ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ನಿಲ್ಲಿಸಿ: ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ

Date:

Advertisements

ಲೀಸ್ ಹಾಗೂ ಮಾರಾಟ ಒಪ್ಪಂದದ ನೆಪದಲ್ಲಿ ಜಿಂದಾಲ್ ಕಂಪನಿಗೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲ ಪ್ರದೇಶದ 3667 ಎಕರೆ ಸರ್ಕಾರಿ ಭೂಮಿ ಹಸ್ತಾಂತರ ಮಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ರಾಜ್ಯ ಸಮಿತಿಯು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಈ ಬಗ್ಗೆ ಕರ್ನಾಟಕ ಪ್ರಾಂತ ರೈತ ಸಂಘದ (KPRS) ಅಧ್ಯಕ್ಷರರಾದ ಜಿ ಸಿ ಬಯ್ಯಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಟಿ ಯಶವಂತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಪ್ರತಿ ಎಕರೆಗೆ ಸುಮಾರು ಮೂರು ಕೋಟಿ ರೂ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಕೇವಲ ಒಂದು ಲಕ್ಷದ ಇಪ್ಪತ್ತೆರಡು ಸಾವಿರ ರೂ.ಗಳಿಗೆ ಮಾರಾಟ ಮಾಡುವ ರಾಜ್ಯ ಸರ್ಕಾರದ ಸಂಪುಟದ ತೀರ್ಮಾನ, ಯಾರೂ ಒಪ್ಪುವಂತಹದ್ದಲ್ಲ” ಎಂದು ಖಂಡಿಸಿದ್ದಾರೆ.

ಉದ್ಯೋಗ ಸೃಷ್ಟಿಯ ಮಂಕು ಬೂದಿ ಎರಚಿ ಅಮೂಲ್ಯ ಸಾರ್ವಜನಿಕ ಆಸ್ತಿಯನ್ನು ಬಹುತೇಕ ಉಚಿತವಾಗಿ ಜಿಂದಾಲ್ ಉಕ್ಕು ಕಾರ್ಖಾನೆಗೆ ನೀಡುತ್ತಿರುವುದು ರಾಜ್ಯದ ಜನತೆಗೆ ಎಸಗುತ್ತಿರುವ ಮಹಾ ವಂಚನೆ. ಹಿಂದಿನ ಬಿಜೆಪಿ ಸರ್ಕಾರ, ಇದೇ ರೀತಿ ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡಲು ಹೊರಟಾಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಬಲವಾದ ವಿರೋಧ ದಾಖಲಿಸಿತ್ತು. ಜನಾಭಿಪ್ರಾಯಕ್ಕೆ ಮಣಿದ ಹಿಂದಿನ ಸರ್ಕಾರ ಕೈ ಬಿಟ್ಟಿದ್ದ ಮಾರಾಟ ಪ್ರಕ್ರಿಯೆಯನ್ನು ಹಿಂದೆ ತಾನೂ ವಿರೋಧಿಸಿದ್ದೆ ಎಂಬ ಯಾವುದೇ ಮುಜುಗರ ಇಲ್ಲದೇ, ಬಹುತೇಕ ಉಚಿತವಾದ ದರದಲ್ಲಿ ಮಾರಲು ಹೊರಟಿರುವುದು ಆತ್ಮವಂಚನೆಯ ಪರಮಾವಧಿಯಾಗಿದೆ” ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಟೀಕಿಸಿದೆ.

