“ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದರು, ನೀವೂ ಕೊಡಿ” ಎಂದು ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಕೇಳುತ್ತಿದ್ದಾರೆ. ಯಾಕಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು? ಅವರ ಮೇಲೆ ಯಾವ ತನಿಖಾ ಸಂಸ್ಥೆ ತನಿಖೆ ನಡೆಸಿ ವರದಿ ನೀಡಿದೆ? ಇಲ್ಲಿ ಸಿಎಂ ಮೇಲಿರುವುದು ವಿರೋಧ ಪಕ್ಷಗಳ ಆರೋಪವಷ್ಟೇ. ಆದರೆ ಯಡಿಯೂರಪ್ಪ ಮೇಲಿದ್ದ ಭ್ರಷ್ಟಾಚಾರದ ಆರೋಪಕ್ಕೆ ಲೋಕಾಯುಕ್ತ ತನಿಖೆ ನಡೆಸಿದಾಗ ಸೂಕ್ತ ಪುರಾವೆ ಸಿಕ್ಕಿತ್ತು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾದರೆ ರಾಜೀನಾಮೆ ನೀಡಬೇಕೇ? ಈ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಅದರ ಜೊತೆಗೇ, ಗಂಭೀರ ಆರೋಪ ಇದ್ದು, ತನಿಖಾ ಸಂಸ್ಥೆಗಳ ಕಸ್ಟಡಿಯಲ್ಲಿದ್ದೂ, ಜೈಲಿನಿಂದಲೇ ಅಧಿಕಾರ ನಡೆಸಿದ ಮುಖ್ಯಮಂತ್ರಿಗಳ ಉದಾಹರಣೆಗಳೂ ನಮ್ಮ ಮುಂದಿವೆ.
ಅಬಕಾರಿ ಹಗರಣದ ಆರೋಪದಲ್ಲಿ ನಾಲ್ಕು ತಿಂಗಳಿನಿಂದ ಇಡಿ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೈಲಿನಿಂದಲೇ ಆಡಳಿತ ನಡೆಸುತ್ತಿರುವ ಉದಾಹರಣೆ ಒಂದೆಡೆಯಾದರೆ, ಭೂಹಗರಣದ ಆರೋಪದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಮನೆ ಮೇಲೆ ಇಡಿ ದಾಳಿಯ ನಂತರ ಎಫ್‌ಐಆರ್ ದಾಖಲಾದ ಕೂಡಲೇ ಅವರು ರಾಜೀನಾಮೆ ನೀಡಿದ್ದರು. ಹೀಗೆ ಹಲವು ಪ್ರಕರಣಗಳನ್ನು ನಮ್ಮ ಮುಂದಿವೆ. ಬಿಜೆಪಿಯರು, “ಬಿ ಎಸ್ ಯಡಿಯೂರಪ್ಪ ಕೂಡಾ ರಾಜೀನಾಮೆ ನೀಡಿದ್ದರು, ನೀವೂ ಕೊಡಿ” ಎಂದು ಸಿದ್ದರಾಮಯ್ಯ ಅವರನ್ನು ಕೇಳುತ್ತಿದ್ದಾರೆ. ಯಾವುದಕ್ಕಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು? ಅವರ ಮೇಲೆ ಯಾವ ತನಿಖಾ ಸಂಸ್ಥೆ ತನಿಖೆ ನಡೆಸಿ ವರದಿ ನೀಡಿದೆ? ಇಲ್ಲಿ ಸಿಎಂ ಮೇಲಿರುವುದು ವಿರೋಧ ಪಕ್ಷಗಳ ಆರೋಪವಷ್ಟೇ. ಆದರೆ ಯಡಿಯೂರಪ್ಪ ಮೇಲಿದ್ದ ಲಂಚದ ಆರೋಪಕ್ಕೆ ಲೋಕಾಯುಕ್ತ ತನಿಖೆ ನಡೆಸಿ ಸೂಕ್ತ ಪುರಾವೆ ಸಿಕ್ಕಿತ್ತು. ಹೀಗಾಗಿ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುವಂತಿಲ್ಲ. ಹಾಗಿದ್ದರೂ ಸಿದ್ದರಾಮಯ್ಯ ಅವರ ಮೇಲಿನ ರಾಜಕೀಯ ದ್ವೇಷದ, ಹುರುಳಿಲ್ಲದ ಆರೋಪಕ್ಕೆ ಅವರು ರಾಜೀನಾಮೆ ನೀಡಬೇಕಾದ ಸಂದರ್ಭ ಬರಬಹುದಾ? ಇದು ಹಲವರನ್ನು ಕಾಡುತ್ತಿರುವ ಪ್ರಶ್ನೆ.
