ಕಾಂಗ್ರೆಸ್ ಸರ್ಕಾರದಲ್ಲಿ ಮುನ್ನೋಟ, ದೀರ್ಘಕಾಲಿಕ ಆಲೋಚನೆ, ಕಾರ್ಯತಂತ್ರದ ಕೊರತೆ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯನವರು ಮತ್ತು ಅವರ ತಂಡ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ಇನ್ನೂ ತಡವಾದರೆ– ಅದರ ಮೊದಲ ಬಲಿಪಶು ಅವರೇ ಆಗಿರುತ್ತಾರೆ; ನಂತರದಲ್ಲಿ ಕರ್ನಾಟಕದ ಹಿತಾಸಕ್ತಿಯೂ ಬಲಿಯಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಬದುಕಿನಲ್ಲಿ ಈ ಹೊತ್ತು ಅತ್ಯಂತ ಸಂದಿಗ್ಧದ ಕಾಲ. ಅಷ್ಟೇ ಅಲ್ಲ, ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೂ ಇದು ಅಗ್ನಿಪರೀಕ್ಷೆಯ ಸಂದರ್ಭ. ಸಿದ್ದರಾಮಯ್ಯನವರ ಕುರಿತು ತಕರಾರುಗಳಿದ್ದವರೂ ಹೇಳುತ್ತಾ ಇದ್ದುದು ಸ್ವಂತ ಆರ್ಥಿಕ ಸಾಮ್ರಾಜ್ಯ ಕಟ್ಟದ, ಹಣ – ಆಸ್ತಿ ಮಾಡಲು ದುರಾಸೆ ಪಡದ ಬೆರಳೆಣಿಕೆಯ ದೊಡ್ಡ ರಾಜಕೀಯ ನಾಯಕರಲ್ಲಿ ಅವರೊಬ್ಬರು ಎಂದು. ಆದರೆ ಅದೀಗ ಜನಸಾಮಾನ್ಯರ ಕಣ್ಣಿನಲ್ಲಿ ಪ್ರಶ್ನೆಗೊಳಗಾಗಿದೆ. ಹಾಗೆ ನೋಡಿದರೆ, ಇದುವರೆಗೆ ಲಭ್ಯವಿರುವ ಪುರಾವೆಗಳು ಅವರು ಅಕ್ರಮವೆಸಗಿದ್ದಕ್ಕೆ ಸಾಕ್ಷ್ಯ ಒದಗಿಸುವುದಿಲ್ಲ. ಈದಿನ.ಕಾಮ್ ಸಹ ದಾಖಲೆಗಳನ್ನು ಪರಿಶೀಲಿಸಿ ಸಿದ್ದರಾಮಯ್ಯನವರ ಮೇಲೆ ನಡೆಯುತ್ತಿರುವ ದಾಳಿಯು ದುರುದ್ದೇಶಪೂರ್ವಕ ಎಂಬ ಅನಿಸಿಕೆಯನ್ನೇ ಮುಂದಿಟ್ಟಿದೆ. ಆದರೆ, ಸಿದ್ದರಾಮಯ್ಯನವರು ಮತ್ತು ಅವರ ಸರ್ಕಾರ ತನ್ನ ಕುರಿತು ಗಂಭೀರ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಾದ ಹೊತ್ತು ಬಂದಾಗಿದೆ ಎಂಬುದು ಸ್ಪಷ್ಟವಾಗಿದೆ.
ವ್ಯಕ್ತಿಗತ ಭ್ರಷ್ಟಾಚಾರದ ದೊಡ್ಡ ಕಳಂಕ ಇಲ್ಲದಿರಬಹುದು; ಈಗಲೂ ರಾಜಕೀಯ ದುರುದ್ದೇಶದಿಂದಲೇ ಆರೋಪಗಳು ಬಂದಿರಬಹುದು. ಆದರೆ, 2013ರಿಂದ 2018ರವರೆಗಿನ ರೀತಿಯ ಸರ್ಕಾರ ಇದಲ್ಲ ಎಂದು ಹೆಚ್ಚಿನವರು ಮಾತಾಡುತ್ತಿರುವುದೇಕೆ? ಇದರ ಕಾರಣವನ್ನು ಮುಖ್ಯಮಂತ್ರಿಗಳು ಆರ್ಥಿಕ ಪರಿಸ್ಥಿತಿ, ಸಚಿವ ಸಂಪುಟದೊಳಗಿನ ಶಕ್ತಿಯ ಅಸಮತೋಲನದಲ್ಲಿ ಮಾತ್ರ ಹುಡುಕಲಾಗದು. ತಾನು ಈ ಬಾರಿಯೂ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದರಲ್ಲದೇ, ಐದು ವರ್ಷಗಳ ಕಾಲ ಇದ್ದುದರಲ್ಲಿ ಉತ್ತಮ ಆಡಳಿತ ಹೊಂದಿದ ಅನುಭವದ ಶಕ್ತಿಯನ್ನೂ ಹೊಂದಿದ್ದರು. ಹೀಗಿರುವಾಗ ಹಿಂದಿಗಿಂತ ಸಮರ್ಥವಾಗಿ ಆಳ್ವಿಕೆಯ ನಿರೀಕ್ಷೆ ಕರ್ನಾಟಕದ ಜನರಿಗಿದ್ದರೆ ಅವರ ತಪ್ಪಲ್ಲ. ಆದರೆ, ಹಿಂದಿನಷ್ಟು ಸಮರ್ಥವಾಗಿ ಇರದಿದ್ದರೂ ತೊಂದರೆಯಿಲ್ಲ; ಬಿಜೆಪಿ ಸರ್ಕಾರಕ್ಕಿಂತ ಭ್ರಷ್ಟಾಚಾರ ಕಡಿಮೆಯಾಗಲಿಲ್ಲ ಎಂಬ ಮೇಲ್ನೋಟದ ಅನಿಸಿಕೆಯೂ ರಾಜ್ಯದಲ್ಲಿ ಬಲವಾಗಿಯೇ ಇದೆ.
