ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ ಎಂದು ದಲಿತ ಸೇನೆ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ ಆರೋಪ ಮಾಡಿದರು.
ಗ್ರಾಮದ ಹಿಂದುಳಿದ ವರ್ಗ(ಬಿಸಿಎಂ)ಗಳ ಬಾಲಕರ ವಸತಿ ನಿಲಯದಲ್ಲಿ ಸುಮಾರು ಐವತ್ತು(50) ವಿದ್ಯಾರ್ಥಿಗಳಿದ್ದು, ಮೂಲ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದಾರೆ. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮಲಗುವುದಕ್ಕೆ ಮಂಚ, ಬೆಡ್ ವ್ಯವಸ್ಥೆ ಕಲ್ಪಪಿಸಿಕೂಟ್ಟಿಲ್ಲ. ಅಲ್ಲದೆ ವಸತಿ ನಿಲಯದ ಕಿಟಕಿ ಬಾಗಿಲುಗಳು ಮುರಿದು ಬಿದ್ದಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಲಿತ ಸೇನೆ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ ಅವರು ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಕಾಂಪೌಂಡ್ ಗೋಡೆ ಇಲ್ಲದಿರುವುದರಿಂದ ಸಾರ್ವಜನಿಕರು ಗುಟಕಾ, ವಿಮಲ್ ತಿಂದು ಉಗುಳಿರುವುದರಿಂದ ನಿಲಯದ ಗೋಡೆಗಳು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿವೆ. ಸರಿಯಾದ ಊಟದ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ” ಎಂದು ತಿಳಿಸಿದರು.

“ವಿದ್ಯಾರ್ಥಿಗಳ ಸಮಸ್ಯೆ ಒಂದು ಕಡೆಯಾದರೆ, ಮೇಲ್ವಿಚಾರಕರು ಆರು(6) ತಿಂಗಳಿಗಳಿಗೊಮ್ಮೆ ವರ್ಗಾವಣೆಯಾಗುತ್ತಾರೆ. ಮೇಲ್ವಿಚಾರಕರು ಯಾರು ಎಂಬುದೇ ತಿಳಿಯುವುದಿಲ್ಲ. ಅಲ್ಲದೆ ಹಾಸ್ಟೆಲ್ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ. ಒಬ್ಬರು ವಾರ್ಡನ್, ಇಬ್ಬರು ಕೂಲಿ ಆಳುಗಳ ಮುಖಾಂತರ ಕೆಲಸ ಮಾಡಿಸಲಾಗುತ್ತಿದೆ. ಅವರೂ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅಭಿವ್ಯಕ್ತಿಗೆ ಪೂರಕವಾದ ವಾತಾವರಣ ನಿರ್ಮಿಸುವುದೇ ಸ್ವಾತಂತ್ರ್ಯ: ಕೆ ವಿ ನಾಗರಾಜಮೂರ್ತಿ
“ಆಂದೋಲಾ ಜಿಲ್ಲಾ ಪಂಚಾಯತ್ ಕ್ಷೇತ್ರವಾಗಿದೆ. ಬಿಸಿಎಂ ವಸತಿ ನಿಲಯ ಈ ವ್ಯಾಪ್ತಿಗೆ ಸೇರಿದರೂ ಅಧಿಕಾರಿಗಳು ನಿಷ್ಕಾಳಜಿ ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ, ತಾಲೂಕು ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ದಲಿತ ಸೇನೆ ಸಂಘಟನೆಯಿಂದ ಹಿಂದುಳಿದ ವರ್ಗಗಳ ಕಚೇರಿ ಎದುರು ತೀವ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.