ಸರ್ಕಾರಿ ಶಾಲೆಯೊಂದರ ಮೇಲ್ಚಾವಣಿ ಕುಸಿದು ನಾಲ್ವರು ಮಕ್ಕಳು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪೆರಾಜೆ ಗ್ರಾಮದ ಕುಂತೂರು ಎಂಬಲ್ಲಿ ನಡೆದಿದೆ.
ಶಾಲೆ ನಡೆಯುತ್ತಿದ್ದ ವೇಳೆಯಲ್ಲಿಯೇ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಈ ವೇಳೆ ಶಾಲೆಯ ಕೊಠಡಿಯೊಳಗಡೆ ಇದ್ದ ನಾಲ್ವರು ಮಕ್ಕಳಿಗೆ ಗಾಯಗಳಾಗಿದೆ. ಅದೃಷ್ಟವಶಾತ್, ಹಲವು ಮಕ್ಕಳು ತರಗತಿ ಇಲ್ಲದ ಕಾರಣ ಹೊರಗೆ ಮೈದಾನದಲ್ಲಿ ಆಟವಾಡುವಾಗ ಈ ಘಟನೆ ನಡೆದಿದೆ. ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯ ವೇಳೆಯಲ್ಲಿ ಮೇಲ್ಛಾವಣಿ ಕುಸಿತವಾಗಿದೆ.

ಘಟನೆಯಲ್ಲಿ ಫಾತಿಮತ್ ಸುಹಾನ, ರಶ್ಮಿ, ದೀಕ್ಷಿತ, ಯಶ್ಮಿತಾ ಗಾಯಗೊಂಡ ವಿದ್ಯಾರ್ಥಿಗಳೆಂದು ಗುರುತಿಸಲಾಗಿದ್ದು, ಘಟನೆ ನಡೆದ ಕೂಡಲೇ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನು ಓದಿದ್ದೀರಾ? ರಾಮನಗರ | ಬೀದಿಬದಿಗಳಲ್ಲಿ ಆಹಾರ ಸುರಕ್ಷತೆಯ ಬಗ್ಗೆ ಗಮನ ಹರಿಸಲು ಜಿಲ್ಲಾಡಳಿತ ಸೂಚನೆ
ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಒಳಗೆ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಿದ ಶಿಕ್ಷಕರ ಬೇಜವಾಬ್ದಾರಿಯ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪುತ್ತೂರು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೂ ಪೋಷಕರು ದೂರು ನೀಡಿದ್ದಾರೆಂದು ತಿಳಿದುಬಂದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಪೋಷಕರು ಪಟ್ಟು ಹಿಡಿದಿರುವುದಾಗಿ ತಿಳಿದುಬಂದಿದೆ.