Advertisements
image 1 3

ಕಾರ್ಖಾನೆಗೆ ಬೇಕಾದ ಭೂಮಿಯನ್ನು ಅತ್ಯಂತ ಕಡಿಮೆ ದರದ ಲೀಸಿನಲ್ಲಿ ಪಡೆದಿದ್ದ ಜಿಂದಾಲ್ ಕಾರ್ಖಾನೆಗೆ ಅತ್ಯಂತ ಅಗ್ಗದ ದರಕ್ಕೆ ಕ್ರಯಕ್ಕೆ ಕೊಡಬೇಕಾದ ಅಗತ್ಯ ಇರಲಿಲ್ಲ. ಪೊಲೀಸ್ ಹಾಗೂ ಕಾನೂನು ಬಲ ಬಳಸಿ ಬಲವಂತವಾಗಿ ಭೂ ಸ್ವಾಧೀನಕ್ಕೆ ಒಳಪಡಿಸಿಕೊಂಡು, ಕಿತ್ತುಕೊಂಡ ರೈತರ ಭೂಮಿ ಹೇಗೆ ದೈತ್ಯ ಉದ್ದಿಮೆ ಮಾಲೀಕರ ಖಾಸಗಿ ಆಸ್ತಿಯಾಗುತ್ತದೆ ಎಂಬುದಕ್ಕೆ ಜಿಂದಾಲ್ ಭೂಮಿ ಹಗರಣ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರ್ಮಿಕ ಕಾನೂನುಗಳನ್ನು ಪಾಲಿಸದೇ ಗುತ್ತಿಗೆ-ಹೊರಗುತ್ತಿಗೆ ಎಂಬ ಆಧುನಿಕ ಜೀತ ಪದ್ದತಿಯ ಮೂಲಕ ವಲಸೆ ಕಾರ್ಮಿಕರನ್ನು ಬಳಸಿ ಗರಿಷ್ಠ ದುಡಿಮೆಗೆ ಒಳಪಡಿಸಲಾಗುತ್ತಿದೆ. ಸರ್ಕಾರದಿಂದ ಭೂಮಿ, ನೀರು, ವಿದ್ಯುತ್, ಬಂಡವಾಳಕ್ಕೆ ಸಾಲ, ಬಡ್ಡಿ ವಿನಾಯಿತಿ, ತೆರಿಗೆ ರಿಯಾಯಿತಿ, ಸಾಲಮನ್ನಾ ಸೇರಿದಂತೆ ಉತ್ಪಾದನಾ ಆಧಾರಿತ ಸಬ್ಸಿಡಿ ಹೀಗೆ ಪ್ರತಿಯೊಂದನ್ನು ಪಡೆಯುವ ಖಾಸಗಿ ಉದ್ದಿಮೆದಾರರು, ಯಾವುದೇ ಅರ್ಥಪೂರ್ಣ ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ. ಸಾರ್ವಜನಿಕ ಸಂಪತ್ತು ಹಾಗೂ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ, ತಮ್ಮ ಖಾಸಗಿ ಆಸ್ತಿ ಮತ್ತು ಸಂಪತ್ತನ್ನು ಅಪಾರ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿವೆ ಎಂದು ದೂರಿದ್ದಾರೆ.

ಬಂಡವಾಳಶಾಹಿ ಕೇಂದ್ರಿತ ಅಭಿವೃದ್ಧಿಯಿಂದ ರೈತರು ಮತ್ತು ಕಾರ್ಮಿಕರಿಗೆ ಕಿಂಚಿತ್ತೂ ಪ್ರಯೋಜನ ಇಲ್ಲ. ಬಂಡವಾಳ ಹೂಡಿಕೆ ಹೆಸರಿನಲ್ಲಿ ಭೂಮಿ ಮಾಲೀಕತ್ವವನ್ನು ಹಸ್ತಾಂತರಿಸುವ ಈಗಿನ ನೀತಿಯನ್ನು ಬದಲಿಸಬೇಕು. ಯಾವುದೇ ಕೈಗಾರಿಕೆಗಳಿಗೆ ನೀಡುವ ಭೂಮಿ ಮಾಲೀಕತ್ವ ಸರ್ಕಾರದ ಒಡೆತನದಲ್ಲೇ ಉಳಿಯಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವುದನ್ನು ಸಮರ್ಥಿಸಿಕೊಂಡಿರುವ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಇದೇ ರೀತಿ ಭೂಮಿ ನೀಡುವುದನ್ನು ಮುಂದುವರೆಸುತ್ತೇವೆ. ಮುಂದಿನ ಫೆಬ್ರವರಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ ಇದೇ ರೀತಿಯಲ್ಲಿ ಭೂಮಿ ಧಾರೆ ಎರೆಯುತ್ತೇವೆ ಎಂದು ಹೇಳುವ ಮೂಲಕ, ಅನ್ಯಾಯ ಹಾಗೂ ಬಲವಂತದ ಭೂ ಸ್ವಾಧೀನದ ಮೂಲಕ ರೈತರ ಭೂಮಿ ಕಿತ್ತುಕೊಳ್ಳುತ್ತೇವೆ ಎಂಬ ಸವಾಲನ್ನು ರೈತ ಸಮುದಾಯಕ್ಕೆ ಹಾಕಿದ್ದಾರೆ. ಇದನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಜಿ ಸಿ ಬಯ್ಯಾರೆಡ್ಡಿ ಹಾಗೂ ಟಿ ಯಶವಂತ ತಿಳಿಸಿದ್ದಾರೆ.