ಕರ್ನಾಟಕದ ಮತದಾರರನ್ನು ಒಪ್ಪಿಸುವುದು ಸುಲಭವಲ್ಲ; ಪ್ರತಿ ಚುನಾವಣೆಯಲ್ಲೂ ಆಳುವ ಸರ್ಕಾರವನ್ನು ಕಿತ್ತೊಗೆಯಲು ಶುರು ಮಾಡಿ 44 ವರ್ಷಗಳಾಗಿವೆ. ಹೀಗಿರುವಾಗ, ಹಿಂದಿನ ಸರ್ಕಾರಕ್ಕಿಂತ ಎದ್ದು ಕಾಣುವ ಒಳ್ಳೆಯ ಆಡಳಿತವನ್ನು ನೀಡುವುದು ಅಧಿಕಾರ ನಡೆಸಲು ಬಯಸುವ ಯಾವುದೇ ಪಕ್ಷ ಅಥವಾ ಸಚಿವ ಸಂಪುಟ ಅಥವಾ ಮುಖ್ಯಮಂತ್ರಿ ಮಾಡಲೇಬೇಕಾದ ಕೆಲಸ. ಅದನ್ನು ಮಾಡಲು ಬೇಕಾದ ಸಿದ್ಧತೆಯನ್ನು ಸಿದ್ದರಾಮಯ್ಯನವರಾಗಲೀ, ಅವರ ತಂಡದ ಇತರ ಸಚಿವರಾಗಲೀ, ಪಕ್ಷವಾಗಲೀ ಮಾಡಿಕೊಂಡಿತ್ತೇ ಎಂಬುದು ಪ್ರಶ್ನೆ. ಆ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಗಂಭೀರ ಆತ್ಮಾವಲೋಕನಕ್ಕೆ ಇಳಿಯಲು ಇದಕ್ಕಿಂತ ಬೇರೆ ಸಂದರ್ಭ ಬೇಕಿಲ್ಲ. ಏಕೆಂದರೆ, ಕಳೆದ 15 ತಿಂಗಳಲ್ಲಿ ನಾವು ಸರ್ಕಾರದ ವತಿಯಿಂದ, ಮುಖ್ಯಮಂತ್ರಿಗಳ ಕಡೆಯಿಂದ ಕೇಳದೇ ಇರುವ ಪದಗಳೆಂದರೆ ʼಒಳ್ಳೆಯ ಆಡಳಿತ, ಭ್ರಷ್ಟಾಚಾರ ಮುಕ್ತ ಸರ್ಕಾರʼ.
