ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಬಿಜೆಪಿ ಮತ್ತು ಜೆಡಿಎಸ್ ನಡೆ ಖಂಡಿಸಿ ಮತ್ತು ಅಹಿಂದ ಪರ ನಾಯಕ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಬೆಂಬಲಿಸಿ ಆಗಸ್ಟ್ 29ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿಜೆ ಸಾಗರ್ ಹೇಳಿದರು.
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಕಾಶ ನೀಡುವ ಮೂಲಕ ಸಂವಿಧಾನ ಬಾಹಿರವಾಗಿ ನಡೆದುಕೊಂಡಿರುವ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿ ಅವರಿಗೆ ಮನವಿ ಮಾಡಲಾಗುವುದು ಎಂದರು.
ಬಿಜೆಪಿ ಜೆಡಿಎಸ್ ಮುಖಂಡರು ಸುಳ್ಳು ಆರೋಪಗಳ ಮೂಲಕ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟುಮಾಡುವ ಉನ್ನಾರ ನಡೆಸಿದ್ದಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಟಿ. ಜೆ. ಅಬ್ರಾಹಂ ಎಂಬುದು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಅರ್ಜಿ ಸಲ್ಲಿಸಿದ ತಕ್ಷಣ ತನಿಖೆಗೆ ಏಕಾಏಕಿ, ತರಾತುರಿಯಲ್ಲಿ ಅವಕಾಶ ನೀಡಲಾಗಿದೆ. ಆದರೆ, ಮಾಜಿ ಸಚಿವರಾದ ನಿರಾಣಿ, ಶಶಿಕಲಾ ಜೊಲ್ಲೆ, ಕುಮಾರಸ್ವಾಮಿ ವಿರುದ್ಧದ ಪ್ರಕರಣಗಳಲ್ಲಿ ತನಿಖೆ ನಡೆದು ಕ್ರಮಕ್ಕೆ ಅನುಮತಿ ಕೋರಿದರೂ ಕೂಡಾ ರಾಜ್ಯಪಾಲರು ಅವಕಾಶ ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮುಡಾದಲ್ಲಿ ಹಗರಣ ನಡೆದಿರುವ ಕುರಿತು ತನಿಖೆಗೆ ಈಗಾಗಲೇ ಸಮಿತಿ ರಚನೆಯಾಗಿದೆ. ಇಷ್ಟಾದರೂ ರಾಜ್ಯಪಾಲರು ತನಿಖೆಗೆ ಅನುಮತಿ ನೀಡುವವರು ಖಂಡನೀಯ ಎಂದು ಹೇಳಿದರು.
ಇದನ್ನು ಓದಿದ್ದೀರಾ? ‘ಅಮ್ಮ’ ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ, ಸಂಪೂರ್ಣ ಸಮಿತಿ ವಿಸರ್ಜನೆ
ಗ್ಯಾರಂಟಿ ಯೋಜನೆಗಳ ಮೂಲಕ ಬಡ, ಮಧ್ಯಮ ವರ್ಗಗಳ ಸದೃಢತೆಗೆ ಶ್ರಮಿಸುತ್ತಿರುವ ಎಸ್ ಸಿ ಪಿ, ಟಿಎಸ್ ಪಿ ಕಾನೂನು ಜಾರಿಗೆ ತರುವ ಮೂಲಕ ವಿವಿಧ ಕಾಮಗಾರಿಗಳ ಗುತ್ತಿಗೆಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿ ಜಾರಿಗೆ ತಂದಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ದಲಿತ ವಿರೋಧಿ ಎನ್ನುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ಸಿದ್ದು ರಾಯಣ್ಣವರ, ವೈ ಸಿ ಮಯೂರು, ರಮೇಶ ಧರಣಾಕರ ಉಪಸ್ಥಿತರಿದ್ದರು.
