ಸೆಪ್ಟೆಂಬರ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರು ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ಸೆಪ್ಟೆಂಬರ್‌ನಲ್ಲಿ ಒಂದು ಖಾತೆಯನ್ನು ಮಾತ್ರ ಭರ್ತಿ ಮಾಡಬೇಕಾ? ಅಥವಾ ಕೆಲವರನ್ನು ಸಂಪುಟದಿಂದ ಹೊರಗಿಟ್ಟು, ಬೇರೆಯವರಿಗೆ ಅವಕಾಶ ಕಲ್ಪಿಸಬೇಕಾ? ಎಂಬ ಬಗ್ಗೆ ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಮುಂದುವರಿಸಿವೆ.
ಬಿಜೆಪಿ ಬೆಂಬಲಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರ ಮೇಲೆ ಒತ್ತಡ ತಂದು ಸಿದ್ದರಾಮಯ್ಯ ವಿರುದ್ಧ ಮುಡಾ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯಪಾಲರಿಂದ ಈಗಾಗಲೇ ಅನುಮತಿ ಕೊಡಿಸುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾಗಿವೆ.
ರಾಜ್ಯಪಾಲರ ನಡೆ ಅಸಂವಿಧಾನಿಕವಾಗಿದೆ ಎಂದು ಆಕ್ರೋಶ ಹೊರಹಾಕಿರುವ ರಾಜ್ಯ ಸರ್ಕಾರ, ರಾಜ್ಯಪಾಲರ ವಿರುದ್ಧ ಕಾನೂನು ಸಮರಕ್ಕೆ ಸಿದ್ಧವಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಹಿರಿಯ ಸಚಿವರ ಜತೆಗೆ ಕಾಂಗ್ರೆಸ್ ಹೈಕಮಾಂಡ್ ಶುಕ್ರವಾರ ದೀರ್ಘ ಸಮಾಲೋಚನೆ ನಡೆಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಸಮಾಲೋಚಿಸಿದ್ದಾರೆ. ಬಳಿಕ ಕರ್ನಾಟಕದ ಹಿರಿಯ ಸಚಿವರ ಜೊತೆ ಹೈಕಮಾಂಡ್ ರಾಜ್ಯದ ಈಗಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದಿದೆ.
“ಕಾಂಗ್ರೆಸ್ ಸರ್ಕಾರದ ವಿರುದ್ಧ ಷಡ್ಯಂತ್ರವನ್ನು ಕಾನೂನು ಹಾಗೂ ರಾಜಕೀಯ ಹೋರಾಟದ ಮೂಲಕವೇ ಎದುರಿಸಬೇಕು. ಈ ಪ್ರಕರಣದಲ್ಲಿ ನಮ್ಮ ಹೈಕಮಾಂಡ್ ಸರ್ಕಾರದ ಪರವಾಗಿ ಇದ್ದೇವೆ. ನಾವೆಲ್ಲ ಮುಖ್ಯಮಂತ್ರಿ ಬೆನ್ನಿಗೆ ನಿಂತಿದ್ದೇವೆ” ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೈಕಮಾಂಡ್ ಪರವಾಗಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಸಂಪುಟ ಪುನಾರಚನೆ ಬಗ್ಗೆಯೂ ಚರ್ಚೆ
ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಹಾಗೂ ಹಿರಿಯ ಸಚಿವರ ಜೊತೆಗೆ ಹೈಕಮಾಂಡ್ ಚರ್ಚಿಸುವಾಗ ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರ ಕೂಡ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಎರಡು ವಿಚಾರಗಳ ಬಗ್ಗೆ ವಿವರವಾಗಿ ಚರ್ಚಿಸಲು ಮತ್ತೊಮ್ಮೆ ದೆಹಲಿಗೆ ಬರುವುದಾಗಿ ಹೈಕಮಾಂಡ್‌ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ ಎನ್ನಲಾಗಿದೆ.
ಸಂಪುಟ ಪುನಾರಚನೆ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಒಂದು ಸ್ಥಾನ ಖಾಲಿ ಇದ್ದು, ಸೆಪ್ಟೆಂಬರ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರು ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ಸೆಪ್ಟೆಂಬರ್‌ನಲ್ಲಿ ಒಂದು ಖಾತೆಯನ್ನು ಮಾತ್ರ ಭರ್ತಿ ಮಾಡಬೇಕಾ? ಅಥವಾ ಕೆಲವರನ್ನು ಸಂಪುಟದಿಂದ ಹೊರಗಿಟ್ಟು, ಬೇರೆಯವರಿಗೆ ಅವಕಾಶ ಕಲ್ಪಿಸಬೇಕಾ? ಎಂಬ ಬಗ್ಗೆ ಇನ್ನಷ್ಟೇ ನಿರ್ಧಾರವಾಗಬೇಕಿದೆ.