ಚುನಾವಣಾ ಖರ್ಚು ಮಿತಿ ಮೀರಿ ಏರುತ್ತಿರುವ ದುರಂತ ನಮ್ಮ ಪ್ರಜಾಪ್ರಭುತ್ವವನ್ನು ಕಾಡುತ್ತಿದೆ ಎಂಬುದು ನಿಜ. ಹಾಗಾಗಿಯೇ ಈ ಸಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಬಹಳ ಹಸಿವೆಯನ್ನು ಹೊಂದಿದ್ದಂತೆ ಕಾಣುತ್ತಿತ್ತು. ಅದನ್ನು ನಿಗ್ರಹಿಸಿ, ಆರಂಭದಿಂದಲೇ ಒಳ್ಳೆಯ ಆಡಳಿತದ ಕಡೆಗೆ ಗಮನ ಕೊಟ್ಟು, ಹಂತಹಂತವಾಗಿ ಗ್ಯಾರಂಟಿಗಳನ್ನು ಜಾರಿ ಮಾಡುತ್ತಾ, ಸ್ಪಷ್ಟವಾದ ಮುನ್ನೋಟವೊಂದನ್ನು ರೂಪಿಸಿಕೊಂಡು ಸಾಗುವ ಅಗತ್ಯವಿತ್ತು. ಅಂತಹ ಯಾವ ಚಿಂತನೆ ಅಥವಾ ಕ್ರಿಯೆಗೂ ಅವಕಾಶವಿಲ್ಲದಂತೆ, ಮೊದಲ ತಿಂಗಳಿಂದಲೇ ಕಾಲದ ಕೈಗೆ ಎಲ್ಲವನ್ನೂ ಒಪ್ಪಿಸಿದಂತೆ ಕಂಡಿತು. ಗ್ಯಾರಂಟಿಗಳೆಂಬ ಜನಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿದ್ದು, ಜಾರಿ ಮಾಡಿದ್ದರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಹೆಚ್ಚೆಂದರೆ, ಅದರ ಗಾತ್ರ, ಜಾರಿಯ ಸ್ವರೂಪ, ಫಲಾನುಭವಿಗಳ ವ್ಯಾಪ್ತಿ, ಜಾರಿಯ ಟೈಂಲೈನ್‌ನಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಸೂಚಿಸಬಹುದು ಅಷ್ಟೇ. ಆದರೆ, ಜನರ ಹಕ್ಕಾಗಿ ಇದನ್ನು ಜಾರಿ ಮಾಡುತ್ತಿದ್ದೇವೆಂಬ ಬಗ್ಗೆ ಎಲ್ಲಾ ಸಚಿವರೂ, ಶಾಸಕರಲ್ಲೂ ಒಮ್ಮತ ಮತ್ತು ಆ ಸಂದೇಶವನ್ನು ಜನರಿಗೆ ತಲುಪಿಸಲು ಈವರೆಗೂ ಸಾಧ್ಯವಾಗಿಲ್ಲ.
ಎರಡನೆಯದಾಗಿ, ವರ್ಗಾವಣೆಗಳು ನಡೆದ ರೀತಿ, ವರ್ಗಾವಣೆಗಳಲ್ಲಿನ ಭ್ರಷ್ಟಾಚಾರವು ಈ ಸರ್ಕಾರದ ದೊಡ್ಡ ಸಮಸ್ಯೆಯೆಂದು ಸಂಬಂಧಪಟ್ಟವರಿಗೆ ಇನ್ನೂ ಅರ್ಥವಾದಂತಿಲ್ಲ. ಒಂದು ಸಾರಿ ಹಣ ಕೊಟ್ಟು ನಿರ್ದಿಷ್ಟ ಜಾಗಕ್ಕೆ ಬಂದವರಿಂದ ಜನೋಪಯೋಗಿ ದಕ್ಷ ಕಾರ್ಯಾಚರಣೆ ನಿರೀಕ್ಷಿಸುವುದು ಹೇಗೆ? ಸರ್ಕಾರವೊಂದು ಬದಲಾದಾಗ ವರ್ಗಾವಣೆಗಳು ಸಾಮಾನ್ಯ ಎನ್ನುವುದಾದರೆ, ಸರ್ಕಾರ ಬಂದು ಒಂದು ವರ್ಷವಾದ ಮೇಲೂ ಅಂತಹ ವರ್ಗಾವಣೆಗಳು ನಿಂತಿಲ್ಲ ಏಕೆ ಎಂಬ ಪ್ರಶ್ನೆ ಏಳುತ್ತದೆ. ಇದ್ದುದರಲ್ಲಿ 2-3 ಇಲಾಖೆಗಳಲ್ಲಿ ಮಾತ್ರ ನಿಯಮಾವಳಿಗಳನ್ವಯ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಎಂಬ ತೀರ್ಮಾನ ತೆಗೆದುಕೊಂಡಿರುವುದು ಸಕಾರಾತ್ಮಕ ಸಂಗತಿಯಾಗಿದೆ. ಸರ್ಕಾರ ಬದಲಾಯಿತು, ಆಡಳಿತ ಬದಲಾಗಲಿಲ್ಲ ಎಂಬ ಭಾವನೆಯು ಮೊದಲ ಆರು ತಿಂಗಳಲ್ಲೇ ಬರಲು ಕಾರಣವೇನು ಎಂದು ಆಗಲೇ ಆತ್ಮಾವಲೋಕನ ಮಾಡಿಕೊಂಡಿದ್ದರೆ, ಈ ಹೊತ್ತಿಗೆ ಬದಲಾವಣೆಗಳಾದರೂ ಬಂದಿರುತ್ತಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋದಿಯವರನ್ನು ಮಾತಿನಿಂದಲೇ ತಿವಿದ ರಾಹುಲ್; ಕಾಶ್ಮೀರದಲ್ಲಿ ಪ್ರೀತಿಯ ಅಂಗಡಿ ತೆರೆಯುವರೇ?
