ಬೀದರ್ ತಾಲೂಕಿನ ಮಿರ್ಜಾಪುರ(ಟಿ) ಗ್ರಾಮದ 72 ವರ್ಷದ ವೃದ್ಧೆ ನಾಗಮ್ಮ ಶಂಕರೆಪ್ಪ ಅವರ ಮನೆಗೆ ಬೀದರ್ ತಹಸೀಲ್ದಾರ್ ದಿಲಶಾದ್ ಮಹಾತ್ ಅವರ ಸೂಚನೆ ಮೇರೆಗೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿದ್ದಾರೆ.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ತಯ್ಯಾಬ್ ಅವರು ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ವೃದ್ಧೆ ನಾಗಮ್ಮ ಅವರ ಮನೆಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದ್ದಾರೆ.
ಈ ಬಗ್ಗೆ ಅಜ್ಜಿಯ ಮಗ ಪ್ರಭು ಮಾತನಾಡಿ, ʼಈದಿನ.ಕಾಮ್ ವರದಿ ಪರಿಣಾಮವಾಗಿ ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಆಗಮಿಸಿ ನಮ್ಮ ತಾಯಿಯ ದಾಖಲೆ ಪರಿಶೀಲಿಸಿದ್ದಾರೆ. ಶೀಘ್ರದಲ್ಲೇ ವೃದ್ಧಾಪ್ಯ ವೇತನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ಅತ್ಯಂತ ಕಳಕಳಿಯಿಂದ ವರದಿ ಪ್ರಕಟಿಸಿದ ʼಈದಿನʼ ಮಾಧ್ಯಮಕ್ಕೆ ಧನ್ಯವಾದʼ ಎಂದು ತಿಳಿಸಿದ್ದಾರೆ.
ʼನಾಗಮ್ಮಾ ಅವರು ಇಲ್ಲಿಯವರೆಗೆ ಪಿಂಚಣಿಗಾಗಿ ಒಮ್ಮೆಯೂ ಅರ್ಜಿ ಹಾಕಿಲ್ಲ. ಅಜ್ಜಿಯ ಹೆಸರಿನಲ್ಲಿ ಯಾವುದೇ ಬ್ಯಾಂಕ್ ಖಾತೆಯಿಲ್ಲ. ಗ್ರಾಮ ಲೆಕ್ಕಾಧಿಕಾರಿ ಅವರು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಸಂಪರ್ಕಿಸಿದರೆ ಪಾನ್ ಕಾರ್ಡ್ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಬ್ಯಾಂಕ್ ಖಾತೆ ಇಲ್ಲದೇ ಅರ್ಜಿ ಸಲ್ಲಿಸಲು ಬರುವುದಿಲ್ಲ. ಬ್ಯಾಂಕ್ ಖಾತೆಗಾಗಿ ಪ್ರಯತ್ನಿಸುತ್ತಿದ್ದೇವೆ. ಖಾತೆಯಾದ ಬಳಿಕ ಪಿಂಚಣಿ ಮಂಜೂರು ಮಾಡಲಾಗುವುದುʼ ಎಂದು ಮನ್ನಳ್ಳಿ ಹೋಬಳಿ ನಾಡ ತಹಸೀಲ್ದಾರ್ ಮಲ್ಲಿಕಾರ್ಜುನ ಈದಿನ.ಕಾಮ್ ಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ವೃದ್ಧಾಪ್ಯ ವೇತನ, ಅನ್ನಭಾಗ್ಯ ಸಿಗದೆ ವೃದ್ಧೆ ಪರದಾಟ
ಅನ್ನಭಾಗ್ಯ, ಗೃಹಲಕ್ಷ್ಮಿ, ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನ ಹಣ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳಿಂದ ವಂಚಿತರಾದ ನಾಗಮ್ಮ ಅವರು ಎದುರಿಸುತ್ತಿರುವ ಸಮಸ್ಯೆ ಕುರಿತು ಈದಿನ.ಕಾಮ್ ನಿನ್ನೆ (ಆ.27) ಮಧ್ಯಾಹ್ನ ‘ಬೀದರ್ | ವೃದ್ಧಾಪ್ಯ ವೇತನ, ಅನ್ನಭಾಗ್ಯ ಸಿಗದೆ ವೃದ್ಧೆ ಪರದಾಟ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಆಡಳಿತ ವರ್ಗ ವೃದ್ಧೆಗೆ ಸ್ಪಂದಿಸಿದೆ.