ಈ ದಿನ ಸಂಪಾದಕೀಯ | ಮೋದಿಯವರನ್ನು ಮಾತಿನಿಂದಲೇ ತಿವಿದ ರಾಹುಲ್‌; ಕಾಶ್ಮೀರದಲ್ಲಿ ಪ್ರೀತಿಯ ಅಂಗಡಿ ತೆರೆಯುವರೇ?

Date:

Advertisements

ಕಳೆದ ಲೋಕಸಭಾ ಚುನಾವಣೆಯಲ್ಲಿ INDIA ಮೈತ್ರಿಕೂಟ ಮೋದಿಯವರ ಅಹಂಕಾರವನ್ನು ಛಿದ್ರ ಮಾಡಿದೆ. ಹಿಗ್ಗಿದ್ದ ಅವರ ಎದೆ ಈಗ ಕುಗ್ಗಿದೆ ಎಂದು ಮಾತಿನಲ್ಲೇ ಮೋದಿಯವರನ್ನು ತಿವಿದಿದ್ದಾರೆ ರಾಹುಲ್‌ ಗಾಂಧಿ.

ಒಂದೆಡೆ ಪ್ರಧಾನಿ ಮೋದಿ ಅವರ ಕಳಾಹೀನ ಮುಖ, ತಗ್ಗಿದ ಮಾತಿನ ಅಬ್ಬರ. ಮತ್ತೊಂದೆಡೆ ರಾಹುಲ್‌ ಗಾಂಧಿಯವರ ಮೊನಚು ಮತ್ತು ಅಷ್ಟೇ ನಿರ್ಬಿಢೆಯ ಮಾತುಗಾರಿಕೆ, ಇದು ಬದಲಾದ ಭಾರತದ ಎರಡು ಬಿಂಬಗಳಂತೆ ಕಾಣಿಸುತ್ತಿದೆ. ರಾಹುಲ್‌ ಗಾಂಧಿಯವರ ಮುಖದಲ್ಲಿ ಲೋಕಸಭಾ ಚುನಾವಣೆಯ ಸುಸ್ತು ಕಾಣಿಸುತ್ತಿಲ್ಲ. ಭಾರತ್‌ ಜೋಡೋ ಯಾತ್ರೆಯ ಮುಂದುವರಿದ ಭಾಗದಂತಿದೆ ರಾಹುಲ್‌ ಚುರುಕಿನ ಕಾರ್ಯಾಚರಣೆ. ಅದು ವಯನಾಡಿನ ದುರಂತ ಸ್ಥಳದ ಭೇಟಿಯೇ ಇರಬಹುದು ಅಥವಾ ಕಾರ್ಮಿಕರು, ಜನಸಾಮಾನ್ಯರ ಜೊತೆ ಬೆರೆಯುವುದೇ ಇರಲಿ ಅವರೊಬ್ಬ ಪಳಗಿದ ಜನನಾಯಕರಂತೆ ಕಾಣುತ್ತಾರೆ. ಅಷ್ಟೇ ಅಲ್ಲ, ಸದ್ಯ ಭವಿಷ್ಯದ ಸಮರ್ಥ ನಾಯಕನಾಗುವ ಸೂಚನೆಗಳು ಮೂಡಿವೆ. ಲೋಕಸಭೆಗೆ ರಾಹುಲ್‌ ಬಂದರೆ ಅವರನ್ನು ಮುತ್ತಿಕೊಳ್ಳುವ, ಗೌರವಿಸುವ ವಿಪಕ್ಷಗಳ ಸದಸ್ಯರ ನಡೆ ಆಡಳಿತ ಪಕ್ಷದ ಕಣ್ಣು ಕುಕ್ಕಿದೆ. ಈ ಮಧ್ಯೆ ಮತ್ತೆ ಮೂರು ರಾಜ್ಯಗಳ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಗಡಿಯಾರದ ಮುಳ್ಳು ಇಂಡಿಯಾ ಒಕ್ಕೂಟದ ಕಡೆಗೇ ನೆಟ್ಟಿದೆ.