ಈ ಸರ್ಕಾರದ ಸಾಮಾಜಿಕ ನೀತಿಯ ಕುರಿತು ಮೊದಲಿಂದಲೂ ಗೊಂದಲವಿದ್ದೇ ಇದೆ. ಬಹುತೇಕ ಅಹಿಂದ ಸಮುದಾಯಗಳ ಮತಗಳಿಂದಲೇ (ಅಂಕಿ-ಅಂಶದ ಪ್ರಕಾರ ಕಾಂಗ್ರೆಸ್ ಪಕ್ಷವು ಪಡೆದುಕೊಂಡ ಒಟ್ಟು ಮತಗಳಲ್ಲಿ ಶೇ. 82ರಷ್ಟು ಈ ಸಮುದಾಯಗಳಿಂದಲೇ ಬಂದಿದೆ) ಅಧಿಕಾರಕ್ಕೆ ಬಂದ ಸರ್ಕಾರವು ಆ ಸಮುದಾಯಗಳ ಪರವಾದ ನೀತಿಗಳ ವಿಚಾರದಲ್ಲಿ ಯಾವ ಬಗೆಯ ದೃಢ ನಿಲುವು ಹೊಂದಿದೆ ಎಂಬುದನ್ನು ನೋಡಬೇಕು. ಆಯಕಟ್ಟಿನ ಜಾಗಗಳಿಗೆ ಶೋಷಿತ ಸಮುದಾಯಗಳಿಗೆ ಸೇರಿದ ಅಧಿಕಾರಿಗಳು ಬರುವುದೇ ಸಾಮಾಜಿಕ ನ್ಯಾಯವಲ್ಲ. ಅದರಲ್ಲೂ ಮುಖ್ಯಮಂತ್ರಿಗಳ ಸ್ವಂತ ಜಾತಿಗೆ ಸೇರಿದವರೇ ಪ್ರಮುಖ ಸ್ಥಾನಗಳಲ್ಲಿದ್ದಾರೆ ಎಂಬ ಆರೋಪ ಈ ಸಾರಿ ಸುಳ್ಳೆನಿಸುವುದಿಲ್ಲ. ಉಳಿದಂತೆ, ದೀರ್ಘಕಾಲದ ಹೋರಾಟದಿಂದ ಶೋಷಿತರಲ್ಲಿ ಶೋಷಿತರಿಗೆ ಒಳಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟು ರಾಜ್ಯಗಳಿಗೆ ಅವಕಾಶ ಕಲ್ಪಿಸಿದ ಮೇಲೂ ರಾಜ್ಯ ಸರ್ಕಾರವು ಆ ನಿಟ್ಟಿನಲ್ಲಿ ಖಚಿತ ಕ್ರಮಗಳಿಗೆ ಮುಂದಾಗಿಲ್ಲ; ಮುಖ್ಯಮಂತ್ರಿಗಳ ಟ್ವೀಟ್ ಹೊರತುಪಡಿಸಿದರೆ, ಕಾಂಗ್ರೆಸ್ ಪಕ್ಷದ ನಿಲುವೂ ದೃಢವಾಗಿಲ್ಲ.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯ ಮೂಲಕ ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಬೇರೆಡೆಗೆ ವರ್ಗಾಯಿಸಲಾಯಿತು ಎಂಬ ಬಗ್ಗೆ ಹಲವು ಪ್ರಶ್ನೆಗಳೆದ್ದಿವೆ. ಬಿಜೆಪಿ ಅಥವಾ ಜೆಡಿಎಸ್ ಈ ವಿಚಾರದಲ್ಲಿ ಯಾವ ಬದ್ಧತೆಯನ್ನೂ ಹೊಂದಿಲ್ಲ ಮತ್ತು ಸಿದ್ದರಾಮಯ್ಯನವರ ಸರ್ಕಾರದಲ್ಲೇ ಈ ಕಾಯ್ದೆ ಜಾರಿಯಾಯಿತು; ಈಗ ಈ ಹಣವನ್ನು ಇತರ ಉದ್ದೇಶಗಳಿಗೆ ವರ್ಗಾಯಿಸಲಾಗಿದೆ ಎಂಬುದು ನಿಜವೇ ಎಂದಿಟ್ಟುಕೊಂಡರೂ, ಬಿಜೆಪಿ ಸರ್ಕಾರಕ್ಕಿಂತ ಎಷ್ಟೋ ಪಟ್ಟು ಹಣವನ್ನು ಕಾಂಗ್ರೆಸ್ ಸರ್ಕಾರ ಮೀಸಲಿಟ್ಟಿದೆ ಎಂಬುದನ್ನೆಲ್ಲಾ ಒಪ್ಪಿಕೊಂಡರೂ, ಪ್ರಶ್ನೆಗಳು ಉಳಿದಿವೆ. ಈ ನಿಟ್ಟಿನಲ್ಲಿ ಸ್ಪಷ್ಟ ಸಂದೇಶವನ್ನು, ಸಮಜಾಯಿಷಿಯನ್ನು ಈ ಸರ್ಕಾರವನ್ನು ಅಸ್ತಿತ್ವಕ್ಕೆ ತಂದ ಸಮುದಾಯಗಳಿಗೆ ನೀಡಲಾಗಿಲ್ಲ.