ಇಲ್ಲಿ ಗಮನಿಸಬೇಕಿರುವ ಮುಖ್ಯ ಅಂಶ ಏನೆಂದರೆ ಮೋದಿಯವರ ಎರಡನೇ ಅವಧಿಯ ಚಕ್ರಾಧಿಪತ್ಯದಲ್ಲಿ ಬಂಧಿತರಾದ ಇಬ್ಬರು ಮುಖ್ಯಮಂತ್ರಿಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಜಾರಿ ನಿರ್ದೇಶನಾಲಯ ಪ್ರಕರಣದ ತನಿಖೆ ನಡೆಸುತ್ತಿದೆ. ಹಾಗಾಗಿ ಅವರು ನೈತಿಕ ಜವಾಬ್ದಾರಿಯಡಿ ರಾಜೀನಾಮೆ ಕೊಡಬಹುದು, ಕೊಡದೆಯೂ ಇರಬಹುದು. ರಾಜೀನಾಮೆ ಕೊಡಲೇ ಬೇಕು ಎಂದೇನಿಲ್ಲ. ಅದಕ್ಕೆ ಅರವಿಂದ ಕೇಜ್ರಿವಾಲ್ ಮತ್ತು ಹೇಮಂತ್ ಸೋರೆನ್ ಇಬ್ಬರ ನಡೆ ಉದಾಹರಣೆಯಾಗಿ ನಮ್ಮ ಮುಂದಿದೆ. ಹೇಮಂತ್ ಸೋರೆನ್ ಇಡಿ ಬಂಧನಕ್ಕೂ ಮುನ್ನ ರಾಜೀನಾಮೆ ನೀಡಿದರೆ, ಬಂಧನದಿಂದ ಹೊರಬಂದ ಕೂಡಲೇ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕೇಜ್ರಿವಾಲ್ ಜೈಲಿನಿಂದಲೇ ಮುಖ್ಯಮಂತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಶಿಕ್ಷೆ ಪ್ರಕಟವಾಗುವವರೆಗೆ ಸಾಂವಿಧಾನಿಕ ಸ್ಥಾನಗಳಲ್ಲಿದ್ದು ಅಧಿಕಾರ ನಡೆಸುವುದು ಅಬಾಧಿತ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.

ಕೆಲವರು ತಪ್ಪು ಮಾಡಿಯೂ ಜಿದ್ದಿಗೆ ಬಿದ್ದು ರಾಜೀನಾಮೆ ಕೊಡದಿರುವ ಉದಾಹರಣೆಗಳೂ ಇವೆ. 2011ರಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎರಡು ಪ್ರಕರಣಗಳಲ್ಲಿ ಅಕ್ರಮ ಭೂಮಿ ಡಿನೋಟಿಫೈ ಮಾಡಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಎಂಬವರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರು. ತಮ್ಮ ಕುಟುಂಬದ ಪ್ರೇರಣಾ ಟ್ರಸ್ಟ್‌ಗೆ 20ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಯಡಿಯೂರಪ್ಪ ಮೇಲಿತ್ತು. ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆಗಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ಕೊಟ್ಟಾಗ ಅವರು ರಾಜೀನಾಮೆ ಕೊಟ್ಟಿರಲಿಲ್ಲ. ಆಗ ಬಿಜೆಪಿ ಅಧ್ಯಕ್ಷರಾಗಿದ್ದ ಕೆ ಎಸ್ ಈಶ್ವರಪ್ಪ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ರಾಜ್ಯ ಬಂದ್‌ಗೆ ಕರೆ ನೀಡಿದ್ದರು.
