- ಬಂದ್‌ಗೆ ಕರೆ ನೀಡಿದ್ದ ದಲಿತ ಸಂಘಟನೆಗಳ ಒಕ್ಕೂಟ
- ದಲಿತ ನೌಕರನ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲು ಹಕ್ಕೊತ್ತಾಯ
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕು ಸಮುದಾಯ ಆರೋಗ್ಯ ಕೇಂದ್ರ ಸರಕಾರಿ ಸೇವೆ ಮಾಡುತ್ತಿದ್ದ ದಲಿತ ನೌಕರ ಶಶಿಕಾಂತ ಮನೋಹರ ಬೆನ್ನೂರ ಇವರ ಸಾವಿಗೆ ಕಾರಣರಾದ ಅಧಿಕಾರಿಗಳ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ‘ತಾಳಿಕೋಟೆ ಬಂದ್’ ಯಶಸ್ವಿಯಾಗಿದೆ.
ದಲಿತ ಯುವಕನ ಆತ್ಮಹತ್ಯೆಗೆ ಕಾರಣರಾದ ಆಡಳಿತಾಧಿಕಾರಿ ಹಾಗೂ ಸಿಬ್ಬಂದಿಗಳು ಹಾಗೂ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಳಿಕೋಟೆ ನಗರದಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟವು ಬಂದ್‌ಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತಾಳಿಕೋಟಿಯ ಸಾಮಾನ್ಯ ಜನಗಳು ನಗರದ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಿ, ಸಹಕರಿಸಿದರು.
ತಾಳಿಕೋಟಿಯ ಬೀದಿಬದಿ ವ್ಯಾಪಾರಸ್ಥರು, ಪ್ರಗತಿಪರ ಸಂಘಟನೆಯ ಮುಖಂಡರು, ಜಮಾತ್ ಸಂಘಟನೆಯ ಮುಖಂಡರು ಹೋರಾಟದ ಭಾಗವಾಗಿ ಎಲ್ಲ ಅಂಗಡಿಗಳನ್ನು ಬಂದ್ ಮಾಡಿದ್ದರು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸಾರಿಗೆ ಸಂಸ್ಥೆಯು ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿತ್ತು.

ನಗರದ ಹೃದಯಬಾಗವಾದ ಬಸವೇಶ್ವರ ವೃತ್ತದಲ್ಲಿ ಸೇರಿ ಮಾನವ ಸರಪಳಿ ಮಾಡಿದ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು, ನಂತರ ಅಂಬೇಡ್ಕರ್ ವೃತ್ತದಿಂದ ಅಂಬಾಬಾಯಿ ಗುಡಿ ಮಾರ್ಗವಾಗಿ ಕತ್ರಿ ಬಜಾರ್, ವಿಠಲ್ ಮಂದಿರ, ರಾಣಾ ಪ್ರತಾಪ್ ವೃತ್ತಕ್ಕೆ ಬಂದು ಅದೇ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ಹಿರಿಯ ಮುಖಂಡ ಬಸವರಾಜ ಕಟ್ಟಿಮನಿ, “ಸಮುದಾಯ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ದಲಿತ ಯುವಕ ಶಶಿಕಾಂತ ಬೆನ್ನೂರ, ಜಾತಿನಿಂದನೆ ಮತ್ತು ಮಾನಸಿಕ ಹಿಂಸೆ ತಾಳಲಾರದೇ ಸಾವಿಗೆ ಶರಣಾಗಿದ್ದಾನೆ. ಇದಕ್ಕೆ ಕಾರಣರಾಗಿರುವ ಎಲ್ಲ ಮೇಲಧಿಕಾರಿಗಳನ್ನು ಕೂಡಲೇ ಬಂಧಿಸಬೇಕು. ನಂತರ ಅವರನ್ನು ತನಿಖೆಗೆ ಒಳಪಡಿಸಿ ಇವರ ಮೇಲೆ ಕಾನೂನೂ ಕ್ರಮ ಜರುಗಿಸಿಬೇಕಾಗಿರುವುದು ಅತೀ ಅವಶ್ಯಕವಾಗಿದೆ” ಎಂದು ಆಗ್ರಹಿಸಿದರು.
ಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಯಲ್ಲಿ ದಲಿತರ ಜೀವಗಳು ಬೇರೆ ಬೇರೆ ರೀತಿಯಲ್ಲಿ ಹೋಗುತ್ತಿವೆ. ಇವೆಲ್ಲದ್ದಕ್ಕೂ ಮೂಲಕಾರಣ ಅಲ್ಲಿರುವ ಕೆಲವು ಜಾತಿವಾದಿ ನೌಕರರು ಹಾಗೂ ವೈದ್ಯಾಧಿಕಾರಿಗಳಾಗಿದ್ದಾರೆ. ಆಸ್ಪತ್ರೆಯ ಆಡಳಿತಾಧಿಕಾರಿಗಳ ಸಹಿತ ಎಲ್ಲರೂ ಯುವಕನ ಸಾವಿಗೆ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದರು.

