ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಮೀಪದ ಸಂಸೆ ಗ್ರಾಮ ವ್ಯಾಪ್ತಿಗೆ ಬರುವ ಕಾರ್ಲೆ ಗ್ರಾಮದಲ್ಲಿ ಸಂಕಷ್ಟದಿಂದ ದಿನದೂಡುತ್ತಿದ್ದ ವೃದ್ಧೆಯೋರ್ವರಿಗೆ ಅಧಿಕಾರಿಗಳು ಸ್ಪಂದಿಸಿದ್ದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಾಡಂಚಿನ ಕಾರ್ಲೆ ಗ್ರಾಮದ ನಿವಾಸಿಯಾಗಿರುವ ವೃದ್ಧೆ ಬೆಲ್ಲಮ್ಮನವರ ಮನೆಯ ಮೇಲೆ ಇತ್ತೀಚೆಗೆ ಗಾಳಿ ಮಳೆಯ ಬೃಹತ್ ಗಾತ್ರದ ಮರ ಬಿದ್ದಿತ್ತು. ಮನೆಯ ಮೇಲೆ ಮರ ಬಿದ್ದಿದ್ದರಿಂದ ಮನೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿತ್ತು. ಅಲ್ಲದೇ, ಘಟನೆಯ ಸಂದರ್ಭ ಮನೆಯೊಳಗಿದ್ದ ಬೆಲ್ಲಮ್ಮನವರು ಪ್ರಾಣಾಪಾಯದಿಂದ ಪಾರಾಗಿದ್ದರಾದರೂ, ಕಾಲಿಗೆ ಮರದ ಕೊಂಬೆ ತಾಗಿದ್ದರಿಂದ ಗಂಭೀರ ಗಾಯವಾಗಿತ್ತು.

ಘಟನೆಯ ಬಳಿಕ ಕಳಸ ಸಾರ್ವಜನಿಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಗೆ ಓಡಾಡುತ್ತಿದ್ದರು. ದಿನನಿತ್ಯ ಆಸ್ಪತ್ರೆಗೆ ತೆರಳಬೇಕಾಗಿದ್ದರಿಂದ ಹಣದ ಸಮಸ್ಯೆ ಉಂಟಾಗಿತ್ತು. ಖರ್ಚಿಗೆ ಹಣವಿಲ್ಲದ್ದರಿಂದ ಇವರ ಕುಟುಂಬ, ಆಸ್ಪತ್ರೆಗೆ ತೆರಳುವುದನ್ನು ನಿಲ್ಲಿಸಿದ್ದರು.
ಈ ನಡುವೆ ಕಳೆದ ಒಂದು ವಾರದಿಂದ ಕಾಲು ನೋವು ಜಾಸ್ತಿಯಾಗಿತ್ತು. ಇದನ್ನು ಅರಿತ ಕಳಸ ತಾಲೂಕಿನ ಸಿಟಿಝನ್ ಜರ್ನಲಿಸ್ಟ್ ಆಗಿರುವ ಗಣೇಶ್ ಅವರು ಅಧಿಕಾರಿಗಳ ಗಮನ ಸೆಳೆಯಲು ಸ್ತಳೀಯ ಸುದ್ದಿ ವಾಹಿನಿಯಲ್ಲಿ ಬೆಲ್ಲಮ್ಮನವರ ಸಮಸ್ಯೆಯನ್ನು ಸುದ್ದಿ ಮಾಡಿದ್ದರು. ಈ ನಡುವೆ ಕೆಲವರು ಸರ್ಕಾರದಿಂದ ಪರಿಹಾರ ಸಿಗುವಂತೆ ಮಾಡಲು ಈ ರೀತಿ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು.

“ಈ ವಿಚಾರ ಗಮನಕ್ಕೆ ಬಂದ ಕೂಡಲೇ ನೈಜ ಸಂಗತಿ ಅರಿತ ತಾಲೂಕಿನ ಅಧಿಕಾರಿಗಳು, ಬೆಲ್ಲಮ್ಮನವರ ಮನೆಗೆ ಭೇಟಿ ನೀಡಿದ್ದಲ್ಲದೇ, ಕೂಡಲೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ. ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಈ ದಿನ.ಕಾಮ್‌ನ ಸಿಟಿಝನ್ ಜರ್ನಲಿಸ್ಟ್ ಗಣೇಶ್ ಮಾಹಿತಿ ನೀಡಿದ್ದಾರೆ.
ಕಳಸ ನೂತನ ತಹಶೀಲ್ದಾರ್ ಆಗಿರುವ ಕೆ ಎಸ್ ದಯಾನಂದ್ ಮತ್ತು ಉಪ ತಹಶೀಲ್ದಾರ್ ಎಂ ದಯಾವತಿ, ಕಂದಾಯ ಅಧಿಕಾರಿ ಪ್ರಕಾಶ್ ಪ್ರದೀಪ್ ಕುಮಾರ್ ಆಸ್ಪತ್ರೆಗೂ ಕೂಡ ಭೇಟಿ ನೀಡಿದ್ದು, ಬೆಲ್ಲಮ್ಮನವರ ಆರೋಗ್ಯ ವಿಚಾರಿಸಿದ್ದಾರೆ.

“ಮನೆಯ ಮೇಲೆ ಮರ ಬಿದ್ದಿದ್ದರಿಂದ ಹಾನಿಗೊಳಗಾಗಿರುವ ಮೇಲ್ಛಾವಣಿಗೆ ಸರ್ಕಾರದಿಂದ ಪರಿಹಾರ ಧನವನ್ನು ಒದಗಿಸಿ ಕೊಡುವ ಭರವಸೆ ನೀಡಿದ್ದೇವೆ” ಎಂದು ತಹಶೀಲ್ದಾರ್ ದಯಾನಂದ್ ಈ ದಿನ.ಕಾಮ್ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.


ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.