ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರ 119ನೇ ಹುಟ್ಟುಹಬ್ಬ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಆ.29 ಮತ್ತು 30 ರಂದು ಹಾಕಿ ರಾಯಚೂರು(ಕರ್ನಾಟಕ) ಸಂಸ್ಥೆಯಿಂದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಯಪ್ರಕಾಶ್ ರೆಡ್ಡಿ ಹೇಳಿದರು.
ರಾಯಚೂರಿನ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಪುರುಷರು ಮತ್ತು ಮಹಿಳೆಯರ 24 ತಂಡಗಳು ಪಂದ್ಯಾವಳಿಯಲ್ಲಿ ಭಾಗಿಯಾಗಲಿವೆ ಎಂದರು.
12 ಪುರುಷ ಹಾಗೂ 8 ಮಹಿಳಾ ತಂಡಗಳು ಭಾಗವಹಿಸಲಿವೆ. ಹಾಕಿ ಪಂದ್ಯಕ್ಕೆ ಸಮರ್ಪಕ ಪ್ರೋತ್ಸಾಹ ದೊರೆಯುತ್ತಿಲ್ಲ. ಹಾಕಿ ಕ್ರೀಡಾಪಟುಗಳಿಗೆ ವಸತಿ ನಿಲಯವಿದ್ದು, ಕ್ರೀಡಾಂಗಣವೇ ಇಲ್ಲ. ಮಕ್ಕಳು ಹಾಕಿ ಆಟಗಳಲ್ಲಿ ಭಾಗವಹಿಸುತ್ತಿಲ್ಲ. ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹಿಸುವಂತಹ ಕೆಲಸ ಆಗಬೇಕೆಂದು ತಿಳಿಸಿದರು.
ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡು ದಿನಗಳ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಪ್ರತಿ ಪಂದ್ಯದಲ್ಲಿ 5 ಜನ ಕ್ರೀಡಾಪಟುಗಳು ಭಾಗಿ 20 ನಿಮಿಷ ಅವಧಿಯಲ್ಲಿ ಪ್ರದರ್ಶನ ನೀಡಲಿದ್ದಾರೆ.
ವಿಜೇತ ತಂಡಗಳಿಗೆ ಎನ್.ಈಶ್ವರ ಪ್ರಸಾದ ಸ್ಮರಣಾರ್ಥ ಪ್ರಥಮ ತಂಡಕ್ಕೆ 10 ಸಾವಿರ ರೂ, ದ್ವಿತೀಯ ಸ್ಥಾನಕ್ಕೆ 5 ಸಾವಿರ ರೂ ನಗದ ಬಹುಮಾನ ಹಾಗೂ ಮಲ್ಲಿಕಾರ್ಜುನ ಸ್ಮರಣಾರ್ಥವೂ ಹೆಸರಲ್ಲಿ ಬಹುಮಾನಗಳನ್ನು ವಿತರಿಸಲಾಗುತ್ತದೆ. ಕ್ರೀಡಾಕೂಟವನ್ನು ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕಾರ್ಕಳ ಯುವತಿಯ ಅತ್ಯಾಚಾರ | 3ನೇ ಆರೋಪಿ ಬಿಜೆಪಿ ಕಾರ್ಯಕರ್ತ : ಕಾಂಗ್ರೆಸ್‌ನಿಂದ ಫೋಟೋ ಬಿಡುಗಡೆ
ಮುಖ್ಯ ಅತಿಥಿಗಳಾಗಿ ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ರವಿ ಪಾಟೀಲ್ ಫೌಂಡೇಷನ್ ಅಧ್ಯಕ್ಷ ರವಿ ಪಾಟೀಲ್ , ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್, ಸಂಸದ ಜಿ.ಕುಮಾರನಾಯಕ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಕಾರ್ಯದರ್ಶಿ ಹನುಮಂತಪ್ಪ ನಾಯಕ, ಎನ್.ಶಶಿಕಲಾ, ಈಶ್ವರ್ ಪ್ರಸಾದ, ರಂಗನಾಥ ನಾಯಕ, ಅರ್ಜುನ ನಾಯಕ, ಮಹಮ್ಮದ್ ಇಸ್ಮಾಯಿಲ್, ಮೃತ್ಯುಂಜಯ, ಭಗತ್‌ಸಿಂಗ್ ಉಪಸ್ಥಿತರಿದ್ದರು.