ದಸಂಸ ಮುಖಂಡ ಡಿ. ಬಿ. ಹಾದಿಮನಿ ಮಾತನಾಡಿ, “ದಲಿತ ನೌಕರ ಜಾತಿ ನಿಂದನೆಯ ಈ ಕ್ರೂರ ವ್ಯವಸ್ಥೆಯ ಕುಣಿಕೆಗೆ ಕೊರಳೊಡ್ಡುವ ಪರಿಸ್ಥಿತಿ ಬಂದೊದಗಿದೆ. ಇದು ತುಂಬಾ ನೋವಿನ ಸಂಗತಿಯಾಗಿದೆ.. ಆದ್ದರಿಂದಲೇ ಇದೇ ವಿಷಯವನ್ನು ತಮ್ಮ ಮುಂದಿಟ್ಟು ನಾವು ದಲಿತ ಸಂಘಟನೆಯವರು ಒಂದಾಗಿ ಒಕ್ಕೂಟ ರಚಿಸಿಕೊಂಡು ಬೀದಿಗೆ ಬಂದು ಹೋರಾಟ ಮಾಡಿದ್ದೇವೆ. ನಮ್ಮ ದಲಿತ ನೌಕರರ ಜೀವವನ್ನು ರಕ್ಷಿಸುವುದಕ್ಕಾಗಿ ಮತ್ತು ಮೃತನಾದ ದಲಿತ ಸರಕಾರಿ ನೌಕರ ಶಶಿಕಾಂತ್ ಅವರ ಸಾವಿಗೆ ಕಾರಣಕರ್ತರಾದ ಎಲ್ಲರ ಮೇಲೂ ಮೊದಲು ಎಸ್.ಸಿ/ಎಸ್.ಟಿ. ಕಾಯ್ದೆಯ ಅಡಿಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ತಾಳಿಕೋಟೆ | ಅಧಿಕಾರಿಗಳ ಕಿರುಕುಳ ಆರೋಪ: ಸ್ಟಾಫ್ ನರ್ಸ್ ಆಗಿದ್ದ ದಲಿತ ಯುವಕ ಆತ್ಮಹತ್ಯೆ
ಮೃತ ದಲಿತ ನೌಕರನ ಸಾವಿಗೆ ಕಾರಣೀಕರ್ತರಾದ ಶ್ರೀದೇವಿ ಬಗಲಿ, ಈರಣ್ಣ ವಡವಡಗಿ ಹಾಗೂ ಜ್ಯೋತಿ ಕೋಳೂರಗಿ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿಗಳು, ವೈದ್ಯರನ್ನು ಕೂಡಲೇ ಬಂಧಿಸಬೇಕು. ಅವರೆಲ್ಲರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಜೈಲಿಗಟ್ಟಬೇಕು. ಮೃತ ದಲಿತ ನೌಕರ ಶಶಿಕಾಂತ ಬೆನ್ನೂರ ಸಾವಿಗೆ ಶರಣಾಗುವುದಕ್ಕೆ ಮುನ್ನ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಮೂರು ಜನ ಅಧಿಕಾರಿಗಳಿಂದ ನಿರಂತರ ಕಿರುಕುಳ ಆಗುತ್ತಿದೆ ಎಂದು ಹಾಕಿದ್ದಾರೆ. ಶ್ರೀದೇವಿ ಬಗಲಿ, ಈರಣ್ಣ ವಡವಡಗಿ ಹಾಗೂ ಜ್ಯೋತಿ ಕೋಳೂರಗಿ ಈ ಮೂವರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅಲ್ಲದೇ, ಮುಂದಿನ ದಿನಗಳಲ್ಲಿ ಸದರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂತಹ ಘಟನೆಗಳು ನಡೆಯದಂತೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಆದೇಶ ನೀಡಬೇಕು ಹಾಗೂ ಅಲ್ಲಿನ ದಲಿತ ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು. ಒಂದು ವೇಳೆ ಮತ್ತೆ ಮರುಕಳಿಸಿದರೆ ಜಿಲ್ಲಾಧಿಕಾರಿಗಳನ್ನು, ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಸಾವಿಗೆ ಶರಣಾದಂತಹ ದಲಿತ ನೌಕರನ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಹಾಗೂ ಅವರ ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕು, ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ಈ ಸಂದರ್ಭದಲ್ಲಿ ರಾವುತ್ ತಳಕೇರಿ, ಮಹೇಶ ಛಲವಾದಿ, ಮುತ್ತಪ್ಪ ಚಮಲಾಪುರ, ಶಾಂತಪ್ಪ ಛಲವಾದಿ, ಗುರು ಗುಡಿಮನಿ, ಗೋಪಾಲ ಕಟ್ಟಿಮನಿ, ಶಂಕರ ಕಟ್ಟಿಮನಿ, ಹುಲಗಪ್ಪ ಛಲವಾದಿ, ಮಹಾಂತೇಶ ಕಟ್ಟಿಮನಿ, ಬಸವರಾಜ ಬಡಿಗೇರ, ವಿಶ್ವನಾಥ ಛಲವಾದಿ ಇತರರು ಉಪಸ್ಥಿತರಿದ್ದರು.
ವರದಿ: ರಮೇಶ್ ಎಸ್ ಹೊಸಮನಿ, ವಿಜಯಪುರ





