ಕೊಳಚೆ ನಿವಾಸಿಗಳಿಗೆ ನಿವೇಶನ ನೀಡುವಂತೆ ಭೂಮಿ ಹಾಗೂ ವಸತಿ ವಂಚಿತರು ಆಗ್ರಹಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ನಗರದ ಅಂಬೇಡ್ಕರ್ ವೃತ್ತದಿಂದ ಬಿ ಎಚ್ ರಸ್ತೆ ಮೂಲಕ ತಾಲೂಕು ಕಚೇರಿವರೆಗೂ ಕಾಲ್ನಡಿಗೆ ಜಾಥಾ ಮೂಲಕ ಪ್ರತಿಭಟನೆ ನಡೆಸಿದರು.
ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ಭೂಮಿ ಹಾಗೂ ವಸತಿ ವಂಚಿತರು ಪ್ರತಿಭಟನೆ ನಡೆಸಿದ್ದು, ಕಡೂರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
, “ಸುಮಾರು 2018ರಲ್ಲಿ ಕಡೂರು ಗ್ರಾಮದ ಸರ್ವೆ ನಂ.53 ವಾರ್ಡ್ ನಂಬರ್ 19ರ ಜಾಗದಲ್ಲಿ 40-50 ವರ್ಷಗಳಿಂದ ವಾಸವಾಗಿದ್ದ ಬಡ ಜನರನ್ನು ಏಕಾಏಕಿ ಖಾಲಿ ಮಾಡಿಸಿದ್ದು, ಜೆಸಿಬಿ ಯಂತ್ರಗಳನ್ನು ತಂದು ನೆಲಸಮ ಮಾಡಿದ್ದಾರೆ. ಅದರಲ್ಲಿ ಕೆಲವರಿಗೆ ಹಕ್ಕು ಪತ್ರಗಳಿದ್ದು, ಕಂದಾಯ ಕೂಡ ಪಾವತಿ ಮಾಡುತ್ತಿದ್ದಾರೆ. ಆದರೂ ಕೂಡಾ ಏಕಾಏಕಿ ಖುಲ್ಲಾ ಮಾಡಿ ಬದಲಿ ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಇಷ್ಟು ವರ್ಷಗಳಾದರೂ ನಿವೇಶನ ನೀಡಲಿಲ್ಲ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ಈ ಹಿಂದೆ ಇದ್ದ ಜಿಲ್ಲಾಧಿಕಾರಿಗೆ ಪ್ರತಿಭಟನೆ ಮಾಡುವ ಮೂಲಕ ಎಷ್ಟೋ ಬಾರಿ ಮನವಿ ಮಾಡಿದರೂ ಕೂಡಾ ಯಾವುದೇ ಅಧಿಕಾರಿಗಳು ಗಮನಹರಿಸಲಿಲ್ಲ. ಈವರೆಗೂ ಯಾವುದೇ ನಿವೇಶನ ನೀಡದೆ ಇರುವುದರಿಂದ ಅಲ್ಲಿ ವಾಸವಾಗಿದ್ದ ಎಲ್ಲ ಕುಟುಂಬಗಳೂ ಕೂಡ ಅತಂತ್ರ ಪರಿಸ್ಥಿತಿಯಲ್ಲಿ ಬದುಕು ನಡೆಸಬೇಕಾಗಿದೆ. ಕೂಲಿ ನಾಲಿ ಮಾಡಿ ಮನೆ ಬಾಡಿಗೆ ಕಟ್ಟಲು ಅಸಾಧ್ಯವಾಗಿದ್ದು, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಕಷ್ಟಕರವಾಗಿದೆ. ಆದ್ದರಿಂದ ತಾವು ದಯಮಾಡಿ ಕೊಳಚೆ ಪ್ರದೇಶದಿಂದ ಖುಲ್ಲಾ ಮಾಡಿರುವ ಕುಟುಂಬಗಳಿಗೆ ಸರ್ವೆ ನಂ.53ರಲ್ಲಿ ನಿವೇಶನ ಕೊಡಬೇಕು” ಎಂದು ಒತ್ತಾಯಿಸಿದರು.
ಸರ್ವೆ ನಂ.53ರಲ್ಲಿ ನಿವೇಶನ ಕೊಡದಿದ್ದಲ್ಲಿ ಪರ್ಯಾಯವಾಗಿ ಸರ್ವೆ ನಂ.3ರಲ್ಲಿ ಖಾಲಿಯಿರುವ ಸರ್ಕಾರಿ ಜಾಗದಲ್ಲಿ ನಿವೇಶನ ಮಂಜೂರು ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಕೋಟಿ ವಿಮೆಗಾಗಿ ಸತ್ತಂತೆ ನಟನೆ; ನಾಪತ್ತೆಯಾಗಿದ್ದವ ಪೊಲೀಸರಿಗೆ ಸಿಕ್ಕಿದ್ದು ಹೇಗೆ?
ಪ್ರತಿಭಟನೆಯಲ್ಲಿ ದಸಂಸ ಮುಖಂಡ ಮಂಜುನಾಥ್, ಶ್ರೀಕಾಂತ್, ಕರ್ನಾಟಕ ಜನಶಕ್ತಿಯ ಗೌಸ್ ಮೊಹದ್ದೀನ್, ಮುನ್ನ, ರೈತ ಸಂಘದ ನಿರಂಜನ್ ಮೂರ್ತಿ ಸೇರಿದಂತೆ ಭೂಮಿ ಇಲ್ಲದ ಬಡಜನರು, ಸ್ಥಳೀಯರು ಇದ್ದರು.