ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ಕಡಿಮೆ ಅಂತರದಲ್ಲಿ ಸಂಪರ್ಕ ಕಲ್ಪಿಸುವ ತುಂಗಭದ್ರಾ ನದಿಗೆ ಅಡ್ಡಲಾಗಿ ಚಿಕ್ಕಲಪರ್ವಿ ಬಳಿ ಬಂದರು ಸಹಿತ ಸೇತುವೆ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಮಂಜೂರಾತಿ ದೊರಕಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಹೇಳಿದರು.
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಚಿಕ್ಕಲಪರ್ವಿ ಬಳಿ ತುಂಗಭದ್ರಾ ನದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಂತರ ಮಾತನಾಡಿದ ಅವರು, ಅಡ್ಡಲಾಗಿ ಬಂದರ್ ಸೇತುವೆ ನಿರ್ಮಾಣ ಮಾಡಲು ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದನ್ವಯ 397.50 ಕೋಟಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಸಿಂಧನೂರು – ಮಾನ್ವಿ ಮಾರ್ಗವಾಗಿ ಆಂಧ್ರಪ್ರದೇಶದ ಮಂತ್ರಾಲಯ, ಆದೋನಿ, ಕರ್ನೂಲ್ ಹಾಗೂ ಬೆಂಗಳೂರಿಗೆ ಪ್ರಯಾಣ ಬೆಳೆಸುವವರಿಗೆ ಮೊದಲು ಸುತ್ತು ಹಾಕಿ ಹೋಗಬೇಕಾಗಿತ್ತು. ಆದರೆ ಚಿಕ್ಕಲಪರ್ವಿ ಸೇತುವೆ ನಿರ್ಮಾಣವಾಗುವುದರಿಂದ ಈ ಮಾರ್ಗವಾಗಿ ಸಂಚಾರದ ಪ್ರಯಾಣ ಕಡಿಮೆಯಾಗಲಿದ್ದು, ಸಮಯ ಹಾಗೂ ಹಣದ ಉಳಿತಾಯ ಆಗಲಿದೆ. ಆ ಮೂಲಕ ಜನರಿಗೆ ಅನುಕೂಲವಾಗಲಿದೆ ಎಂದರು.
ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿಗೂ ಪ್ರಯೋಜನವಾಗಲಿದೆ. ಹೀಗಾಗಿ ತಮ್ಮ ಇಲಾಖೆಯಿಂದ ಕೈಗೆತ್ತಿಕೊಂಡ 397 ಕೋಟಿ. ರೂ. ಮೊತ್ತದ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ನಿರ್ಮಾಣ ಮಾಡಲು ಉದ್ದೇಶಿಸಿರುವ ಬಂದರು ಸಮೇತ ಸೇತುವೆ ಮೂಲಕ ಸಂಚರಿಸಿದರೆ ದೂರ ಕಡಿಮೆಯಾಗಲಿದ್ದು, ಸಂಚಾರದ ಸಮಯ ಸಹ ಉಳಿಯಲಿರುವ ಕಾರಣ ಬಹುದಿನದ ಈ ಭಾಗದ ಜನರ ಬೇಡಿಕೆಗೆ ಸಂಪುಟ ಈಡೇರಿಸಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಸಹಜ ಸಾವಿಗಿಂತ ಅಧಿಕ ಮಂದಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ : ಎಸ್‌ಪಿ ಪುಟ್ಟಮಾದಯ್ಯ
ಸರ್ಕಾರಕ್ಕೆ ಬಂದರು ಸಮೇತ ಸೇತುವೆ ನಿರ್ಮಾಣ ಮಾಡಲು ಈ ಭಾಗದ ಜನರ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿತ್ತು. ಅದರನ್ವಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡು ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ಸಚಿವ ಎನ್.ಎಸ್ ಬೋಸರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಹಂಪಯ್ಯ ನಾಯಕ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಶಾತಂಪ್ಪ, ಗಪೂರ್ ಸಾಬ್, ದೊಡ್ಡ ಬಸಪ್ಪಗೌಡ, ಅಕ್ಬರ ಪಾಷ, ಎ.ಬಾಲಸ್ವಾಮಿ ಕೊಡ್ಲಿ, ಶರಣಯ್ಯ ನಾಯಕ, ಖಾಲಿದ್ ಖಾದ್ರಿ, ಬಿ.ಕೆ. ಅಮರೇಶಪ್ಪ, ರಾಜಾ ಸುಭಾಷ ಚಂದ್ರ ನಾಯಕ, ಕೆ. ಬಸವಂತಪ್ಪ, ಚಂದ್ರಶೇಖರ ಕುರ್ಡಿ, ತಿಪ್ಪಣ ಬಾಗಲವಾಡ, ಹನುಮೇಶ ಮದ್ಲಾಪೂರು, ದೇವೇಂದ್ರಪ್ಪ್ಪ, ಸಲಾಂ ಪಾಷ, ಸಬ್ಜಲಿ ಸಾಬ್, ಶರಣಬಸವ ಗವಿಗಟ್ ಇನ್ನಿತರರು ಉಪಸ್ಥಿತರಿದ್ದರು.
