ಪತ್ರಕರ್ತರನ್ನು ಅಕ್ರಮವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಕ್ರಮ ಸರಿಯಲ್ಲ. ಇದು ಸುದ್ದಿಗಾರರ ಮೇಲೆ ಪೊಲೀಸ್ ಇಲಾಖೆ ನಡೆಸುತ್ತಿರುವ ಮಾನಸಿಕ ದಬ್ಬಾಳಿಕೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಗ್ರವಾಗಿ ಖಂಡಿಸಿದರು.
ನಗರದ ಎಸ್ಪಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದ ನೂರಾರು ಪತ್ರಕರ್ತರು, ಮೇಲಧಿಕಾರಿಗಳು ಕರೆಯುತ್ತಿದ್ದಾರೆಂದು ಸುಳ್ಳು ಹೇಳಿ ಸುದ್ದಿಗಾರರಿಬ್ಬರನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಇಂತಹ ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತೀಕೆರೆ ಜಯರಾಂ ಮಾತನಾಡಿ, ಇಬ್ಬರು ಸುದ್ದಿಗಾರರು ಕೊಲೆ ಆರೋಪಿಗಳಲ್ಲ. ನ್ಯಾಯಾಲಯ ಸೆಪ್ಟೆಂಬರ್ ತಿಂಗಳಿಗೆ ಒಬ್ಬರಿಗೆ ಸಮನ್ಸ್ ಹೊರಡಿಸಿದೆ. ಇನ್ನೊಬ್ಬರಿಗೆ ಸಮನ್ಸ್ ಜಾರಿ ಮಾಡಿಲ್ಲ. ಯಾರೊಬ್ಬರಿಗೂ ವಾರೆಂಟ್ ಜಾರಿಯಾಗಿಲ್ಲ. ಹೀಗಿದ್ದರು ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಡೆ ಎಷ್ಟು ಸರಿ. ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳಲ್ಲಿ ಈ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದೀರಿ ದಾಖಲೆ ಒದಗಿಸಿ. ತಪ್ಪಿತಸ್ಥ ಪೊಲೀಸರ ಎದುರು ಕ್ರಮವಾಗುವವರೆಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿರೋಧ ತೋರುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಮತ್ತೊಬ್ಬ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಮಾತನಾಡಿ, ಸುದ್ದಿಗಾರರ ಜೊತೆಗೆ ಪೊಲೀಸರು ಸೌಜನ್ಯದಿಂದ ನಡೆದುಕೊಳ್ಳಬೇಕು. ಸಮಾಜದಲ್ಲಿ ಗೌರವವಾಗಿ ಕೆಲಸ ಮಾಡಿಕೊಂಡು ಬರುತ್ತಿರುವ ಸುದ್ದಿಗಾರರನ್ನು ಕ್ರಿಮಿನಲ್‌ಗಳಂತೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಡೆ ಎಷ್ಟು ಸರಿ?. ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸುದ್ದಿಗಾರರು ಜಿಲ್ಲೆಯಲ್ಲಿ ಮುಕ್ತವಾಗಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಘದ ನಿರ್ದೇಶಕ ಎಂ.ಎಸ್.ಶಿವಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ಅಮಾಯಕ ಸಾರ್ವಜನಿಕರ ಮೇಲೆ ಪೊಲೀಸರ ದಬ್ಬಾಳಿಕೆ ಹೆಚ್ಚಾಗಿದೆ. ಇದೀಗ ಅದು ಸುದ್ದಿಗಾರರ ಮೇಲೂ ಮುಂದುವರಿಯುತ್ತಿದೆ. ಪತ್ರಕರ್ತರ ಮೇಲೆಯೇ ದಬ್ಬಾಳಿಕೆ ನಡೆಯುತ್ತಿದೆ ಎಂದರೆ ಸಾರ್ವಜನಿಕರ ಪಾಡು ಏನು?. ಇಬ್ಬರು ಸುದ್ದಿಗಾರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಇಬ್ಬರು ಪೇದೆಗಳು ಹಾಗೂ ಇನ್ಸ್ಪೆಕ್ಟರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕಿಡಿಕಾರಿದರು.
ಮನವಿ ಸ್ವೀಕರಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಪತ್ರಕರ್ತರ ಮೇಲೆ ಅಪಾರ ಗೌರವವಿದೆ. ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಲೋಪದಿಂದ ಇಷ್ಟೆಲ್ಲಾ ಬೆಳವಣಿಗೆ ನಡೆದಿದೆ. ಇಬ್ಬರು ಪತ್ರಕರ್ತರ ವಿಚಾರದಲ್ಲಿ ನಮ್ಮ ಸಿಬ್ಬಂದಿಗಳು ಹಾಗೆ ನಡೆದುಕೊಳ್ಳಬಾರದಿತ್ತು. ಇದು ಖಂಡನೀಯ. ಮುಂದೆ ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ಅಗತ್ಯ ಕ್ರಮವಹಿಸಲಾಗುವುದು. ಅವರ ಬಗೆಗೆ ಘಾಸಿಯಾಗಿದ್ದರೆ ಇಲಾಖೆ ವತಿಯಿಂದ ಕ್ಷಮೆಯಾಚಿಸುತ್ತೇನೆ ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಪತ್ರಕರ್ತರನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ: ಪತ್ರಕರ್ತ ಸಿ ಕೆ ಮಹೇಂದ್ರ
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಉಪಾಧ್ಯಕ್ಷ ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್, ಮಾಜಿ ಅಧ್ಯಕ್ಷರಾದ ಎಸ್.ಕೃಷ್ಣ ಸ್ವರ್ಣಸಂದ್ರ, ಕೆ.ಎನ್.ರವಿ, ನವೀನ್ ಚಿಕ್ಕಮಂಡ್ಯ, ಕಾರ್ಯದರ್ಶಿ ಲೋಕೇಶ್ ಚಿನಕುರಳಿ, ರಾಷ್ಟೀಯ ಮಂಡಳಿ ಸದಸ್ಯ ಜೆ.ಎಂ.ಬಾಲಕೃಷ್ಣ, ಹಿರಿಯ ಪತ್ರಕರ್ತ ಬಸವರಾಜ ಹೆಗ್ಗಡೆ, ನಿರ್ದೇಶಕರಾದ ಶ್ರೀನಿವಾಸ್, ಆನಂದ್, ನಂದನ್, ಚನ್ನಮಾದೇಗೌಡ, ರಾಘವೇಂದ್ರ, ನಾಗೇಶ್, ಪ್ರಶಾಂತ್, ಅಶೋಕ್, ಮದ್ದೂರು ಪುಟ್ಟಸ್ವಾಮಿ, ಶ್ರೀರಂಗಪಟ್ಟಣ ಗಂಜಾಂ ಮಂಜು, ಅಣ್ಣೂರು ಸತೀಶ್, ಮಳವಳ್ಳಿಯ ಲಿಂಗರಾಜು, ಬೆಳಕವಾಡಿ ಉಮೇಶ್ ಸೇರಿದಂತೆ ನೂರಾರು ಪತ್ರಕರ್ತರು ಭಾಗವಹಿಸಿದ್ದರು.