ಜಮ್ಮು ಕಾಶ್ಮೀರದಲ್ಲಿ ಸೆಪ್ಟಂಬರ್‌ 18, 25, ಅ.1ರಂದು ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ. 2019ರಲ್ಲಿ ಎರಡನೇ ಅವಧಿಗೆ ಮೋದಿ ಪ್ರಧಾನಿಯಾದ ಕೂಡಲೇ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್‌ 370 ರದ್ದು ಮಾಡಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶ ಘೋಷಿಸಿದ್ದರು. ಆನಂತರ ಅಲ್ಲಿ ನಡೆಯುತ್ತಿರುವ ಮೊದಲ ಚುನಾವಣೆಯಿದೆ. ಫಾರೂಕ್‌ ಅಬ್ದುಲ್ಲಾ ಅವರ ಪಕ್ಷ ನ್ಯಾಷನಲ್‌ ಕಾನ್ಫರೆನ್ಸ್‌ ಇಂಡಿಯಾ ಮೈತ್ರಿ ಕೂಟದ ಪಾಲುದಾರ. ಕಾಂಗ್ರೆಸ್‌ ಮತ್ತು ಎನ್‌ಸಿಪಿ 90 ಕ್ಷೇತ್ರಗಳಲ್ಲೂ ಸೀಟು ಹಂಚಿಕೆ ಮಾಡಿಕೊಂಡಿವೆ. ಈ ಮಧ್ಯೆ ಜಮ್ಮುವಿನಲ್ಲಿ ನಿನ್ನೆ (ಗುರುವಾರ) ರಾಹುಲ್‌ಗಾಂಧಿ ಮಾಡಿದ ಭಾಷಣ ಕಾರ್ಯಕರ್ತರಿಗೆ ಹುರುಪು ತುಂಬುವಂತಿತ್ತು; ಮಾತ್ರವಲ್ಲ ನರೇಂದ್ರ ಮೋದಿಯವರನ್ನು ತಿವಿಯುವಂತಿತ್ತು.

Advertisements

ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಪ್ರಧಾನಿ ಮೋದಿಯವರ ಅಹಂಕಾರವನ್ನು ಛಿದ್ರ ಮಾಡಿದೆ. ಅವರ ಎದೆ ಹಿಂದೆ ಹಿಗ್ಗಿತ್ತು, ಈಗ ಕುಗ್ಗಿದೆ ಎಂದು ಎದೆಯನ್ನು ಹಿಗ್ಗಿಸಿ ತೋರಿಸುತ್ತಾ ರಾಹುಲ್‌ ಗಾಂಧಿ ಮಾತಿನಲ್ಲೇ ಮೋದಿಯವರ ಎದೆಗೆ ಗುರಿಯಿಟ್ಟರು. “ಮೋದಿಯವರನ್ನು ಸೋಲಿಸಿದ್ದು ರಾಹುಲ್‌ ಅಲ್ಲ, ಕಾಂಗ್ರೆಸ್‌ ಮತ್ತು ಇಂಡಿಯಾ ಒಕ್ಕೂಟದ ತತ್ವ ಸಿದ್ಧಾಂತ, ಒಗ್ಗಟ್ಟು ಮೋದಿಯವರನ್ನು ಸೋಲಿಸಿದೆ. ನಾವು ಯಾವುದೇ ಬೈಗುಳ ಬಳಸಿಲ್ಲ, ಹಿಂಸೆಯ ಮಾತಾಡಿಲ್ಲ, ಆದರೆ ಮೋದಿ ಅವೆಲ್ಲವನ್ನೂ ಮಾಡಿದರು. ಮೋದಿಯವರನ್ನು ನಾವು ಏನು ಎಂದುಕೊಂಡಿದ್ದೆವೋ ಅದು ನಿಜವಲ್ಲ. ಅವರ ಆತ್ಮವಿಶ್ವಾಸವನ್ನು ನಾವು ಒಡೆದು ಹಾಕಿದ್ದೇವೆ” ಎಂದು ಎಂದಿನ ಆತ್ಮವಿಶ್ವಾಸದಿಂದಲೇ ಹೇಳಿದರು.

