ಮನೆಗೆ ನುಗ್ಗಿ ಚಾಕು ತೋರಿಸಿ, ಬೆದರಿಸಿ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಮನೆಯ ಗಾಡ್ರೇಜ್‌ನಲ್ಲಿದ್ದ ಚಿನಾಭರಣಗಳನ್ನು ದರೋಡೆ ಮಾಡಿದ ಆರೋಪಿಯನ್ನು ಕೊಡಗು ಜಿಲ್ಲಾ ಪೊಲೀಸರು ಪ್ರಕರಣ ದಾಖಲಾದ ಆರು ಗಂಟೆಯಲ್ಲೇ ಬಂಧಿಸಿದ್ದಾರೆ.
ಸಣ್ಣ ಪೂಲಿಕೋಟು ಬಸ್ ನಿಲ್ದಾಣದ ಬಳಿ ಚೇರಂಬಾಣೆ ನಿವಾನಿ ಸುದರ್ಶನ್ (24) ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜೊತೆಗೆ ಕಳವು ಮಾಡಿದ್ದ 60 ಗ್ರಾಂ 530 ಮಿಲಿ ಚಿನ್ನಾಭರಣಗಳನ್ನು ಮತ್ತು ರೂ. 620 ನಗದು ಹಾಗೂ ಕೃತ್ಯಕ್ಕೆ ಬಳಸಿದ ಡ್ರಾಗರ್(ಚಾಕು)ವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ ರಾಮರಾಜನ್, ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಚೇರಂಬಾಣೆ ಗ್ರಾಮದ ನಿವಾಸಿಯಾದ ಗೋಪಾಲಕೃಷ್ಣ.ಕೆ.ಕೆ ಎಂಬುವವರ ಮನೆಗೆ ಆ.22ರಂದು ಬೆಳಗ್ಗೆ ಸುಮಾರು 11.30 ಗಂಟೆ ಸಮಯದಲ್ಲಿ ಮನೆಯಲ್ಲಿ ಗೋಪಾಲಕೃಷ್ಣ.ಕೆ.ಕೆ ರವರ ತಾಯಿ ಒಬ್ಬರೆ ಇರುವ ಸಂದರ್ಭ ಮನೆಗೆ ನುಗ್ಗಿ ಚಾಕು ತೋರಿಸಿ ಬೆದರಿಸಿ ಹಲ್ಲೆ ಮಾಡಿದ್ದ. ಬಳಿಕ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಮನೆಯ ಗಾಡ್ರೇಜ್‌ನಲ್ಲಿದ್ದ ಚಿನಾಭರಣಗಳನ್ನು ದರೋಡೆ ಮಾಡಿರುವ ಕುರಿತು ದೂರು ಸ್ವೀಕರಿಸಲಾಗಿತ್ತು. ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ ಆರು ಗಂಟೆಯಲ್ಲೇ ಬಂಧಿಸಿದ್ದಾರೆ ಎಂದು ತಿಳಿಸಿದರು.
ಪ್ರಕರಣ ಪತ್ತೆ ಹಚ್ಚುವ ಸಲುವಾಗಿ ಮಡಿಕೇರಿ ಉಪವಿಭಾಗ ಡಿ.ಎಸ್.ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಪಿ.ಐ ಅನೂಪ್ ಮಾದಪ್ಪ, ಭಾಗಮಂಡಲ ಪಿಎಸ್‌ಐ ಶೋಭಾ ಲಮಾಣಿ ಸೇರಿದಂತೆ ವಿಶೇಷ ತಂಡವನ್ನು ರಚಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಇದನ್ನು ಓದಿದ್ದೀರಾ? ಜೈಲಿನಲ್ಲಿ ದರ್ಶನ್‌ಗೆ ಐಷಾರಾಮಿ ಸೌಲಭ್ಯ: ಫೋಟೊ ವೈರಲ್
ಪ್ರಕರಣದ ಘಟನೆ ಸ್ಥಳಕ್ಕೆ ಹಿರಿಯ ಅಧಿಕಾರಿ/ಸಿಬ್ಬಂದಿಯವರುಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಮಾಹಿತಿ ನೀಡಿದರು.
