ಸಮೂಹ ಸಂವಹನ ವಿಭಾಗದಲ್ಲಿ ತುಮಕೂರು ವಿವಿಗೆ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ, ಕಲ್ಪತರು ನಾಡಲ್ಲಿ ಬಾಗಲಕೋಟೆ ರೈತನ ಮಗ ಸಂಗಮೇಶ ಸ್ವರ್ಣ ಪದಕದ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಸಾಧನೆ ಮಾಡಲೇಬೇಕು ಅಂದುಕೊಂಡು ಛಲ, ಸ್ಪಷ್ಟ ಗುರಿ ಹಾಗೂ ಗುರುಗಳ ಮಾರ್ಗದರ್ಶನ ಪಡೆದು ಶ್ರದ್ಧೆಯಿಂದ ಅಧ್ಯಯನದಲ್ಲಿ ನಿರತರಾಗಿ ಓದಿದರೆ ಸಾಧನೆ ಅನ್ನೋದು ಕಬ್ಬಿಣದ ಕಡಲೆ ಅಲ್ಲವೇ ಅಲ್ಲ. ಜತೆಗೆ ಯಾವುದೇ ಹಳ್ಳಿ-ಬಡತನ ಅಡ್ಡಿಯಾಗದು ಎನ್ನುವುದಕ್ಕೆ ಅಪ್ಪಟ ಹಳ್ಳಿಗಾಡಿನ ರೈತ ಕುಟುಂಬದ ವಿದ್ಯಾರ್ಥಿ ಸಂಗಮೇಶ(ಸಂಗಪ್ಪ) ‘ಚಿನ್ನದ ಪದಕ’ ಪಡೆಯುವ ಮೂಲಕ ಸಾಕ್ಷಿಯಾಗಿದ್ದಾರೆ.
ಹೌದು, ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಎಂಬ ಚಿಕ್ಕ ಗ್ರಾಮದ ರೈತ ಹಣಮಂತ ಜೀರಗಾಳ ಅವರ ಪುತ್ರ ಸಂಗಮೇಶ. ತನ್ನೂರಿಂದ 500 ಕಿ.ಮೀ ದೂರದ ಕಲ್ಪತರು ನಾಡಿನತ್ತ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಪಯಣ ಬೆಳೆಸಿ, ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಎರಡು ವರ್ಷದ ಸ್ನಾತಕೋತ್ತರ ಪದವಿ ಓದಿದ ಸಂಗಮೇಶ ಅವರು ಎಂ.ಎಸ್ಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ತುಮಕೂರು ವಿಶ್ವವಿದ್ಯಾಲಯಕ್ಕೆ ‘ಪ್ರಥಮ ರ‍್ಯಾಂಕ್’ ಪಡೆದುಕೊಂಡು ‘ಚಿನ್ನದ ಪದಕʼಕ್ಕೆ ಮುತ್ತಿಟ್ಟಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವ ಸಮಾರಂಭದಲ್ಲಿ ‘ಸಂಗಮೇಶ ಜೀರಗಾಳ’ರವರು ರಾಜ್ಯಪಾಲರಾದ ಡಾ.ಥಾವರ್ ಚಂದ್ ಗೆಹ್ಲೋಟ್ ಅವರಿಂದ ‘ಚಿನ್ನದ ಪದಕ’ ಹಾಗೂ ‘ಪ್ರಥಮ ರ‍್ಯಾಂಕ್’ ಪ್ರಮಾಣ ಪತ್ರವನ್ನು ಪಡೆದು ಬಾಗಲಕೋಟೆ ಜಿಲ್ಲೆಯ ಕೀರ್ತಿ ಇಮ್ಮಡಿಗೊಳಿಸಿದ್ದಾರೆ.
ಗೋಲ್ಡ್ ಮೆಡಲಿಸ್ಟ್ ಸಂಗಮೇಶ ಪ್ರಥಮ ರ‍್ಯಾಂಕ್ ಗಳಿಸಿರುವ ವಿಷಯವನ್ನ ತನ್ನ ತಂದೆಗೆ ಸರ್‌ಪ್ರೈಸ್ ಆಗಿ ವಿವಿ ಘಟಿಕೋತ್ಸವದಲ್ಲಿ ತಿಳಿಸಿ ಸಂಭ್ರಮಿಸಬೇಕು ಅಂದುಕೊಂಡಿದ್ದ, ಆದರೆ ಕಳೆದ ಏಳು ತಿಂಗಳ ಹಿಂದೆ ಅಕಾಲಿಕ ಮರಣದಲ್ಲಿ ತಂದೆಯನ್ನ ಕಳೆದುಕೊಂಡು ತನ್ನ ಸಾಧನೆ ಹೆತ್ತಪ್ಪನಿಗೆ ತಿಳಿಸಲು ಆಗಲಿಲ್ಲ ಎನ್ನುವ ನೋವಿನ ಜತೆಯಲ್ಲೇ ತಂದೆ ಹೇಳಿದಂತೆ ಹೆಮ್ಮೆ ಹಾಗೂ ಹೆಸರು ತರುವಂತಹ ಸಾಧನೆ ಮಾಡಿರುವ ಖುಷಿ ಮನಸಿನಲ್ಲಿಟ್ಟುಕೊಂಡು ರಾಜ್ಯಪಾಲರಿಂದ ‘ಸ್ವರ್ಣ ಪದಕ’ವನ್ನು ಸ್ವೀಕರಿಸಿದರು.
