಂಪೂರ್ಣ ಆರೋಗ್ಯದ ನಿರೀಕ್ಷೆಗಳು ಈಡೇರುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಹೊರಗಿನ ವೆಚ್ಚವನ್ನು ಕಡಿಮೆ ಮಾಡಬೇಕು. ಆದ್ದರಿಂದ, ನೆಲದ ಮೇಲೆ ಜಾರಿಗೊಳಿಸುವ ಕಾನೂನುಗಳು ವೈದ್ಯ – ನಾಗರಿಕ ಸಮಾಜದ ಸಹಬಾಳ್ವೆಯನ್ನು ಸೃಷ್ಟಿಸಬೇಕು. ಸಮ ಸಮಾಜ ನಿರ್ಮಾಣವಾಗಬೇಕು.

ಕೃಪೆ: ದಿ ಹಿಂದೂ, ಕನ್ನಡಕ್ಕೆ: ಚೇತನ್ ಕುಮಾರ್

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X