ಕಲಬುರಗಿ ನಗರದ ಮಾಲಗತ್ತಿ ಕ್ರಾಸ್ ಹಾಗೂ ಹಾಗರಗಾ ಮುಖ್ಯ ಹೆದ್ದಾರಿಯು ದೊಡ್ಡ ದೊಡ್ಡ ತಗ್ಗು ಗುಂಡಿಗಳಿಂದ ಕೂಡಿದ್ದು, ಇಬ್ಬರು ಶಾಸಕರಿದ್ದರೂ ದುರಸ್ತಿ ಮಾಡುವ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ. ಹಾಗಾಗಿ ಮುಖ್ಯ ಹೆದ್ದಾರಿ ದುರಸ್ತಿ ಕಾಣದಂತಾಗಿದೆ.
ಕಲಬುರಗಿ ನಗರದ ಹಾಗರಗಾ ಕ್ರಾಸ್‌ನಿಂದ ಮಾಲಗತ್ತಿ ಕ್ರಾಸ್‌ವರೆಗೆ ಶಾಸಕಿ ಕನೀಝ್ ಫಾತಿಮಾ ಅವರು ಪ್ರತಿನಿಧಿಸುವ ಕಲಬುರಗಿ ಉತ್ತರ ವಲಯದ ವ್ಯಾಪ್ತಿಗೆ ಒಳಪಡುತ್ತದೆ. ಮಾಲಗತ್ತಿ ಕ್ರಾಸ್‌ನಿಂದ ಹಾಗರಗಾ, ಖಾಜಾ ಕೋಟನೂರ್ ಗ್ರಾಮಗಳು ಶಾಸಕ ಬಸವರಾಜ ಮತ್ತಿಮುಡ್ ಪ್ರತಿನಿಧಿಸುವ ಕಲಬುರಗಿ ಗ್ರಾಮಾಂತರ ಕ್ಷೇತ್ರಕ್ಕೆ ಒಳ್ಳಪಡುತ್ತವೆ.
ಈ ರಸ್ತೆ ಶಾಸಕ ಬಸವರಾಜ ಮತ್ತಿಮುಡ್ ಅವರ ಕ್ಷೇತ್ರಕ್ಕೆ ಬರುವುದಿದ್ದರೂ, ಮತದಾರರು ಶಾಸಕಿ ಕನೀಝ್ ಫಾತಿಮಾ ಕ್ಷೇತ್ರದವರಾಗಿದ್ಧಾರೆ. ‘ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು’ ಅಂದಂಗೆ ಹಾಗರಗಾ ಮುಖ್ಯ ಹೆದ್ದಾರಿ ದುರಸ್ತಿ ಕಾಣದಾಗಿದೆ.

ಹಾಗರಗಾ, ಖಾಜಾ ಕೋಟನೂರ್, ಹಳೆ ಹೆಬ್ಬಾಳ, ಹೊಸ ಹೆಬ್ಬಾಳ, ಹೆಬ್ಬಾಳ ಚಿಂಚೋಳಿ, ಕಾಳಗಿ ಹೀಗೆ ಹಲವಾರು ಹಳ್ಳಿಗಳಿಗೆ, ತಾಲೂಕುಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಇಂತಹ ರಸ್ತೆ ದೊಡ್ಡ ದೊಡ್ಡ ತಗ್ಗು ಗುಂಡಿಗಳಿಂದ ತುಂಬಿದ್ದು, ಸಂಪೂರ್ಣ ಹಾಳಾಗಿ ಸುಮಾರು ವರ್ಷಗಳೇ ಕಳೆದರೂ ಕೂಡಾ ದುರಸ್ತಿ ಭಾಗ್ಯ ಸಿಕ್ಕಿಲ್ಲ.
ಈ ರಸ್ತೆ ಮೂಲಕ ನಿತ್ಯವೂ ಸಾವಿರಾರು ಜನರು ಸಂಚಾರ ಮಾಡುತ್ತಾರೆ. ಸರ್ಕಾರಿ ಬಸ್, ದ್ವಿಚಕ್ರ ವಾಹನ, ಸೈಕಲ್, ಆಟೋ, ಕ್ರೂಸರ್, ಟೆಂಪೊ, ಟ್ಯಾಂಕರ್, ಗೂಡ್ಸ್ ವಾಹನಗಳು ಸೇರಿದಂತೆ ಹಲವಾರು ಬೃಹತ್ ವಾಹನಗಳು ಈ ರಸ್ತೆಯಲ್ಲಿ ನಿರಂತರವಾಗಿ ಸಂಚಾರ ಮಾಡುತ್ತವೆ. ಹಾಗಾಗಿ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ರಸ್ತೆ ಸಮಸ್ಯೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಜೀವ ಕೈಯಲ್ಲಿಡಿದು ಓಡಾಡುವಂತಾಗಿದೆ.
ಕಲಬುರಗಿ ಉತ್ತರ ವಲಯದ ಹಾಗರಗಾ ಕ್ರಾಸ್‌ನಿಂದ 200 ಮೀಟರ್ ದೂರದಲ್ಲಿ ಮಾಲಗತ್ತಿ ಕ್ರಾಸ್‌ನಿಂದ ಹಾಗರಗಾ ಗ್ರಾಮದ ಉದ್ದಕ್ಕೂ ತಗ್ಗುಗುಂಡಿಗಳು ಬಿದ್ದಿದ್ದು, ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಪೋಷಕರು ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ತುಂಬಾ ಸಂಕಟ ಅನುಭವಿಸುತ್ತಿದ್ದಾರೆ.