ನೀರಾವರಿ ವಿಚಾರದಲ್ಲಿ ಬದಲಾದ ನಿಲುವುಗಳಿವೆಯಾ? ಬಾಯಾರಿದ ಬಯಲು ಸೀಮೆಗೆ ನೀರು ಕೊಡಲು ಎತ್ತಿನಹೊಳೆಗೆ ಸಾಧ್ಯವೇ? ಪರಿಸರ ನಾಶದಿಂದ ಉಂಟಾಗುತ್ತಿರುವ ಅಪಾಯಗಳು ಕಣ್ಣೆದುರಿಗಿವೆ – ಅದಕ್ಕೇನು ಪರಿಹಾರ? ಭೂಸ್ವಾಧೀನವನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಗಳ ಕುರಿತು ನಿಮ್ಮ ಖಚಿತ ನಿಲುವೇನು? ಬಡವರ ಭೂಮಿ- ವಸತಿ ಪ್ರಶ್ನೆಗೆ ಶಾಶ್ವತ ಪರಿಹಾರಕ್ಕೆ ನಿಮ್ಮ ಯೋಚನೆಯೇನು? ಜಿಂದಾಲ್‌ಗೆ ಭೂಮಿ ಕೊಡಲು ಅಂದು ವಿರೋಧಿಸಿದ್ದವರು, ಇಂದೇಕೆ ಕೊಟ್ಟಿರಿ? ಕಾರ್ಮಿಕರ ಹಕ್ಕುಗಳು ಮತ್ತು ರೈತಾಪಿಯ ಬೆಳೆಗೆ ಗೌರವಯುತವಾದ ಬೆಲೆ ಖಾತರಿ ಹೇಗೆ ಮಾಡುತ್ತೀರಿ? ಎಲ್ಲರಿಗೂ ಗುಣಮಟ್ಟದ ಆರೋಗ್ಯ ಹಾಗೂ ಶಿಕ್ಷಣವು ಖಾಸಗೀಕರಣದ ಜೊತೆ ಜೊತೆಗೇ ಹೇಗೆ ಸಾಧ್ಯ? ಇಂತಹ ಪ್ರಶ್ನೆಗಳೆಲ್ಲಾ ಪಕ್ಕಕ್ಕೆ ಸರಿದು ಕುಂತಿವೆ.
ಇನ್ನು ಹಿಂದುಳಿದ ಸಮುದಾಯಗಳ ವಿಚಾರ. ಕುರುಬರನ್ನು ಹೊರತುಪಡಿಸಿದ ಉಳಿದ ಸಮುದಾಯಗಳನ್ನು ಸರ್ಕಾರದ ವಿವಿಧ ನೇಮಕಾತಿಗಳಲ್ಲಿ ಒಳಗೊಳ್ಳಲಾಗುತ್ತಿದೆ ಎಂಬುದು ವಾಸ್ತವ. ಇತರ ಪಕ್ಷಗಳಿಗೆ ಹೋಲಿಸಿದರೆ ದೊಡ್ಡ ಪ್ರಮಾಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕುರುಬೇತರ ಹಿಂದುಳಿದ ಸಮುದಾಯಗಳಿಗೂ ಟಿಕೆಟ್ ನೀಡಿದ್ದು ಕಾಂಗ್ರೆಸ್ ಪಕ್ಷ ಎಂಬುದೂ ನಿಜ. ಆದರೆ, ಆ ಸಮುದಾಯಗಳ ಬೆನ್ನಿಗೆ ನಿಂತಿರುವುದು ಈ ಸರ್ಕಾರ ಎಂಬ ಸಂದೇಶ ವರ್ಗಾಯಿಸಲು ಬೇಕಾದ ಮುನ್ನೋಟದ ಕಾರ್ಯಕ್ರಮಗಳು, ಮುತ್ಸದ್ದಿತನ ಮತ್ತು ಯೋಜನೆ ಸರ್ಕಾರಕ್ಕಿಲ್ಲ.
