ಪತ್ರಕರ್ತರು ಅಪಾಯದ ಅಂಚಿನಲ್ಲಿದ್ದಾರೆ. ಪತ್ರಕರ್ತರನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಪ್ರತಿನಿಧಿ ದಿನಪತ್ರಿಕೆ ಪ್ರಧಾನ ಸಂಪಾದಕ, ಪತ್ರಕರ್ತ ಸಿ ಕೆ ಮಹೇಂದ್ರ ತಿಳಿಸಿದರು.
ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ, ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಪಾತ್ರ ಅಪಾರವಾದುದು. ಆದರೆ, ಇತ್ತೀಚೆಗೆ ಪತ್ರಿಕೋದ್ಯಮದಲ್ಲಿ ಆನೇಕ ಸವಾಲುಗಳಿವೆ. ಅವುಗಳನ್ನು ಎದುರಿಸಿ ಗೆಲುವಿನೆಡೆಗೆ ಸಾಗಬೇಕಿದೆ. ಪತ್ರಕರ್ತರ ಸಂಘಟನೆಗಳು ಬಲಿಷ್ಠವಾಗುವ ಮೂಲಕ ಮಾಧ್ಯಮ ಹಾಗೂ ಪತ್ರಕರ್ತರ ಉಳಿವಿಗೆ ನೆರವಾಗಬೇಕು” ಎಂದು ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತೀಕೆರೆ ಜಯರಾಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “1843ರ ಜುಲೈ 1ರಲ್ಲಿ ಕನ್ನಡದ ಮೊಟ್ಟ ಮೊದಲ ಪತ್ರಿಕೆಯಾಗಿ ಮಂಗಳೂರು ಸಮಾಚಾರ ಪತ್ರಿಕೆಯನ್ನು ಆರಂಭಿಸಲಾಯಿತು. ಇದರ ನೆನಪಿನ ಅಂಗವಾಗಿ ನಾವು ಪ್ರತಿ ವರ್ಷ ಜುಲೈ 1ರಂದು ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದೆ” ಎಂದರು.
“ಪತ್ರಿಕೋದ್ಯಮ ಸಾಕಷ್ಟು ವಿಸ್ತಾರವಾಗಿ ಬೆಳೆದಿದೆ. ಎಷ್ಟು ವೇಗವಾಗಿ ಹಾಗೂ ವಿಸ್ತರವಾಗಿ ಪತ್ರಿಕೋದ್ಯಮ ವೃದ್ಧಿಯಾಗಿದೆಯೋ ಅಷ್ಟೇ ಕೆಲವು ಅಪಾಯಗಳೂ ಎದುರಾಗಿದೆ. ಪತ್ರಿಕೋದ್ಯಮ ವೃತ್ತಿಯಲ್ಲಿ ಇರುವವರು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಾಧ್ಯಮದವರಿಗೆ ತಮ್ಮದೇ ಆದ ಒಲವು ನಿಲುವು ಇದ್ದು, ಅದು ಅತಿರೇಕಕ್ಕೆ ಹೋದಂತಹ ಸಂದರ್ಭದಲ್ಲಿ ಸಮಾಜಕ್ಕೆ ದೊಡ್ಡ ದುಷ್ಪರಿಣಾಮ ಉಂಟುಮಾಡುತ್ತದೆ. ಇದನ್ನು ಪತ್ರಿಕೋದ್ಯಮದ ಪ್ರತಿಯೊಬ್ಬ ವೃತ್ತಿಭಾಂದವರು ಮನದಟ್ಟು ಮಾಡಿಕೊಳ್ಳಬೇಕು” ಎಂದರು.
ಮಹಿಳಾ ಸರ್ಕಾರಿ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ ಶಿವರಾಜ್ ಎಚ್ ಎಸ್ ಮಾತನಾಡಿ, “ಬ್ರಿಟೀಷರ ಕಾಲದಿಂದಲೂ ಪತ್ರಿಕೆಗಳು ಸಾಕಷ್ಟು ಸವಾಲುಗಳನ್ನು ಎದುರಿಸಿಕೊಂಡು ಬರುತ್ತಿವೆ. ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಪತ್ರಿಕೆಗಳು ಉಳಿಯಬೇಕು. ಸರ್ಕಾರದ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಆಗಬೇಕೆಂದರೆ ಪತ್ರಿಕೆಗಳ ಪಾತ್ರ ಮುಖ್ಯವಾದುದು” ಎಂದರು.
ಈ ಸುದ್ದಿ ಓದಿದ್ದೀರಾ? ಕೆಎಚ್‌ಐಆರ್ ಸಿಟಿ ಕೊಪ್ಪಳದಲ್ಲಿ ಆರಂಭಿಸುವಂತೆ ಸರ್ಕಾರಕ್ಕೆ ಒತ್ತಾಯ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ ಪಿ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎಸ್ ಎಚ್ ನಿರ್ಮಲ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಉಪಾಧ್ಯಕ್ಷ ನವೀನ್ ಕುಮಾರ್ ಕೆ ಎನ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್ ಇದ್ದರು.