ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 100ಕ್ಕೂ ಹೆಚ್ಚು ಮಕ್ಕಳು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ವಾಪಸಾಗಿದ್ದಾರೆ.
ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಚೇತರಿಕೆಗೊಂಡಿರುವುದರಿಂದ ಪೋಷಕರಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ. ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಕುಷ್ಟಗಿ ತಾಲೂಕು ಆಡಳಿತ ಮಾಹಿತಿ ನೀಡಿದೆ.
ಶುಕ್ರವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ 100ಕ್ಕಿಂತಲೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ದೋಟಿಹಾಳ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಬಿಜಕಲ್ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಿ, ಚಿಕಿತ್ಸೆ ನೀಡಲಾಗಿತ್ತು. ಸಣ್ಣಪುಟ್ಟ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಶುಕ್ರವಾರ ತಡರಾತ್ರಿಯೇ ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಗುಣಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಬೆಳಗ್ಗೆ ಮನೆಗೆ ಕಳುಹಿಸಲಾಗಿದೆ.

ಈ ಸಂಬಂಧ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಕುಷ್ಟಗಿ ತಾಲೂಕು ವೈದ್ಯಾಧಿಕಾರಿ ಆನಂದ ಗೋಠುರ, “ಅಸ್ವಸ್ಥರಾದ ಶಾಲಾ ಮಕ್ಕಳು ಗುಣಮುಖರಾಗಿ ಪಾಲಕರ ಮುಖಾಂತರ ಮನೆಗೆ ಕಳುಹಿಸಲಾಗಿದೆ. ಮಧ್ಯಾಹ್ನ ಬಿಸಿಯೂಟವನ್ನು 356 ಮಕ್ಕಳು ಸೇವಿಸಿರುವುದು ಗೊತ್ತಾಗಿದೆ. ಈ ಪೈಕಿ ಸುಮಾರು ಏಳೆಂಟು ಮಕ್ಕಳಿಗೆ ವಾಂತಿ ಕಾಣಿಸಿಕೊಂಡಿತ್ತು. ಆ ಬಳಿಕ ಪೋಷಕರಲ್ಲಿ ಭಯ, ಭೀತಿ, ಗೊಂದಲ ಉಂಟಾಗಿದ್ದರಿಂದ ಎಲ್ಲ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ” ಎಂದು ಹೇಳಿದರು.
“ಬಿಸಿಯೂಟ ಸೇವಿಸಿದ್ದ ಏಳೆಂಟು ಮಕ್ಕಳಿಗೆ ವಾಂತಿ ಕಾಣಿಸಿತ್ತು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷಯ ತಿಳಿದ ನಂತರ ಎಲ್ಲ ಮಕ್ಕಳು, ನಾವು ಕೂಡ ಊಟ ಮಾಡಿದ್ದೇವೆ. ಏನಾದರೂ ಘಟನೆ ಸಂಭವಿಸಬಹುದು ಎಂಬ ಕಾರಣಕ್ಕೆ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆ ಬಳಿಕ ಮಕ್ಕಳನ್ನು ಪರೀಕ್ಷೆ ನಡೆಸಿದಾಗ ಯಾವುದೇ ಸಮಸ್ಯೆ ಆಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪೋಷಕರು ಗಾಬರಿಯಾದ ಕಾರಣಕ್ಕೆ ಎಲ್ಲ ಮಕ್ಕಳನ್ನು ತಪಾಸಣೆ ನಡೆಸಿದ್ದೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಹಾಸನ | ಕೋಟಿ ವಿಮೆಗಾಗಿ ಸತ್ತಂತೆ ನಟನೆ; ನಾಪತ್ತೆಯಾಗಿದ್ದವ ಪೊಲೀಸರಿಗೆ ಸಿಕ್ಕಿದ್ದು ಹೇಗೆ?
“ಈ ಘಟನೆಗೆ ಬಿಸಿಯೂಟದ ಸಾಂಬಾರ್‌ನಲ್ಲಿ ಹಾಕಿದ ಖಾರದ ಪುಡಿ ಎಂದು ತಿಳಿದುಬಂದಿದೆ. ಸಾಂಬಾರಿಗೆ ಬಳಸಿದ್ದ ಕಾರಣ ಸಾಂಬಾರ್ ಕೂಡ ಕೆಂಪಾಗಿತ್ತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಈ ಖಾರದ ಪುಡಿಯಿಂದಾಗಿ ಕೆಲವು ಮಕ್ಕಳಿಗೆ ಹೊಟ್ಟೆಯಲ್ಲಿ ಉರಿ ಉಂಟಾಗಿ ವಾಂತಿ ಕಾಣಿಸಿದೆ” ಎಂದು ತಿಳಿಸಿದರು.
ಈ ಘಟನೆಯ ಬಗ್ಗೆ ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಸಂಪರ್ಕಿಸಲಾಯಿತಾದರೂ, ಕರೆಯನ್ನು ಸ್ವೀಕರಿಸಲಿಲ್ಲ. ಈ ನಡುವೆ ಶಾಲೆಯ ಅಡುಗೆ ಸಿಬ್ಬಂದಿ, ಮುಖ್ಯ ಶಿಕ್ಷಕಿಯನ್ನೇ ಗದರಿಸುವಷ್ಟು ಬೆಳೆದಿದ್ದಾರೆ. ಅವರ ನಿರ್ಲಕ್ಷ್ಯವೇ ಕಾರಣ. ಅವರನ್ನು ಕೂಡಲೇ ಬದಲಾಯಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.