“ಇನ್ನು ಮುಂದೆ ನಾನಿದ್ದಾಗ ಮೋದಿ ಸಂಸತ್ತಿಗೆ ಬರಲ್ಲ, ಬರೆದಿಟ್ಟುಕೊಳ್ಳಿ” ಎಂದು ಬಜೆಟ್‌ ಅಧಿವೇಶದಲ್ಲಿ ರಾಹುಲ್‌ ಹೇಳಿದ್ದರು. ಈಗ ನೋಡಿದರೆ ಕಣಿವೆ ರಾಜ್ಯದ ಚುನಾವಣಾ ಪ್ರಚಾರಕ್ಕೆ ಮೋದಿ ಅಡಿಯಿಡುವ ಮುನ್ನವೇ ಮಾತಿನಲ್ಲೇ ತಿವಿಯಲು ಶುರು ಮಾಡಿದ್ದಾರೆ. ʼಯುವರಾಜʼನ ವಯಸ್ಸಿನಷ್ಟು ಸೀಟೂ ಕಾಂಗ್ರೆಸ್‌ಗೆ ಸಿಕ್ಕಲ್ಲ ಎಂದು ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಮೋದಿ ಆಡಿಕೊಂಡಿದ್ದರು. ಆದರೆ, ಅವರೇ ನಾಲ್ಕುನೂರರ ಗಡಿ ತಲುಪುವುದಿರಲಿ ಮುನ್ನೂರರ ಹತ್ತಿರವೂ ತಲುಪಿಲ್ಲ. ಈಗ ಅವರ ಮಾತಿನ ವರಸೆ ಏನಿರಬಹುದು ಎಂಬ ಕುತೂಹಲವಿದೆ. ಯಾಕೆಂದರೆ ಆರ್ಟಿಕಲ್‌ 370 ತೆಗೆದ ನಂತರ ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿಯ ಪರ್ವ ಶುರುವಾಗಲಿದೆ, ಭಾರೀ ಹೂಡಿಕೆಯಾಗಲಿದೆ ಎಂದು ಮೋದಿ ಹೇಳಿದ್ದರು. ಆ ನಂತರ ಏನಾಗಿದೆ ಎಂಬುದನ್ನು ದೇಶವೇ ಗಮನಿಸಿದೆ.

ಎರಡು ವರ್ಷಗಳ ಹಿಂದೆ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ 12 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶ ಹಾಗೂ 150 ದಿನಗಳ ಕಾಲ 3570 ಕಿ. ಮೀ ನಡಿಗೆ ಸಮಾಪ್ತಿಗೊಂಡ ಶ್ರೀನಗರದಲ್ಲಿ ಅಂದು ರಾಹುಲ್‌ ʼದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುವೆʼ ಎಂಬ ಹೇಳಿಕೆ ನೀಡಿದ್ದರು. ನಿನ್ನೆ ಶ್ರೀನಗರದಲ್ಲಿ ಮತ್ತೆ ಅದನ್ನೇ ಪುನರುಚ್ಚರಿಸಿದರು. ದ್ವೇಷವನ್ನು ಪ್ರೀತಿಯಿಂದ ಸೋಲಿಸೋಣ ಎಂಬ ಅವರ ಹೇಳಿಕೆಯಲ್ಲಿ ಉದ್ದೇಶಿತ ಗುರಿಯೆಡೆಗೆ ಅರ್ಧ ದಾರಿ ತಲುಪಿದ ತೃಪ್ತಿ ಇದ್ದಂತಿತ್ತು.

ದೇಶದ ಇತಿಹಾಸದಲ್ಲಿ ಹಲವು ಕೇಂದ್ರಾಡಳಿತ ಪ್ರದೇಶಗಳು ರಾಜ್ಯಗಳಾಗಿವೆ. ಆದರೆ, ರಾಜ್ಯವೊಂದು ಕೇಂದ್ರಾಡಳಿತ ಪ್ರದೇಶವಾಗಿದ್ದು ಇದೇ ಮೊದಲು. ನಾವು ಕಾಶ್ಮೀರಕ್ಕೆ ರಾಜ್ಯತ್ವ ಸ್ಥಾನ ಮರಳಿಸಲು ಬದ್ಧ ಎಂದು ಹೇಳಿದ ರಾಹುಲ್‌ “ಕಾಶ್ಮೀರದ ಜೊತೆಗೆ ನನ್ನದು ರಕ್ತ ಸಂಬಂಧ. ಹಾಗಾಗಿ ನೀವೆಲ್ಲ ಕಾಂಗ್ರೆಸ್‌ ಕಾರ್ಯಕರ್ತರಲ್ಲ, ನಮ್ಮ ಕುಟುಂಬದ ಸದಸ್ಯರು” ಎಂದು ಭಾವನಾತ್ಮಕ ದಾಳ ಉರುಳಿಸಿದರು.

ಲೋಕಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿಯಿದ್ದಾಗ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ರಚನೆಯಾಗಿತ್ತು. ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಆರಂಭದಲ್ಲಿ ಬಹಳ ಉತ್ಸಾಹದಿಂದಲೇ ಇಂಡಿಯಾ ರಚನೆಗೆ ಕೈ ಜೋಡಿಸಿದ್ದರು. ಆದರೆ, ಇನ್ನೇನು ಚುನಾವಣೆಗೆ ಕೆಲ ತಿಂಗಳಿವೆ ಎನ್ನುವಾಗ ಎನ್‌ಡಿಎಗೆ ಬೆಂಬಲ ಸೂಚಿಸಿ ಹೊರ ನಡೆದಿದ್ದರು. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌- ಟಿಎಂಸಿ ಸೀಟು ಹಂಚಿಕೆ ಮಾತುಕತೆ ಫಲಪ್ರದವಾಗದೇ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರು. ಹಾಗಾಗಿ ಇಂಡಿಯಾ ಕೂಟ ಮತ್ತು ಕಾಂಗ್ರೆಸ್‌ ಗೆಲುವಿನ ಬಗ್ಗೆ ಅನುಮಾನಗಳು ಮೂಡಿದ್ದವು. ಆದರೆ, ಚುನಾವಣಾ ಪ್ರಚಾರ ಸಭೆಯುದ್ದಕ್ಕೂ ಪ್ರಧಾನಿ ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಆಡಿರುವ ಮಾತುಗಳು ಅವರಿಗೇ ತಿರುಗುಬಾಣವಾಗಿದ್ದವು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯ ಕಿತ್ತು ಕೊಳ್ಳುತ್ತಾರೆ. ರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕುತ್ತಾರೆ. ದೇಶದ ಸಂಪತ್ತನ್ನು ಹೆಚ್ಚು ಮಕ್ಕಳಿರುವವರಿಗೆ ಹಂಚುತ್ತಾರೆ. ಮುಸ್ಲಿಮರಿಗೆ ಮಾತ್ರ ಮೀಸಲಾತಿ ನೀಡುತ್ತಾರೆ ಎಂಬ ತಲೆ ಬುಡವಿಲ್ಲದ ಆರೋಪಗಳು ಆರೆಸ್ಸೆಸ್‌ ಮತ್ತು ಬಿಜೆಪಿಯನ್ನೇ ಇಕ್ಕಟ್ಟಿಗೆ ಸಿಲುಕಿಸಿ ಇಂಡಿಯಾ ಕೂಟಕ್ಕೆ ಪ್ರಬಲ ಟೀಕಾಸ್ತ್ರ ನೀಡಿದ್ದವು. ಆದರೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದೆ ಮೋದಿ ಹತಾಶರಾಗಿದ್ದಾರೆ, ಚಿಂತಾಕ್ರಾಂತರಾಗಿದ್ದಾರೆ ಎಂಬುದನ್ನು ಲೋಕಸಭೆಯ ಮೊದಲ ಅಧಿವೇಶನದಲ್ಲಿ ಅವರ ಕಳೆಗುಂದಿದ ಮುಖವೇ ತೋರಿಸಿತ್ತು. ʼಇಸ್‌ ಬಾರ್‌ ಚಾರ್‌ ಸೌ ಪಾರ್‌ʼ ಘೋಷಣೆ ಈಗ ವಿಪಕ್ಷಗಳ ಪಾಲಿಗೆ ಗೇಲಿಯ ಸಾಲುಗಳಾಗಿದೆ.

ಲೋಕಸಭಾ ಚುನಾವಣೆ ಘೋಷಣೆಗೆ ಎರಡು ತಿಂಗಳಿರುವಾಗ ಅಪೂರ್ಣವಾಗಿರುವ ರಾಮಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠೆ ನೆರವೇರಿಸಿದ ಮೋದಿ ಚುನಾವಣೆ ಗೆದ್ದ ಖುಷಿಯಲ್ಲಿದ್ದರು. ಅತ್ತ ತಮ್ಮನ್ನು ಮೀರಿ ಬೆಳೆದ ಕಾಲಾಳುವಿನ ಬಗ್ಗೆ ಆರೆಸ್ಸೆಸ್‌ ಕೆಂಡವಾಗಿತ್ತು. ಆದರೂ ಮೋದಿ ಮತ್ತೆ ಪ್ರಧಾನಿಯಾಗಿದ್ದಾರೆ. ಮಿತ್ರ ಪಕ್ಷಗಳಾದ ಜೆಡಿಯು ಮತ್ತು ತೆಲುಗು ದೇಶಂ ಬೆಂಬಲ ಇರುವವರೆಗೆ ಮೋದಿಯವರ ಸ್ಥಾನಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಭಾವಿಸಲಾಗಿದೆ. ಆದರೆ, ಈಗ ನಡೆಯಲಿರುವ ಜಮ್ಮು- ಕಾಶ್ಮೀರ, ಹರಿಯಾಣ, ಜಾರ್ಖಂಡ್‌, ಮಹಾರಾಷ್ಟ್ರ ಅಲ್ಲದೇ ಮುಂದಿನ ವರ್ಷ ನಡೆಯಲಿರುವ ದೆಹಲಿ ಚುನಾವಣೆಗಳು ಮೋದಿಯವರ ಕುರ್ಚಿಯನ್ನು ಅಲುಗಾಡಿಸಿದರೆ ಅಚ್ಚರಿಯಿಲ್ಲ. ‌

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X