ಆದರೆ, ಅದೇ ವರ್ಷ ಜುಲೈನಲ್ಲಿ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಗೆ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ನ್ಯಾ ಸಂತೋಷ್ ಹೆಗ್ಡೆ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಯಡಿಯೂರಪ್ಪ ಅವರು ಅಕ್ರಮ ಎಸಗಿರುವುದಕ್ಕೆ ಪುರಾವೆ ಕೊಟ್ಟಿದ್ದರು. ಆ ನಂತರ ಬಿಜೆಪಿ ಹೈ ಕಮಾಂಡ್ ರಾಜೀನಾಮೆ ಪಡೆದಿತ್ತು. ನಂತರ ವಿಚಾರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು ಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಅದನ್ನು ಆಧರಿಸಿ ಲೋಕಾಯುಕ್ತ ಕೋರ್ಟ್ ಬಂಧನ ವಾರಂಟ್ ಹೊರಡಿಸಿದ ನಂತರ ಅಕ್ಟೋಬರ್ 11ರಂದು ಯಡಿಯೂರಪ್ಪ ಅವರನ್ನು ಬಂಧಿಸಲಾಗಿತ್ತು. ಯಡಿಯೂರಪ್ಪ ರಾಜೀನಾಮೆ ನೀಡಿದ್ದು ಗಣಿ ಅಕ್ರಮದ ತನಿಖೆ ನಡೆಸಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ವರದಿ ಆಧರಿಸಿ. ಇಲ್ಲಿ ಸಿದ್ದರಾಮಯ್ಯ ವಿರುದ್ಧ ಯಾವುದೇ ತನಿಖಾ ಸಂಸ್ಥೆಗಳು ತನಿಖೆ ನಡೆಸಿಲ್ಲ. ಎಫ್‌ಐಆರ್ ಕೂಡಾ ದಾಖಲಾಗಿಲ್ಲ.

ಈಗ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ಆಧರಿಸಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಕಾನೂನುಬಾಹಿರ ಎಂದು ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಕಾಂಗ್ರೆಸ್‌ನ ಪ್ರತಿಭಟನೆಯನ್ನು ಸಂವಿಧಾನಬಾಹಿರ ಎಂದು ಬಿಜೆಪಿ ಹೇಳುತ್ತಿರುವುದು ಹಾಸ್ಯಾಸ್ಪದ. ತಾವು ಮಾಡಿದ್ದು ಸರಿ, ಬೇರೆಯವರು ಮಾಡಿದ್ರೆ ತಪ್ಪು ಎಂಬ ಬಿಜೆಪಿಯವರ ಧೋರಣೆ ಎಲ್ಲ ವಿಚಾರದಲ್ಲೂ ಎದ್ದು ಕಾಣುತ್ತಿದೆ.
ಇನ್ನು ಸಿದ್ದರಾಮಯ್ಯ ಅವರು ಮುಡಾ ವಿಚಾರದಲ್ಲಿ ಯಾವುದೇ ಪ್ರಭಾವ ಬೀರಿದ ಪುರಾವೆ ಸಿಕ್ಕಿಲ್ಲ. ನಿವೇಶನ ಹಂಚಿಕೆ ಆಗುವಾಗ ಅವರು ಮುಖ್ಯಮಂತ್ರಿಯಾಗಿರಲಿಲ್ಲ. ಮುಡಾದಲ್ಲಿ ಅಕ್ರಮ ಆಗಿದ್ದರೂ, ಅದಕ್ಕೆ ಆಗಿನ ಅಧ್ಯಕ್ಷರು, ಸಂಬಂಧಿತ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಬೇಕು. ಒಂದು ವೇಳೆ ಸಿಎಂ ತಮ್ಮ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂಬುದಕ್ಕೆ ಪತ್ರವ್ಯವಹಾರ, ದಾಖಲೆಗಳು ಇರಬೇಕು. ಸದ್ಯ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನ ʼಅಕ್ರಮʼವಾಗಿ ನೀಡಲಾಗಿದೆ ಎಂಬುದು ವಿರೋಧ ಪಕ್ಷಗಳ ಆರೋಪ. ಅದನ್ನು ನೀಡಿದ್ದು ಸ್ವತಃ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಅಷ್ಟೇ ಅಲ್ಲ ಮುಡಾ ವಶಕ್ಕೆ ಪಡೆದುಕೊಂಡ ಜಮೀನಿಗೆ ಬದಲಿಯಾಗಿ 50:50 ಅನುಪಾತದಲ್ಲಿ ನಿವೇಶನ ನೀಡುವ ನಿಯಮ ರೂಪಿಸಿದ್ದು ಬಸವರಾಜ ಬೊಮ್ಮಾಯಿ ಸರ್ಕಾರ.
