ಮನೆ ಬೀಗ ಮುರಿದು ಒಳಹೊಕ್ಕ ಕಳ್ಳರು ಬೀರುವಿನ ಬೀಗ ಮುರಿದು ಅಂದಾಜು 4 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಹಾಗೂ ಕ್ಯಾಶ್ ದೋಚಿದ ಘಟನೆ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಮತ್ತಿಕೆರೆ ಗ್ರಾಮದಲ್ಲಿ ನಡೆದಿದೆ.
ಸೋಮವಾರ ತಡರಾತ್ರಿ ಮತ್ತಿಕೆರೆ ಗ್ರಾಮದ ಮಡಕೆ ಮೂರ್ತಣ್ಣ ಅವರ ಮನೆಯ ಬೀಗ ಮುರಿದು ಮನೆಯೊಳಗೆ ಹೊಕ್ಕು ಬೀರುವಿನ ಬಾಗಿಲು ಬೀಗ ಮುರಿದು 50 ಸಾವಿರ ಕ್ಯಾಶ್ ಹಾಗೂ 100 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಒಡವೆ ದೋಚಿದ್ದಾರೆ.
ಸಿ.ಎಸ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಣಿ ದೇವಾಲಯ ಕಳ್ಳತನ ನಡೆದ ಬೆನ್ನಲ್ಲೇ ಬೀಗ ಹಾಕಿರುವ ಮನೆಗೆ ಕನ್ನ ಹಾಕಿರುವುದು ಹೋಬಳಿಯ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಕರೆಸಿ ತನಿಖೆ ನಡೆಸಿದ್ದಾರೆ. ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.