“ಚರಂಡಿ ಕಾಮಗಾರಿಯನ್ನು ಕಳಪೆ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದು, ಚರಂಡಿ ನೀರು ನಿರಂತರವಾಗಿ ರಸ್ತೆ ಮೇಲೆ ಹರಿಯುತ್ತಿರುವುದರಿಂದ ಜನಸಾಮಾನ್ಯರು ಕೊಳಚೆ ನೀರಿನಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ. ಮಳೆ ಬಂದರೆ ಚರಂಡಿ ನೀರು, ಮಳೆನೀರು, ಕೆಸರು ಎಲ್ಲವೂ ಸೇರಿಕೊಂಡು ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ತಿಳಿಸಿಯದಂತಾಗಿದೆ. ಇದರಿಂದ ಈ ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿರುವ ಉದಾಹರಣೆಗಳೂ ಇವೆ” ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಖಾಜಾ ಕೋಟನೂರ್ ನಿವಾಸಿ ಹಣಮಯ್ಯ ಗುತ್ತೇದಾರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಾಗರಗಾದಿಂದ ಕಾಳಗಿಗೆ ಹೋಗುವ ಮುಖ್ಯ ಹೆದ್ದಾರಿ ತಗ್ಗು, ಗುಂಡಿಮಯವಾಗಿದ್ದು, ತೀರಾ ಸಮಸ್ಯೆ ಎದುರಿಸುವಂತಾಗಿದೆ. ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಜನಸಾಮಾನ್ಯರ ಕುರಿತು ಕಾಳಜಿಯೇ ಇಲ್ಲ. ಯಾವ ಸರ್ಕಾರ ಅಧಿಕಾರಕ್ಕೆ ಬಂದರೆ ಏನು ಪ್ರಯೋಜನ? ಇವರೆಲ್ಲ ಜನರನ್ನು ತೊಂದರೆಯಲ್ಲಿ ಸಿಲುಕಿಸಿ ಎಂತಹ ರಾಜಕೀಯ ಮಾಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಗರಗಾ ನಿವಾಸಿ ಹಾರುನ್ ರಶೀದ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮೂರ್ನಾಲ್ಕು ವರ್ಷಗಳಿಂದ ಮಾಧ್ಯಮ, ಪತ್ರಿಕೆಗಳು ಸುದ್ದಿ ಮಾಡಿದ್ದರೂ ಕಲಬುರಗಿ ಗ್ರಾಮಾಂತರ ಶಾಸಕ ಬಸವರಾಜ್ ಮತ್ತಿಮುಡ್, ಮಾಜಿ ಸಂಸದ ಉಮೇಶ್ ಜಾದವ್ ಅವರುಗಳು ಈ ರಸ್ತೆ ದುರಸ್ತಿ ಮಾಡುವ ಮನಸ್ಸು ಮಾಡಿಲ್ಲ” ಎಂದು ಆರೋಪಿಸಿದರು.
ಈ ಬಗ್ಗೆ ಈ ದಿನ.ಕಾಮ್ ಕಲಬುರಗಿ ಉತ್ತರ ವಲಯ ಶಾಸಕಿ ಕನೀಝ್ ಫಾತಿಮಾ ಅವರನ್ನು ದೂರವಾಣಿ ಸಂಪರ್ಕಿಸಿದಾಗ, ಹಾಗರಗಾ ಮುಖ್ಯ ರಸ್ತೆಯು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದಾದಲ್ಲಿ ನಾನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬಾರದೇ ಇದ್ದರೆ ಅದಕ್ಕೆ ಸರ್ಕಾರದಿಂದ ಅನುದಾನ ತರಲು ನಮಗೆ ಸಾಧ್ಯವಾಗುವುದಿಲ್ಲ. ಯಾವುದಕ್ಕೂ ವಿಚಾರಿಸುತ್ತೇನೆ” ಎಂದು ತಿಳಿಸಿದ್ದಾರೆ.
ಕಲಬುರಗಿ ಗ್ರಾಮಾಂತರ ಶಾಸಕ ಬಸವರಾಜ್ ಮತ್ತಿಮುಡ್ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತಾದರೂ, ಮಾತುಕತೆಗೆ ಲಭ್ಯರಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ವರದಿ ಫಲಶೃತಿ | ವಡ್ಡರ ಸಮುದಾಯದ ಸಂಕಷ್ಟಕ್ಕೆ ಸ್ಪಂದಿಸಿದ ಜೇವರ್ಗಿ ತಹಶೀಲ್ದಾರ್
“ಈ ರಸ್ತೆಯಲ್ಲಿರುವ ಇನಾಮದಾರ್ ಕಾಲೇಜು, ಡೆಕ್ಕನ್ ನರ್ಸಿಂಗ್ ಕಾಲೇಜು, ಇತರೆ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಆದಷ್ಟು ಬೇಗ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗಮನ ಹರಿಸಿ ಈ ರಸ್ತೆ ಸರಿಪಡಿಸಬೇಕು” ಎಂದು ಮನವಿ ಮಾಡಿದರು.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.