- ಕಲ್ಲಿನೇಟಿನಿಂದ ಗಾಯಗೊಂಡಿದ್ದ ಜಿ ಪರಮೇಶ್ವರ್
- ಪತ್ರಿಕಾಗೋಷ್ಠಿಯಲ್ಲಿ ನಡೆದ ಘಟನೆ ಬಗ್ಗೆ ಮಾಹಿತಿ
ನಾನು ಹೆದರಿ ಓಡಿಹೋಗಲ್ಲ; ನಮ್ಮ ಕಾರ್ಯಕರ್ತರೂ ಶಾಂತಿ ಭಂಗ ಮಾಡಲ್ಲ ಇದು ಶುಕ್ರವಾರ ಚುನಾವಣಾ ಪ್ರಚಾರದ ವೇಳೆ ಕಲ್ಲೇಟಿನಿಂದ ಗಾಯಗೊಂಡಿದ್ದ ಜಿ ಪರಮೇಶ್ವರ್ ಹೇಳಿರುವ ಮಾತು.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೆ. ಅಭಿಮಾನಿಗಳು ಹಾರಹಾಕಲು ನನ್ನನ್ನು ಮೇಲೆತ್ತಲು ಬಂದರು. ಆ ವೇಳೆ ನಾನು ಮೇಲಕ್ಕೆ ಎತ್ತಬೇಡಿ ಎಂದೆ. ಆದರೂ ಕಾರ್ಯಕರ್ತರು ಎತ್ತುಕೊಂಡರು. ಜೆಸಿಬಿ ಮೂಲಕ ಹೂ ಹಾಕಲು ಮುಂದಾದರು.
ಈ ವೇಳೆ ತಕ್ಷಣ ತಲೆಗೆ ಏನೋ ಬಡಿದ ಹಾಗೆ ಆಯಿತು. ಕೆಂಪು ಹೂವು ಆಗಿದ್ದರಿಂದ ಯಾರಿಗೂ ಏನು ಅಂತಾ ಗೊತ್ತಾಗಲಿಲ್ಲ ತಲೆಗೆ ಕಲ್ಲು ಬೀಳುತ್ತಿದ್ದಂತೆ ಜೋರಾಗಿ ಕೂಗಿದೆ. ನಂತರ ಕೆಳಗೆ ಇಳಿಸಿದರು. ಆನಂತರ ಆಸ್ಪತ್ರೆಗೆ ತೆರಳಿದೆ. ಅಕ್ಕಿರಾಂಪುರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಬಂದೆ. ಹೂವಿನಲ್ಲಿ ಕಲ್ಲು ಬಂದಿರುವುದಿಲ್ಲ, ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿರಬೇಕು ಎಂದು ಮಾಜಿ ಡಿಸಿಎಂ ಹೇಳಿದರು.
ಮುಂದೆ ವೈದ್ಯರ ಬಳಿ ಚರ್ಚಿಸಿ ಪ್ರಚಾರಕ್ಕೆ ಹೋಗುತ್ತೇನೆ. ನನಗೆ ಯಾವುದೇ ತೊಂದರೆಯಾದ್ರೂ ತಲೆಕೆಡಿಸಿಕೊಳ್ಳಲ್ಲ. ಹೆದರಿಕೊಂಡು ಓಡಿಹೋಗಲ್ಲ. ಎಲ್ಲವನ್ನೂ ಎದುರಿಸುತ್ತೇನೆ ಎಂದರು.
ನನ್ನ ಆರೋಗ್ಯದ ಬಗ್ಗೆ ಡಿ ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ಧರಾಮಯ್ಯ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇತ್ತ ಶಾಂತಿಯಿಂದ ಚುನಾವಣೆ ಎದುರಿಸುವಂತೆ ನಾನು ನನ್ನ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಎಂದು ಪರಮೇಶ್ವರ್ ಹೇಳಿದರು.
ಘಟನೆ ಬಗ್ಗೆ ತನಿಖೆ ಮಾಡಲು ತುಮಕೂರು ಎಸ್ಪಿಗೆ ಸೂಚಿಸಿದ್ದೇನೆ. 1999ರಲ್ಲಿ ನನಗೆ ಚಾಕುವಿನಿಂದ ಚುಚ್ಚಲು ಪ್ರಯತ್ನಿಸಿದ್ದರು. ಪದೇ ಪದೇ ಇಂತಹ ಘಟನೆಗಳು ಯಾಕೆ ನನ್ನ ವಿರುದ್ಧ ಆಗುತ್ತಿವೆಯೋ ಗೊತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?:ಬಂಗಾರಪೇಟೆ | ಸಂಸದ ಮುನಿಸ್ವಾಮಿ ನಾಲಿಗೆಗೂ ಬ್ರೈನ್‌ಗೂ ಕನೆಕ್ಷನ್ನೇ…
ಬಳಿಕ ತಮ್ಮ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಮಾಜಿ ಡಿಸಿಎಂ, ಕುಮಾರಸ್ವಾಮಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು ಅದಕ್ಕೆ ಹಾಗೆ ಹೇಳಿದ್ದಾರೆ.
ನನಗೆ ಡ್ರಾಮಾ ಮಾಡುವ ಅಗತ್ಯವಿಲ್ಲ, ಏಟು ತಿಂದಿರೋನು ನಾನು, ಒಂದೂವರೆ ಇಂಚು ಗಾಯವಾಗಿದೆ, ಸರ್ಜಿಕಲ್ ಬ್ಲ್ಯೂ ಹಾಕಲಾಗಿದೆ. ಡಾಕ್ಟರ್ ಅನುಮತಿ ಕೊಟ್ಟರೆ ನಾಳೆಯಿಂದಲೇ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಜನರ ಮುಂದೆ ಹೋಗುತ್ತೇನೆ, ಜನರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ಪರಮೇಶ್ವರ್ ಮೇಲೆ ಕಲ್ಲೆಸೆತ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದೊಂದು ನಾಟಕ ಎಂದಿದ್ದರು.