ಅದೇ ರೀತಿ ಬಿಜೆಪಿಯನ್ನು ಸೋಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮುಸ್ಲಿಂ ಸಮುದಾಯದ ವಿಚಾರದಲ್ಲಿ ಕಾಂಗ್ರೆಸ್ ಹಿಂಜರಿಕೆಯಿಂದಲೇ ವ್ಯವಹರಿಸುತ್ತಿದೆ. ಬಿಜೆಪಿ ಹಾಗೂ ಆರೆಸೆಸ್ಸಿನ ಕೋಮುವಾದಿ ಅಜೆಂಡಾವನ್ನು ಎದುರಿಸಲೆಂದೇ ಈ ರಾಜ್ಯದ ಅಲ್ಪಸಂಖ್ಯಾತರು, ದಲಿತರು, ಕೋಮುವಾದ ವಿರೋಧಿ ಮನೋಭಾವದ ಜನರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ದೃಢವಾಗಿ ನಿಂತಿದ್ದರು. ಆದರೆ, ಈ ವಿಚಾರದಲ್ಲಿ ಅಗತ್ಯವಿರುವ ತಾತ್ವಿಕ, ರಾಜಕೀಯ ಕಾರ್ಯಕ್ರಮ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಅದನ್ನು ಕಟ್ಟಿಕೊಳ್ಳದೇ ದೀರ್ಘಕಾಲದಲ್ಲಿ ಕೋಮುವಾದಿ ರಾಜಕಾರಣಕ್ಕೆ ಕಡಿವಾಣ ಹಾಕಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನೂ ಈ ಸರ್ಕಾರ, ಸಚಿವ ಸಂಪುಟ ಹಾಕಿಕೊಂಡಂತೆ ಕಾಣುವುದಿಲ್ಲ. ಮುಸ್ಲಿಮರಿಗೆ ರಕ್ಷಣೆ ಸಿಕ್ಕರೆ ಸಾಕೇ? ಮುಸ್ಲಿಮರ ಮೀಸಲಾತಿ ಪ್ರಶ್ನೆ, ಸಮಗ್ರ ಅಭಿವೃದ್ಧಿಯ ಕುರಿತು ಸಾಚಾರ್ ಶಿಫಾರಸ್ಸುಗಳ ಅನುಷ್ಠಾನದ ಬಗ್ಗೆ ಮಾತೇ ಇಲ್ಲವೇಕೇ? ಇವೆಲ್ಲವೂ (ಬಡವರು, ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳು ಹಾಗೂ ಅಲ್ಪಸಂಖ್ಯಾತರ ಪರ ಕಾರ್ಯಕ್ರಮ ರೂಪಿಸುವುದು) ಸಂವಿಧಾನವು ನೀಡಿರುವ ನಿರ್ದೇಶನ ಎಂಬುದನ್ನು ಕಾಂಗ್ರೆಸ್ ಪಕ್ಷವೇ ಬಲವಾಗಿ ಹೇಳದೆ ಹಿಂಜರಿದರೆ ಯಾವ ಬಗೆಯ ದೀರ್ಘಕಾಲಿಕ ರಾಜಕೀಯ ವಾತಾವರಣ ನಿರ್ಮಾಣವಾಗಬಹುದು ಎಂಬುದನ್ನು ಚಿಂತಿಸಬೇಕು.
ಈ ಮಧ್ಯೆ ‘ತಾವು ದ್ವೇಷ ರಾಜಕಾರಣ ಮಾಡಲು ಹೊರಟಿದ್ದರೆ ಇವರಲ್ಲಿ ಬಹುಪಾಲು ಜನ ಜೈಲಿನಲ್ಲಿರುತ್ತಿದ್ದರು’ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಅಚ್ಚರಿಯನ್ನೂ, ಆಘಾತವನ್ನೂ ತಂದಿದೆ. ಭ್ರಷ್ಟಾಚಾರ ನಡೆಸಿದವರ ವಿರುದ್ಧ ಕ್ರಮಕ್ಕೆ ಮುಂದಾಗುವುದು ಸರ್ಕಾರದ ಕರ್ತವ್ಯವೇ ಹೊರತು, ದ್ವೇಷ ರಾಜಕಾರಣವಲ್ಲ. ಹಿಂದಿನ ಸರ್ಕಾರಗಳಲ್ಲಿ ದುರಾಡಳಿತ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗದಿದ್ದರೆ ಅದರಿಂದ ಎರಡು ಸಂದೇಶಗಳು ಹೊರಡುತ್ತವೆ. ಒಂದು, ಇಂತಹ ಭ್ರಷ್ಟಾಚಾರ ಹಾಗೂ ದುರಾಡಳಿತಗಳು ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತವೆ. ಚುನಾವಣೆಗಳಲ್ಲಿ ನೀವು ಮತ ಹಾಕಿ ಹೆಚ್ಚೇನೂ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಎರಡು, ಈ ಸರ್ಕಾರವೂ ಅಂತಹದ್ದರಲ್ಲೆ ಭಾಗಿಯಾಗುತ್ತಿದೆ – ಎಂಬುದೇ ಆ ಸಂದೇಶಗಳು.
