ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಹಜ ಸಾವಿಗಿಂತ ದುಪ್ಪಟ್ಟು ಜನರು ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಯಚೂರು ಪುಟ್ಟಮಾದಯ್ಯ ಹೇಳಿದರು.
ರಾಯಚೂರು ನಗರದ ಸದರ ಬಜಾರ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ರಸ್ತೆ ಸಂಚಾರ ಜಾಗೃತಿ ಮತ್ತು ಮೋಟಾರ ವಾಹನ ಕಾಯ್ದೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯೆ ಹೆಚ್ಚಳವಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚಳವಾಗುತ್ತಿವೆ. ವಯೋಸಹಜ ಸಾವಿಗಿಂತ ದುಪ್ಪಟ್ಟು ಜನರು ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ವಾಹನ ಚಾಲನೆ ಸುರಕ್ಷತೆ ಪಾಲಿಸುವುದು ಪ್ರತಿಷ್ಠೆಯಾಗಿಸಿಕೊಳ್ಳದೇ ನಿಯಮ ಪಾಲನೆ ಎಲ್ಲರ ಕರ್ತವ್ಯವಾಗಬೇಕಿದೆ ಎಂದರು.
ಸಾರಿಗೆ ಮತ್ತು ಪೊಲೀಸರ ದಂಡ ಹಾಕುವದರಿಂದ ಮಾತ್ರ ರಸ್ತೆ ಅಪಘಾತ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ವಾಹನ ಸವಾರರು ಸಹ ನಿಯಮ ಪಾಲನೆಯನ್ನು ರೂಢಿಸಿಕೊಳ್ಳಬೇಕಿದೆ. ಆಟೋ ಚಾಲಕರು, ವಾಹನ ಚಾಲಕರು ನಿಯಮ ಪಾಲಿಸುವ ಮೂಲಕ ಪ್ರಾಣಹಾನಿಯನ್ನು ನಿಯಂತ್ರಿಸಬೇಕಿದೆ. ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಳ್ಳುವುದರಿಂದ ಕುಟುಂಬಕ್ಕೆ ಮಾತ್ರವಲ್ಲದೆ, ದೇಶಕ್ಕೂ ಸಮಸ್ಯೆಯಾಗುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಶಿವುಕುಮಾರ್, ರಸ್ತೆ ಅಪಘಾತ ನಿಯಂತ್ರಣಕ್ಕೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆ ನಡೆಸುತ್ತಾ ಬಂದಿದೆ. ದೇಶದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಕಳವಳಕಾರಿ. ವಾಹನ ಚಾಲಕರು ಚಾಲನಾ ಪರವಾನಿಗೆ, ವಿಮೆ, ಹೆಲ್ಮೆಟ್ ಬಳಸುವುದನ್ನು ರೂಢಿಸಿಕೊಳ್ಳುವುದು ಬಹಳ ಅವಶ್ಯಕತೆ. ಇದರಿಂದ ಅಪಘಾತ ಸಮಸ್ಯೆಯಿಂದ ಉಳಿಯಬಹುದು.
ಇದನ್ನು ಓದಿದ್ದೀರಾ? ವಿಜಯನಗರ | ಹೆದ್ದಾರಿಯಲ್ಲಿ ದಾಖಲೆ ತಪಾಸಣೆ ವೇಳೆ ಅಪಘಾತ; ಚಾಲಕ ಸಾವು
ಶೇ.30ರಷ್ಟು ಪ್ರಕರಣಗಳಲ್ಲಿ ಸಮರ್ಪಕ ದಾಖಲೆಗಳಿಲ್ಲದೇ ಇರುವುದರಿಂದ ಪರಿಹಾರದಿಂದಲೂ ವಂಚಿತರಾಗುತ್ತಿದ್ದಾರೆ. ಹಿಟ್ ಆಂಡ್ ರನ್ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಸಮಿತಿಯಿಂದ 2 ಲಕ್ಷ ರೂ ಪರಿಹಾರ ಒದಗಿಸಲಾಗುತ್ತದೆ. ಗಾಯಗೊಂಡವರಿಗೆ 50 ಸಾವಿರ ರೂ ಪರಿಹಾರ ಒದಗಿಸುವ ಅವಕಾಶವಿದೆ. ಬಹುತೇಕ ಜನರಿಗೆ ಅಪಘಾತ ಪ್ರಕ್ರಿಯೆಗಳ ಮಾಹಿತಿಯ ಕೊರತೆಯಿದೆ. ಪಾಲಕರು ತಮ್ಮ ಮಕ್ಕಳಿಗೆ ವಾಹನ ಚಾಲನೆ ಬಗ್ಗೆ ಎಚ್ಚರಿಕೆ ನೀಡಿ, ಮನವರಿಕೆ ಮಾಡಿಕೊಡುವ ಮೂಲಕ ರಸ್ತೆ ಅಪಘಾತಗಳ ನಿಯಂತ್ರಣ ಮಾಡಬಹುದು ಎಂದರು.
ವೇದಿಕೆಯಲ್ಲಿ ಡಿವೈಎಸ್‌ಪಿ ಸತ್ಯನಾರಾಯಣ, ಸದರ ಬಜಾರ ಠಾಣೆ ಪಿಐ ಉಮೇಶ ಕಾಂಬ್ಳೆ, ನಾಗರಾಜ ಸೇರಿದಂತೆ ಪೊಲೀಸ್ ಅಧಿಕಾರಿಗಳು, ವಿವಿಧ ಶಾಲಾ ಮಕ್ಕಳು, ಆಟೋ ಚಾಲಕರು, ಭಾಗವಹಿಸಿದ್ದರು.
ವರದಿ : ಹಫೀಜುಲ್ಲ