ಸಂಗಮೇಶ ಅವರು ಬಾಗಲಕೋಟೆ ಜಿಲ್ಲೆಯಲ್ಲೇ ಪದವಿವರೆಗೂ ವ್ಯಾಸಂಗ ಮುಗಿಸಿದರು. ಸದ್ಯ ತಂದೆಯ ಅಗಲಿಕೆಯಿಂದ ತಾಯಿ, ಸಹೋದರಿಯರು ಸೇರಿ ಕುಟುಂಬದ ಜವಬ್ದಾರಿಯನ್ನು ಹೊತ್ತು, ಬೆಂಗಳೂರು ನಗರದ ಪ್ರತಿಷ್ಠಿತ ಕನ್ನಡ ದಿನಪತ್ರಿಕೆ ಕಛೇರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ.
“ನನ್ನ ಓದಿನ ವಿಷಯದಲ್ಲಿ ಕುಟುಂಬದವರು ಬಹಳಷ್ಟು ಕಾಳಜಿ, ಸಹಾಯ ಮಾಡುತ್ತಿದ್ದರು. ಸಾಧನೆ ಸಂಭ್ರಮಿಸಲು ನನ್ನೊಂದಿಗೆ ಅಪ್ಪನಿಲ್ಲ. ಕಳೆದ ಜನವರಿಯಲ್ಲಿ ರಸ್ತೆ ಅಪಘಾತದಲ್ಲಿ ಅಪ್ಪನನ್ನು ಕಳೆದುಕೊಂಡೆ. ನಾನು ‘ಪ್ರಥಮ ರ‍್ಯಾಂಕ್’ ಬಂದ ಸುದ್ದಿ ಘಟಿಕೋತ್ಸವ ವೇಳೆ ಹೇಳಿ ಸರ್‌ಪ್ರೈಸ್ ಆಗಿ ಖುಷಿ ಪಡಿಸಬೇಕು ಅಂದುಕೊಂಡಿದ್ದೆ. ಆದರೆ ಆಸೆ ನನಸಾಗಲೇ ಇಲ್ಲ. ಗುರುಗಳ ಮಾರ್ಗದರ್ಶನ ಹಾಗೂ ಸ್ನೇಹಿತರ ಸಹಕಾರದಿಂದ ‘ಗೋಲ್ಡ್ ಮೆಡಲ್’ ಸಾಧಿಸಿದೆ.” ಎನ್ನುತ್ತಾರೆ ಸಂಗಮೇಶ ಜೀರಗಾಳ.

“ಸ್ಪಷ್ಟ ಮತ್ತು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಸಂಗಮೇಶ ಅಧ್ಯಯನ ಮಾಡಿದ್ದಾರೆ. ಹಾಗಾಗಿ ರ‍್ಯಾಂಕ್ ಗಳಿಸಲು ಸಾಧ್ಯವಾಗಿದೆ. ಇದು ಅವರ ನಿರಂತರ ಪರಿಶ್ರಮದ ಯಶಸ್ಸು. ರಾತ್ರಿ 9ರ ತನಕ ನಮ್ಮಲ್ಲಿರುವ ರೇಡಿಯೋ & ಟಿವಿ ಸ್ಟುಡಿಯೋಗಳಲ್ಲಿ ಕೆಲಸ ಮಾಡುತ್ತಿದ್ದರು. ಸಂಗಮೇಶ ಅವರು ಇನ್ನಷ್ಟು ಉನ್ನತ ಸಾಧನೆಯ ದಾರಿಯಲ್ಲಿ ಸಾಗಲಿ” ಎನ್ನುತ್ತಾರೆ ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಬಿ.ಟಿ.ಮುದ್ದೇಶ್.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೇಕೆದಾಟು ಮಧ್ಯಸ್ಥಿಕೆ ವಹಿಸದ ಕೇಂದ್ರ, ದಕ್ಷಿಣದ ರಾಜ್ಯಗಳಿಗಿದು ಸಕಾಲ
ಒಟ್ಟಾರೆಯಾಗಿ, ಬಡತನ, ಕಷ್ಟ-ಸುಖ, ನೋವು-ನಲಿವುಗಳ ನಡುವೆಯೂ ನಿರ್ಧಿಷ್ಟ ಗುರಿಯೊಂದಿಗೆ ವಿದ್ಯಾಭ್ಯಾಸ ಮಾಡಿದರೆ ಸುಲಭವಾಗಿ ಸಾಧನೆಯ ಶಿಖರವನ್ನೇರಬಹುದು ಎಂಬುದಕ್ಕೆ ಸಂಗಮೇಶ ಜೀರಗಾಳ ಮಾದರಿಯಾಗಿದ್ದು, ಯುವ ಪೀಳಿಗೆ ಇದೇ ಹಾದಿಯಲ್ಲಿ ಸಾಗಬೇಕಿದೆ.