ಈಗಾಗಲೇ ರಾಜ್ಯಾದ್ಯಂತ ಲಕ್ಷಾಂತರ ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಕಿತ್ತುಕೊಂಡು ಉದ್ದಿಮೆಗಳಿಗೆ ಹಂಚಿಕೆ ಮಾಡಿ ಹತ್ತಾರು ವರ್ಷ ಕಳೆದರೂ ಕೈಗಾರಿಕೆಗಳೇ ಬಂದಿಲ್ಲ. ಇದೇ ಬಳ್ಳಾರಿ ಜಿಲ್ಲೆಯ ಕುಡಿತಿನಿ, ಹರಗಿನ ಡೋಣಿ ಪ್ರದೇಶದ ಸುಮಾರು 13 ಸಾವಿರ ಎಕರೆ ಭೂಮಿ ಮಿತ್ತಲ್, ಭ್ರಹ್ಮಿಣಿ ಕಂಪನಿಗಳಿಗೆ ಕೊಟ್ಟು ಹನ್ನೆರಡು ವರ್ಷಗಳೇ ಕಳೆದರೂ ಯಾವುದೇ ಕೈಗಾರಿಕೆಗಳು ಏಕೆ ಸ್ಥಾಪನೆಯಾಗಿಲ್ಲ ಎಂದು ಪ್ರಶ್ನಿಸಿರುವ ರೈತ ಮುಖಂಡರು, ಮೋಸ ಹಾಗೂ ಅನ್ಯಾಯದ ಬೆಲೆ ಸರಿಪಡಿಸಿ ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚುವರಿ ಪರಿಹಾರ ಒದಗಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪು ಏಕೆ ಜಾರಿ ಮಾಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿದ್ದೀರಾ? ಕೊಡಗು | ದರೋಡೆ ನಡೆಸಿದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಕೈಗಾರಿಕೆಗಳಿಗೆ ಲೀಸ್ ಮೇಲೆ ಭೂಮಿ ನೀಡುವಾಗಲೂ ಪ್ರತಿ ವರ್ಷದ ಲೀಸ್ ಹಣದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪಾಲು ನೀಡಬೇಕು. ನಿರ್ದಿಷ್ಟ ಅವಧಿಯೊಳಗೆ ಕೈಗಾರಿಕೆ ಸ್ಥಾಪಿಸದ ಕಂಪನಿಗಳಿಂದ ಭೂಮಿ ವಾಪಸ್ ಪಡೆದು ಭೂಮಿ ಕಳೆದುಕೊಂಡಿದ್ದ ರೈತರಿಗೆ ವಿತರಿಸಬೇಕು. ಬಂಡವಾಳ ಹೂಡಿಕೆ ಸಮಾವೇಶಗಳಲ್ಲಿ ರೈತರ ಭೂಮಿ ಕೊಳ್ಳೆ ಹೊಡೆದು ರಿಯಲ್ ಎಸ್ಟೇಟ್ ದಂಧೆ ನಡೆಸುವುದನ್ನು ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸಬಾರದು. ಬಿಎಂಐಸಿ ಯೋಜನೆ ಹೆಸರಿನಲ್ಲಿ ಭೂ ಹಗರಣ ನಡೆಸಿರುವ ನೈಸ್ ಕಂಪನಿಯಿಂದ ಭೂಮಿ ವಾಪಸ್ಸು ಪಡೆದು ರೈತರ ಹಿತರಕ್ಷಣೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

Download Eedina App Android / iOS

X