ನಾಲ್ಕರಿಂದ ಏಳು ಸಚಿವರ ಕೈಬಿಡುವ ಚಿಂತನೆ
ಪಕ್ಷದೊಳಗೆ ಕೆಲವು ನಾಯಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಇರಾದೆಯಿಂದ ಹಾಲಿ ಸಚಿವರಾಗಿ ವಿಫಲರಾಗಿರುವ ನಾಲ್ಕರಿಂದ ಆರು ಮಂದಿ ಸಚಿವರನ್ನು ಕೈಬಿಟ್ಟು, ಅನುಭವಿಗಳು ಮತ್ತು ಪಕ್ಷನಿಷ್ಠರಿಗೆ ಅವಕಾಶ ನೀಡುವ ಯೋಚನೆ ಕಾಂಗ್ರೆಸ್ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಮುಂದಿದೆ.
ಮೂಲಗಳ ಪ್ರಕಾರ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಹಿಂದುಳಿದ ವರ್ಗಗಳ ಮತ್ತು ಎಸ್‍ಟಿ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಚಿವ ಎಂ ಸಿ ಸುಧಾಕರ್ ಅವರನ್ನು ಕೈಬಿಡುವ ಯೋಚನೆ ಇದೆ ಎನ್ನಲಾಗಿದೆ.
ಸಭಾಧ್ಯಕ್ಷ ಯು ಟಿ ಖಾದರ್ ಅವರಿಗೆ ಸಚಿವ ಸ್ಥಾನ ಸಿಗುವ ಮಾತುಗಳು ಕೂಡ ಕೇಳಿಬರುತ್ತಿದ್ದು, ಸ್ಥಾನ ಪಲ್ಲಟವಾಗಿ ದಿನೇಶ್ ಗುಂಡೂರಾವ್ ಅವರನ್ನು ಸಭಾಧ್ಯಕ್ಷರನ್ನಾಗಿ ಮಾಡಿ, ಆರೋಗ್ಯ ಇಲಾಖೆ ಖಾತೆಯನ್ನು ಯು ಟಿ ಖಾದರ್ ಅವರಿಗೆ ಕೊಡಬಹುದು ಎಂದು ತಿಳಿದುಬಂದಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ಬಗ್ಗೆಯೂ ಶುಕ್ರವಾರದ ಸಭೆಯಲ್ಲಿ ಚರ್ಚೆ ನಡೆದಿದ್ದು, ಸಿದ್ದರಾಮಯ್ಯ ಆಪ್ತರೇ ಈ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ. ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯಾದರೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಥವಾ ಶರಣ ಪ್ರಕಾಶ್ ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿಯಬಹುದು. ಈ ಇಬ್ಬರೂ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಪ್ತರು ಎಂಬುದು ಗಮನಾರ್ಹ.
ಸರ್ಕಾರಕ್ಕೆ ಎರಡು ವರ್ಷವಾದ ನಂತರ… ಪುನಾರಚನೆ
ಸದ್ಯಕ್ಕೆ ಬಿ ಕೆ ಹರಿಪ್ರಸಾದ್ ಅವರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಂಡು ಸರ್ಕಾರ ಎರಡು ವರ್ಷ ಪೂರೈಸಿದ ಮೇಲೆಯೇ ಸಚಿವ ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಮುಂದಾಗಬಹುದು ಎನ್ನಲಾಗಿದೆ. ಕಾರಣ ಎರಡು ವರ್ಷ ಸಚಿವರು ಅಧಿಕಾರಾವಧಿ ಪೂರ್ಣಗೊಳಿಸಿದರೆ ಹೊಸಬರಿಗೂ ಅವಕಾಶ ಮಾಡಿಕೊಡಿ ಎಂದು ಕೇಳಲು ಸುಲಭವಾಗುತ್ತದೆ. ಜೊತೆಗೆ ಎರಡು ವರ್ಷವಾದರೂ ಸಚಿವರಾಗಿದ್ದೆವು ಎನ್ನುವ ತೃಪ್ತಿ ನಾಯಕರಿಗೂ ಇರುತ್ತದೆ ಎನ್ನುವ ಯೋಚನೆ ಹೈಕಮಾಂಡ್‌ನದ್ದು. ಒಟ್ಟಾರೆ ಮುಡಾ ಪ್ರಕರಣದ ಬಿಸಿ ತಣ್ಣಗಾದ ಮೇಲೆಯೇ ಸಚಿವ ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸ್ಪಷ್ಟತೆ ಸಿಗುತ್ತದೆ ಎಂದು ದೆಹಲಿ ಮೂಲಗಳು ತಿಳಿಸಿವೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.