ಅಧಿಕಾರಿಗಳ ನಿರ್ಲಕ್ಷದಿಂದ ಅನ್ನಭಾಗ್ಯ, ಗೃಹಲಕ್ಷ್ಮಿ, ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನ ಹಣ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳಿಂದ ವಂಚಿತವಾಗಿರುವ ವೃದ್ಧೆಯೊಬ್ಬರು ಸಂಕಷ್ಟದ ಬದುಕು ದೂಡುತ್ತಿದ್ದಾರೆ.
ಬೀದರ್ ತಾಲೂಕಿನ ಮನ್ನಳ್ಳಿ ಹೋಬಳಿಯ ನಾಗೋರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಿರ್ಜಾಪುರ(ಟಿ) ಗ್ರಾಮದ 72 ವರ್ಷದ ವೃದ್ಧೆ ನಾಗಮ್ಮ ಶಂಕರೆಪ್ಪ ಭಂಡೆ ಎಂಬುವವರು ನಡೆಯಲು ಆಗದೆ, ಸರಿಯಾಗಿ ಕಣ್ಣು ಕಾಣಿಸದೆ ಸರ್ಕಾರದ ನೆರವಿಗಾಗಿ ಎದುರು ನೋಡುತ್ತಿದ್ದಾರೆ.
ಅಜ್ಜಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಗಂಡ ತೀರಿಹೋದ ಬಳಿಕ ಸದ್ಯ ಕಿರಿಯ ಮಗನ ಮನೆಯಲ್ಲಿ ವಾಸವಾಗಿದ್ದಾರೆ. ಆಧಾರ್ ಕಾರ್ಡ್, ಮತದಾರರ ಚೀಟಿ ಹೊಂದಿದ್ದಾರೆ. ಆದರೆ ಕುಟುಂಬದ ಪಡಿತರ ಚೀಟಿಯಲ್ಲಿ ಇವರ ಹೆಸರಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಿರ್ಲಕ್ಷ್ಯ ತೋರಿದ್ದಾರೆ. ಇಲ್ಲಿಯವರೆಗೆ ಯಾರೊಬ್ಬ ಅಧಿಕಾರಿಗಳೂ ಇತ್ತ ತಿರುಗಿ ನೋಡಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ದುಡಿದು ತಿನ್ನಲು ಶಕ್ತಿ ಇಲ್ಲದೇ ಬದುಕು ಸಾಗಿಸುತ್ತಿರುವ ನಾಗಮ್ಮಗೆ ಅನ್ನಭಾಗ್ಯ ಪಡಿತರ ಚೀಟಿಯೂ ಇಲ್ಲ. ಇನ್ನು ವಿಧವಾ ವೇತನ, ವೃದ್ಯಾಪ್ಯ ವೇತನ ಹಣ ಕೂಡ ಬರುವುದಿಲ್ಲ. ಈಗಿನ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಸಿಗದ ಕಾರಣ ಪರದಾಡುವಂತಾಗಿದೆ.
ಈ ಬಗ್ಗೆ ಅಜ್ಜಿಯ ಮಗ ಪ್ರಭು ಭಂಡೆ ಈದಿನ.ಕಾಮ್ ಜೊತೆ ಮಾತನಾಡಿ, ʼಹಲವು ಸಲ ಅಧಿಕಾರಿಗಳಿಗೆ ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೇರೆ ಯಾವುದೇ ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ತೆರಳಿದರೆ ಅಲ್ಲಿನ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ. ಹೀಗಾಗಿ ಬೇಸತ್ತು ಅರ್ಜಿ ಹಾಕುವುದೇ ಬಿಟ್ಟಿದ್ದೇವೆ. ಈಗಲಾದರೂ ತಾಲೂಕು ಆಡಳಿತ ಸಹಾಯಕ್ಕೆ ಧಾವಿಸಬೇಕುʼ ಎಂದು ಅವಲತ್ತುಕೊಂಡಿದ್ದಾರೆ.
ಬೀದರ್ ತಹಸೀಲ್ದಾರ್ ದಿಲಶಾದ್ ಮಹಾತ್ ಅವರನ್ನು ಈ ಕುರಿತು ಈದಿನ.ಕಾಮ್ ವಿಚಾರಿಸಿದಾಗ, ʼಈ ವಿಷಯ ನನ್ನ ಗಮನಕ್ಕೆ ಇಲ್ಲವೆಂದು ಅಜ್ಜಿಯ ಪೂರ್ಣ ವಿಳಾಸದ ಮಾಹಿತಿ ಪಡೆದು, ಇವತ್ತೇ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಕ್ಕೆ ಭೇಟಿ ನೀಡಿ ಅಜ್ಜಿಯ ಮಾಹಿತಿ ಸಂಗ್ರಹಿಸಲು ತಿಳಿಸುವೆʼ ಎಂದು ಭರವಸೆ ನೀಡಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
ಈ ರೀತಿಯ ಸುದ್ದಿಗಳ ಅವಶ್ಯಕತೆ ಸಮಾಜಕ್ಕೆ ತುಂಬಾ ಇದೆ.
ಸುದ್ದಿ ಇದೆ ಕೂಡಲೆ ಕಂದಾಯ ಇಲಾಖೆ ಸಕ್ರಿಯ ಆಗಿದ್ದು ಒಳ್ಳೆಯ ಬೆಳವಣಿಗೆ.