ಆಗಿನ MUDA ಅಧ್ಯಕ್ಷರು, ಸದಸ್ಯರು ಯಾರ್ಯಾರು?
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಿವೇಶನ ಕೊಟ್ಟಾಗ ಮುಡಾ ಅಧ್ಯಕ್ಷರಾಗಿದ್ದವರು ಬಿಜೆಪಿಯ ಎಚ್ ವಿ ರಾಜೀವ್ (ಈಗ ಕಾಂಗ್ರೆಸ್‌ನಲ್ಲಿದ್ದಾರೆ). ಸದಸ್ಯರಾಗಿದ್ದವರು ಶಾಸಕರಾಗಿದ್ದ ತನ್ವೀರ್ ಸೇಠ್, ಎಸ್ ರಾಮದಾಸ್, ಜಿ ಟಿ ದೇವೇಗೌಡ, ಕೆ ವಿ ನಾರಾಯಣಸ್ವಾಮಿ, ಕೆ ಟಿ ಶ್ರೀಕಂಠೇಗೌಡ, ಆರ್ ಧರ್ಮಸೇನ, ಎಲ್ ನಾಗೇಂದ್ರ, ಹರ್ಷವರ್ಧನ ಬಿ, ಡಾ. ಯತೀಂದ್ರ ಸಿದ್ದರಾಮಯ್ಯ, ರವೀಂದ್ರ ಶ್ರೀಕಂಠಯ್ಯ. ಎಂಎಲ್‌ಸಿಗಳಾದ ಮರಿತಿಬ್ಬೇಗೌಡ, ಸಂದೇಶ್ ನಾಗರಾಜು. ಇದರಲ್ಲಿ ಮೂರೂ ಪಕ್ಷದವರು ಇದ್ದಾರೆ. ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಬಿ.ಎಂ. ಮಂಜು, ಲಕ್ಷ್ಮೀದೇವಿ, ನವೀನ್‍ಕುಮಾರ್ ಎಂ.ಎನ್, ಜಿ.ಲಿಂಗಯ್ಯ, ಕೆ.ಮಾದೇಶ್ ಕೂಡಾ ಸದಸ್ಯರು. ಮುಡಾ ಸಭೆಯಲ್ಲಿ ಪಾರ್ವತಿಯವರಿಗೆ ನಿವೇಶನ ಮಂಜೂರು ಮಾಡಿದಾಗ ಇವರಲ್ಲಿ ಯಾರೊಬ್ಬರಿಗೂ ಅಕ್ರಮ ಎಂದು ಅನ್ನಿಸಿಲ್ಲವೇ?

ಸರ್ಕಾರದ ಅಧಿಕಾರಿಗಳೂ ಮೂಡಾದ ಸದಸ್ಯರಾಗಿರುತ್ತಾರೆ. ಆ ಸಮಯದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಐ.ಎ.ಎಸ್, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ. ಡಿ.ಬಿ.ನಟೇಶ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಶಿಲ್ಪಾನಾಗ್, ನಗರ ಯೋಜನಾ ಸದಸ್ಯ ಜಿ.ಎಸ್. ಜಯಸಿಂಹ, ಅಭಿಯಂತರ ಸದಸ್ಯ ಶಂಕರ್, ನಗರ ಕಾಮಗಾರಿ ವೃತ್ತ ಅಧೀಕ್ಷಕ ಅಭಿಯಂತರು(ವಿ) ಹೆಚ್.ನಾಗೇಶ್, ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಸಿ.ಜಯಣ್ಣ ಇವರೆಲ್ಲರೂ ಸದಸ್ಯರು. ಕೆಲವರು ಪದನಿಮಿತ್ತ. ಅಂದರೆ ಇಲ್ಲಿ ಹಗರಣವಾಗಿದ್ದರೆ ಇವರೆಲ್ಲರ ಸಮ್ಮುಖದಲ್ಲಿಯೇ, ಅವಗಾಹನೆಗೆ ಬಂದೇ ಆಗಿರುತ್ತದೆ. ಮುಡಾ ʼಹಗರಣʼ ದಲ್ಲಿ ಇವರೆಲ್ಲರನ್ನೂ ತನಿಖೆಗೆ ಒಳಪಡಿಸಬೇಕು.