ಬರ ಮತ್ತು ನೆರೆಯನ್ನು ಇದ್ದುದರಲ್ಲಿ ಸಮರ್ಪಕವಾಗಿ ನಿರ್ವಹಿಸಿದೆ ಎಂಬುದು ಕಾಣುತ್ತದೆ. ಕೆಲವು ಇಲಾಖೆಗಳಲ್ಲಿ ಹಿಂದಿಗಿಂತ ಭ್ರಷ್ಟಾಚಾರ ಕಡಿಮೆಯಾಗಿದೆ. ಅಧಿಕಾರಿಗಳ ಮುತುವರ್ಜಿಯೂ ಅಲ್ಲಲ್ಲಿ ಎದ್ದು ಕಾಣುತ್ತದೆ. ಏನೇ ಅಲ್ಪಸ್ವಲ್ಪ ಸಮಸ್ಯೆಗಳಿದ್ದರೂ, ಗ್ಯಾರಂಟಿಗಳ ಅನುಷ್ಠಾನವು ಜನಸಾಮಾನ್ಯರಿಗೆ ನೆಮ್ಮದಿಯನ್ನು ತಂದಿದೆ. ಲೋಕಸಭಾ ಚುನಾವಣೆಯ ನಂತರ ಅಲ್ಪಸಂಖ್ಯಾತರ ಮೇಲೆ ತೂಗುಗತ್ತಿ ಪಕ್ಕಕ್ಕೆ ಸರಿದಿದೆ. 80ರ ದಶಕದ ನಂತರ ಮೊದಲ ಬಾರಿಗೆ ಕೇಂದ್ರದಿಂದಾದ ಅನ್ಯಾಯದ ವಿರುದ್ಧ ಗಟ್ಟಿ ದನಿಯನ್ನು ರಾಜ್ಯ ಸರ್ಕಾರ ಎತ್ತಿದೆ. ಆದರೆ, ಸರ್ಕಾರದಿಂದಾದ ಒಳ್ಳೆಯ ಕೆಲಸಗಳನ್ನು ಜನರಿಗೆ ಸಮರ್ಥವಾಗಿ ಮುಟ್ಟಿಸುವಲ್ಲೂ ಸರ್ಕಾರ ಮತ್ತು ಮಂತ್ರಿಗಳು ಹಿಂದೆ ಬಿದ್ದಿದ್ದಾರೆ. ತಮ್ಮ ವರ್ಗ ಹಾಗೂ ಜಾತಿ ಸ್ವಭಾವದಿಂದ ಸರ್ಕಾರದ ವಿರುದ್ಧ ನಿಂತಿರುವ ಮಾಧ್ಯಮದ ಬಹುಭಾಗವನ್ನು ನಿರ್ವಹಿಸುವುದೆಂದರೆ, ಅವರಿಗೇ ಜಾಹೀರಾತುಗಳ ಮೂಲಕ ಕೋಟ್ಯಂತರ ಹಣ ನೀಡುವುದು ಎಂಬಂತೆ ತಿಳಿದಿರುವ ದುರಂತವೂ ನಮ್ಮ ಕಣ್ಣೆದುರಿಗಿದೆ.
