ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಗೋಳೂರು ಹಾಡಿಯಲ್ಲಿ ನಡೆದಿದ್ದು, ಇದನ್ನು ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ(ಎಐಜೆಎಎಸ್‌ಸಿ)ಯ ಸುನಿಲ್ ಟಿ ಆರ್ ಖಂಡಿಸಿದ್ದಾರೆ.
ಪತ್ರಿಕೆ ಪ್ರಕಟಣೆಗೆ ತಿಳಿಸಿರುವ ಅವರು “ಗೋಳೂರು ನಿವಾಸಿ ಬೊಳ್ಳು ಎಂಬುವವರು ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ. ಆನೆ ದಾಳಿಗೆ ತುತ್ತಾಗುತ್ತಿದ್ದಂತೆ ಇವರನ್ನು ಹೆಚ್ ಡಿ ಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ” ಎಂದಿದ್ದಾರೆ.
“ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿ ಹಾಗೂ ಮಾನವ ಸಂಘರ್ಷ ಹೆಚ್ಚಿದ್ದು, ಇಂತಹ ಘಟನೆ ಮತ್ತೆ ಮತ್ತೆ ಮರಕಳಿಸುತ್ತಿದೆ. ಡಿ ಬಿ ಕುಪ್ಪೆ ಹಾಡಿ ವ್ಯಾಪ್ತಿಯಲ್ಲಿ ಆನೆಗಳ ಕಾಟ ಹೆಚ್ಚಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಗ್ರಾಮದ ಜನರು ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮುಧೋಳ | ಪ್ರವಾದಿ ಮುಹಮ್ಮದರ ಬಗ್ಗೆ ರಾಮಗಿರಿ ಮಹಾರಾಜರಿಂದ ಅವಹೇಳನಕಾರಿ ಹೇಳಿಕೆ: ಆಕ್ರೋಶ
“ಇತ್ತೀಚಿಗೆ ಅರಣ್ಯ ಇಲಾಖೆ, ತಾಲೂಕು ಕಚೇರಿ ಹಾಗೂ ಗ್ರಾಮ ಪಂಚಾಯತಿ ಮೂಲಕ ಸರ್ಕಾರಕ್ಕೆ ಹಲವು ಬಾರಿ ಗಮನಕ್ಕೆ ತಂದರೂ ಕೂಡ ಸಮಸ್ಯೆ ಬಗೆಹರಿದಿಲ್ಲ. ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ತಡೆಗಟ್ಟಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆದಿವಾಸಿ ಹಾಡಿಗಳ ಮೇಲೆ ನಡೆಯುತ್ತಿರುವ ಕಾಡು ಪ್ರಾಣಿಗಳ ದಾಳಿಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಉದ್ಯೋಗ ಹಾಗೂ ಸೂಕ್ತ ಪರಿಹಾರ ಒದಗಿಸಬೇಕು” ಎಂದು ಮನವಿ ಮಾಡಿದ್ದಾರೆ.