ಪಾರ್ವತಿ ಅವರಂತೆ ಮುಡಾಕ್ಕೆ ಜಮೀನು ಬಿಟ್ಟುಕೊಟ್ಟಿದ್ದ ನೂರಾರು ಮಂದಿಗೆ ಇದೇ ಅನುಪಾತದಲ್ಲಿ ಹತ್ತಕ್ಕೂ ಹೆಚ್ಚು ನಿವೇಶನ ನೀಡಲಾಗಿದೆ. ಇದರಲ್ಲಿ ಅಕ್ರಮ ಅಥವಾ ಹಗರಣ ನಡೆದಿದ್ದರೆ ಅದು ಬಿಜೆಪಿ ಸರ್ಕಾರದ ತಪ್ಪೇ ವಿನಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಅಷ್ಟೇ ಅಲ್ಲ 2014ರಲ್ಲಿಯೂ ಪಾರ್ವತಿಯವರು ಮುಡಾಕ್ಕೆ ಪರಿಹಾರ ಅಥವಾ ಬದಲಿ ನಿವೇಶನ ಕೊಡುವಂತೆ ಪತ್ರ ಬರೆದಿದ್ದರು. ಆ ವಿಚಾರವನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ಮುಡಾ ಅಧ್ಯಕ್ಷರು ತಂದಾಗ ತಾವು ಮುಖ್ಯಮಂತ್ರಿ ಆಗಿರುವಷ್ಟು ದಿನ ಕೊಡದಂತೆ ಸೂಚಿಸಿದ್ದರು ಎಂದು ಅವರೇ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಪ್ರಭಾವ ಬೀರಿ ನಿವೇಶನ ಪಡೆದಿದ್ದಾರೆ ಎಂಬ ಆರೋಪ ಬರುತ್ತದೆ ಎಂದು ಸಿದ್ದರಾಮಯ್ಯ ಅವರು ಆಗಲೇ ಊಹಿಸಿದ್ದರು. ಇದೀಗ ಬಿಜೆಪಿ ಅವಧಿಯಲ್ಲಿ ನಿವೇಶನ ಮಂಜೂರಾಗಿದ್ದರೂ ಸಿದ್ದರಾಮಯ್ಯ ಅಕ್ರಮ ಮಾಡಿದ್ದಾರೆ, ಪ್ರಭಾವ ಬೀರಿ ನಿವೇಶನ ಪಡೆದಿದ್ದಾರೆ ಎಂಬ ಆರೋಪ ಬಂದಿದೆ. ಇದು ರಾಜಕೀಯ ಪ್ರೇರಿತವಲ್ಲದೇ ಮತ್ತೇನೂ ಅಲ್ಲ.