ಕರ್ನಾಟಕಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯ – ದಾಳಿ ಹಲವು ಆಯಾಮಗಳನ್ನು ಹೊಂದಿದೆ. ಆರ್ಥಿಕವಾಗಿ, ಆಡಳಿತಾತ್ಮಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಂವಿಧಾನಾತ್ಮಕವಾಗಿ. ಅದನ್ನು ಚುನಾವಣೆಯ ಇಶ್ಯೂವನ್ನಾಗಿಯಷ್ಟೇ ಅಲ್ಲದೇ, ಸ್ವಾಯತ್ತತೆ ಮತ್ತು ಅಸ್ಮಿತೆಗಳ ಸಂಗತಿಯನ್ನಾಗಿ ಪರಿಗಣಿಸಿ ಇಡೀ ರಾಜ್ಯವನ್ನು ಅದಕ್ಕಾಗಿ ಅಣಿ ನೆರೆಸಲು ಒಂದು ವ್ಯವಸ್ಥಿತ ಕಾರ್ಯಯೋಜನೆ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ, ಸಚಿವ ಸಂಪುಟ ಅಥವಾ ಸರ್ಕಾರದ ಚುಕ್ಕಾಣಿ ಹೊಂದಿದವರು ಚಿಂತನೆಯನ್ನೇ ನಡೆಸಿಲ್ಲ. ಹೀಗಾಗಿಯೇ ಸಿದ್ದರಾಮಯ್ಯನವರ ಮೇಲೆ ನಡೆಯುವ ದಾಳಿಯನ್ನು ಕರ್ನಾಟಕದ ಮೇಲಾದ ದಾಳಿ ಎಂದು, ಶೋಷಿತ ಸಮುದಾಯಗಳ ಮೇಲಾದ ದಾಳಿ ಎಂದು ಪಕ್ಷದ ಬೆಂಬಲಿಗರಲ್ಲದೇ ಇಡೀ ರಾಜ್ಯವೇ ಭಾವಿಸುವಂತೆ ಆಗಿಲ್ಲ.
ಒಟ್ಟಿನಲ್ಲಿ ಸರ್ಕಾರಕ್ಕೆ ಎಲ್ಲಾ ವಿಚಾರಗಳಲ್ಲಿ ಒಂದು ಮುನ್ನೋಟ, ದೀರ್ಘಕಾಲಿಕ ಆಲೋಚನೆ, ಕಾರ್ಯತಂತ್ರದ ಕೊರತೆ ಎದ್ದು ಕಾಣುತ್ತಿದೆ. ಸಮಸ್ಯೆಗಳು ಎದುರಾದಾಗ ಸಾಂದರ್ಭಿಕವಾಗಿ ಅದಕ್ಕೆ ಪ್ರತಿಕ್ರಿಯೆ ಕೊಡುವುದಷ್ಟೇ ಈ ಸರ್ಕಾರದ ರೀತಿಯೂ ನೀತಿಯೂ ಆಗಿದೆ. ಸಾಂವಿಧಾನಿಕ ಆಡಳಿತವನ್ನು ನೆಲೆಗೊಳಿಸುವ ದೃಷ್ಟಿಯಿಂದ ಮತ್ತು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಇದು ಒಳ್ಳೆಯ ವಿದ್ಯಮಾನವಲ್ಲ. ಸಿದ್ದರಾಮಯ್ಯನವರು ಮತ್ತು ಅವರ ತಂಡ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಂಡು ಸರ್ಕಾರದ ನೀತಿಯನ್ನು ಸರಿಯಾಗಿ ರೂಪಿಸಿಕೊಂಡು, ಅದನ್ನು ಅನುಷ್ಠಾನಕ್ಕೆ ತರುವುದು ಈಗಾಗಲೇ ತಡವಾಗಿದೆ. ಇನ್ನೂ ತಡವಾದರೆ – ಅದರ ಮೊದಲ ಬಲಿಪಶು ಅವರೇ ಆಗಿರುತ್ತಾರೆ; ನಂತರದಲ್ಲಿ ಕರ್ನಾಟಕದ ಹಿತಾಸಕ್ತಿಯೂ ಬಲಿಯಾಗುತ್ತದೆ.

ಸಿದ್ದರಾಮಯ್ಯ 2.0 ಅಷ್ಟೇನೂ ಪರಿಣಾಮಕಾರಿಯಾಗಿ ಕಾಣಿಸುತ್ತಿಲ್ಲ. ಅವರನ್ನು ಹಲವು ರೀತಿಯಲ್ಲಿ ಬಂಧಿಸಿರುವಂತೆ ತೋರುತ್ತಿದೆ. ಬಹುಜನರ , ಮುಸಲ್ಮಾನರನ್ನು ಒಳಗೊಂಡ ಅಲ್ಪಸಂಖ್ಯಾತರ ಕಲ್ಯಾಣ, ರಕ್ಷಣೆ, ಇವುಗಳ ಬಗ್ಗೆ ಉದಾಸೀನತೆ ಎದ್ದು ತೋರುತ್ತಿದೆ. ಗೋರಕ್ಷಕರ, ಮೋರಲ್ ಪೋಲಿಸರ ಉಪಟಳ ಇವರ ಆಡಳಿತದಲ್ಲಿ ಅವ್ಯಾಹತ. 2024 ಲೋಕಸಭೆ ಚುನಾವಣೆಯ ಬಾಲಿಶ ನಿರ್ವಹಣೆ ನೋಡಿದರೆ, 2013-18ರ ಸಿದ್ದರಾಮಯ್ಯನವರು ಎಲ್ಲಿ ಕಳೆದು ಹೋದರು ಎಂದು ದಿಗಿಲಾಗುತ್ತಿದೆ.