ರಾಜ್ಯಪಾಲರು ಖಾಸಗಿ ದೂರಿನ ಮೇಲೆ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ ಅವರ ಅರ್ಜಿಯ ವಿಚಾರಣೆ ಹೈಕೋರ್ಟ್ ಕಳೆದ ವಾರ ಕೈಗೆತ್ತಿಕೊಂಡಿದೆ. ಇದೇ 30ರಂದು ಮೂರೂ ಅರ್ಜಿಗಳ ವಿಚಾರಣೆಯೂ ನಡೆಯಲಿದೆ. ಆದರೆ, ಖಾಸಗಿಯವರು ಸಿಎಂ ವಿರುದ್ಧ ವಿಚಾರಣೆಗೆ ಅನುಮತಿಯನ್ನು ರಾಜ್ಯಪಾಲರಿಂದ ಕೇಳುವುದಕ್ಕೆ ಅವಕಾಶ ಇಲ್ಲ. ಅಷ್ಟೇ ಅಲ್ಲ ಬಲವಾದ ಪುರಾವೆ, ಸಾಕ್ಷ್ಯ ಏನೂ ಇಲ್ಲದೇ ಹೈಕೋರ್ಟ್ ಪೀಠ ತನಿಖೆಗೆ ನಿರ್ದೇಶನ ನೀಡುವುದು ಸಾಧ್ಯವಿಲ್ಲ ಎಂದು ಕಾನೂನು ತಜ್ಞರು ಹೇಳುತ್ತಾರೆ. ಒಂದು ವೇಳೆ ಹೈಕೋರ್ಟ್ ಲೋಕಾಯುಕ್ತ ಅಥವಾ ಸಿಐಡಿಗೆ ಎಫ್‌ಐಆರ್ ದಾಖಲಿಸಿ ಎಂದು ಸೂಚಿಸಿದರೆ ಮಾತ್ರ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕಾಗುತ್ತದೆ. ಯಾಕೆಂದರೆ ಅವು ಸಿದ್ದರಾಮಯ್ಯ ಅವರ ಕೈಕೆಳಗೆ ಅಂದರೆ ಸರ್ಕಾರದ ಅಡಿಯಲ್ಲಿ ಬರುವ ತನಿಖಾ ಸಂಸ್ಥೆಗಳು.
ಆದರೆ, ಸದ್ಯ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗಿದ್ದಾಗಲೇ ಪ್ರಭಾವ ಬೀರಿದ್ದರು ಎಂಬ ಆರೋಪದ ಆಧಾರದಲ್ಲಿ ತನಿಖೆ ನಡೆಸುವುದಿದ್ದರೂ ಆಗಿನ ಮುಡಾ ಅಧ್ಯಕ್ಷರು, ಸಂಬಂಧಿಸಿದ ಅಧಿಕಾರಿಗಳನ್ನೂ ತನಿಖೆ ಒಳಪಡಿಸಬೇಕಲ್ಲವೇ? ರಾಜ್ಯಪಾಲರಿಗೆ ದೂರು ಕೊಟ್ಟವರು ಸಿಎಂ ವಿರುದ್ಧ ಮಾತ್ರ ತನಿಖೆಗೆ ಅನುಮತಿ ಕೊಡುವಂತೆ ಕೇಳಿರುವುದೇ ರಾಜಕೀಯ ಪ್ರೇರಿತ ಎಂಬುದನ್ನು ರಾಜ್ಯಪಾಲರು ಮನಗಾಣಬೇಕಿತ್ತು. ಸಾಕಷ್ಟು ಪುರಾವೆ ಸಹಿತ ಬರುವಂತೆ ನಿರ್ದೇಶನ ನೀಡಿದ್ದರೆ ರಾಜ್ಯಪಾಲರು ಕೇಂದ್ರದ ಕೈಗೊಂಬೆ ಎಂಬ ಅಪವಾದದಿಂದ ತಪ್ಪಿಸಿಕೊಳ್ಳಬಹುದಿತ್ತು.
ಸಿದ್ದರಾಮಯ್ಯ ಅವರ ಮೇಲೆ ದುರುದ್ದೇಶದಿಂದ ಕಳಂಕ ಅಂಟಿಸುವ ಮತ್ತು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಒಂದೇ ಒಂದು ಅಜೆಂಡಾ ಇಟ್ಟುಕೊಂಡು ವಿರೋಧ ಪಕ್ಷಗಳು ಹೋರಾಟ ನಡೆಸುತ್ತಿರುವುದು, ಅದಕ್ಕೆ ಪೂರಕವಾಗಿ ಮಾಧ್ಯಮಗಳು ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಅದರಲ್ಲೂ ನೂರಾರು ಎಕರೆ ಅಕ್ರಮ ಆಸ್ತಿ, ಬಂಗಲೆ ಹೊಂದಿರುವವರು, ತಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ರಾಜ್ಯದ ಸಂಪತ್ತು ಲೂಟಿ ಹೊಡೆದವರು, ಅಕ್ರಮವಾಗಿ ಭೂಮಿ ಬಗೆದು ಗಣಿ ಲೂಟಿ ಮಾಡಲು ಅನುಮತಿ ಕೊಟ್ಟವರು… ಭ್ರಷ್ಟಾಚಾರದ ಮಸಿಯನ್ನು ಸಿದ್ದರಾಮಯ್ಯ ಅವರ ಮೇಲೆ ಎರಚಿ ತಮ್ಮ ಹುಳುಕನ್ನು ತಾವೇ ಹೊರ ಬರುವಂತೆ ಮಾಡಿದ್ದಾರೆ. ಬಿಜೆಪಿಯ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ, ಜೆಡಿಎಸ್‌ನ ಎಚ್ ಡಿ ಕುಮಾರಸ್ವಾಮಿ ಅವರು ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಇದೇ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರ ಈಗ ದೂಳು ಕೊಡವಿ ಮೇಲೆದ್ದಿದೆ.
ಮೈಸೂರಿನವರೇ ಆಗಿರುವ ಹಿರಿಯ ಕಾನೂನು ತಜ್ಞ ವೇಣುಗೋಪಾಲ್ ಅವರು ಇತ್ತೀಚೆಗೆ ʼಈ ದಿನʼಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟವಾಗಿ, “ದೂರುದಾರರಿಗೆ ಆಗಲಿ, ವಿಪಕ್ಷಗಳಿಗೇ ಆಗಲಿ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಕಳಂಕಿತರು ಎಂದು ಬಿಂಬಿಸುವ ಉದ್ದೇಶ ಬಿಟ್ಟರೆ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಯಾವುದೇ ಉದ್ದೇಶ ಇಲ್ಲ. ಮುಖ್ಯಮಂತ್ರಿಗಳ ರಾಜೀನಾಮೆ ಕೊಡುವಂತೆ ಒತ್ತಡ ಹೇರುವುದಷ್ಟೇ ಅವರ ಉದ್ದೇಶ” ಎಂದಿದ್ದರು. ಹೈಕೋರ್ಟ್ ವಕೀಲರಾದ ಬಾಲನ್ ಕೂಡಾ ರಾಜ್ಯಪಾಲರ ನಡೆ ಸಂವಿಧಾನ ವಿರೋಧಿ ಎಂದು ಕಟುವಾಗಿ ಟೀಕಿಸಿದ್ದಾರೆ. “ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರದ್ದು ಯಾವುದೇ ತಪ್ಪು ಕಾಣುತ್ತಿಲ್ಲ. ಖಾಸಗಿಯವರ ಜಮೀನು ವಶಪಡಿಸಿಕೊಂಡ ನಂತರ ಪರಿಹಾರ ಕೊಡುವುದು ಮುಡಾದ ನಿಯಮದಲ್ಲೇ ಇದೆ. ಈ ಪ್ರಕರಣ ಕೋರ್ಟ್‌ನಲ್ಲಿ ನಿಲ್ಲೋದೇ ಇಲ್ಲ” ಎಂದು ಹೇಳಿದ್ದಾರೆ.
ಹೀಗಿರುವಾಗ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಸಂದರ್ಭ ಉಂಟಾಗದು. ಸದ್ಯಕ್ಕೆ ರಾಜ್ಯ ಕಾಂಗ್ರೆಸ್‌ನೊಳಗೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವಂತೆ ಮಾಡುವಷ್ಟು ಬಲಿಷ್ಠ ವಿರೋಧಿ ಬಣವೂ ಇಲ್ಲ. ಮುಡಾ ಪ್ರಕರಣದಲ್ಲಿ ಎಲ್ಲ ಶಾಸಕರೂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೈ ಕಮಾಂಡ್ ಕೂಡಾ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದೆ. ಸದ್ಯ ಹೈಕೋರ್ಟ್‌ನ ತೀರ್ಪಿನ ಮೇಲೆ ಎಲ್ಲರ ಗಮನ ಕೇಂದ್ರೀಕರಿಸಿದೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.