ʼಕಾಂಗ್ರೆಸ್‌ಗೆ ಬೇಕಾಗಿರುವುದು ದಲಿತರ ಅಧಿಕಾರ ಅಲ್ಲ, ಏಳಿಗೆಯಲ್ಲ ಬದಲಿಗೆ ನಮ್ಮ ವೋಟು ಮಾತ್ರ. ನಮಗಿರುವ ಆದ್ಯತೆ ಏನು ಎಂಬುದನ್ನು ನಾವು ಯೋಚನೆ ಮಾಡಬೇಕು. ನಮ್ಮ ತಟ್ಟೆಗೆ ಕೈ ಹಾಕಿದ್ದಾರೆ. ನಮ್ಮ ನೆಲ ಭೂಮಿಗಳು ವಿಧಾನಸೌಧದ ನೆಲಗಳ್ಳರ ಬಳಿ ಸೇರಿಕೊಂಡಿದೆ. ಈಗ ನಮ್ಮಲಿರುವ ಶಕ್ತಿ ಒಂದೇ ಅದು ಮತ. ಅದನ್ನು ಉಪಯೋಗಿಸಿ ಬದಲಾವಣೆ ತರಬೇಕಾಗಿದೆʼ ಎಂದು ಹಿರಿಯ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಇಂದು ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ʻಕಾಂಗ್ರೆಸ್ ಹಟಾವೋ ದಲಿತ್ ಬಚಾವೋʼ ಸಮಾವೇಶದಲ್ಲಿ ಅವರು ಮಾತನಾಡಿದರು.
ʻಕಾಂಗ್ರೆಸ್ ಒಂದು ಉರಿಯುವ ಮನೆʼ ಪ್ರವೇಶಿಸಬೇಡಿ ಎಂದು ಬಾಬಾ ಸಾಹೇಬರು ಹೇಳಿದ್ದರು. ಆದರೆ, ಅದು ಉರಿಯುತ್ತಿದೆಯೇ ಗೊತ್ತಿಲ್ಲ. ಆದರೆ ಇಂದು ನಮ್ಮ ದಲಿತರ ಮನೆಗಳು ಉರಿಯುತ್ತಿವೆ. ಅದು ಬೂದಿಯಾಗುವುದಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕು. ಅದು ಹೇಗೆ ಏನು ಎಂಬುದರ ಬಗ್ಗೆ ನಾವು ಆಲೋಚನೆ ಮಾಡಬೇಕಾಗುತ್ತದೆ. ಮತದ ಶಕ್ತಿಯನ್ನು ಬಾಬಾ ಸಾಹೇಬರು ಅರ್ಥ ಮಾಡಿಕೊಂಡಂತೆ ನಾವು ಅರ್ಥ ಮಾಡಿಕೊಳ್ಳಬೇಕಿದೆ. ಹಾಗಾಗಿ ಈ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ. ಅದಕ್ಕಾಗಿ ಪ್ರತ್ಯೇಕ ಪಕ್ಷ ಸ್ಥಾಪನೆ ಮಾಡುವ ಅಗತ್ಯವಿದೆ. ನಾವು ರಾಜಕೀಯ ಶಕ್ತಿಯಾಗಬೇಕಿದೆ. ಒಂದು ಪ್ರಾದೇಶಿಕ ಪಕ್ಷ ಕಟ್ಟಲೇಬೇಕಿದೆ ಎಂದು ಹೇಳಿದರು.
“ನಾವು ಒಂದೊಂದು ದೀಪದ ರೀತಿ ಇದ್ದೇನೆ. ನಮ್ಮ ಮನೆಗಳನ್ನು ಬೆಳಗುತ್ತಿದ್ದೇವೆ. ಆದರೆ, ಲೋಕಕ್ಕೆ ಬೆಳಕು ತರುವ ಶಕ್ತಿ ನಮಗಿದೆ. ಹಿಂದೆ ದುರಹಂಕಾರ ತೋರಿದ ಗುಂಡೂರಾವ್ ಅವರ ಸರ್ಕಾರವನ್ನು ನಾವು ಕೆಡವಿದ್ದೇವೆ. ಈಗಲೂ ಅದನ್ನು ಮಾಡುತ್ತೇವೆ. ಭೂಮಿ ನೆಲಗಳ್ಳರ ಪಾಲಾಗಿದೆ. ನಾವು ಭೂಮಿ ನಮಗೆ ಬೇಕು ಕೊಡಿ ಎಂಬ ಬೇಡಿಕೆ ಇಡುವುದಿಲ್ಲ. ಈಗ ಆಕಾಶದ ತರಂಗಗಳ ದರೋಡೆ ನಡೆಯುತ್ತಿದೆ. ನೀವು ಮಲ್ಟಿ ನ್ಯಾಷನಲ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೀರಿ. ಅಲ್ಲಿ ನಮ್ಮ ಪಾಲನ್ನು ನಮಗೆ ಕೊಡಿ ಎಂದು ಕೇಳುತ್ತೇವೆ ಎಂದು ಎಚ್ಚರಿಸಿದರು.
ಹಿರಿಯ ನ್ಯಾಯವಾದಿ ಬಾಲನ್ ಅವರು ಮಾತನಾಡಿ, ಕರ್ನಾಟಕದಲ್ಲಿ ಎಸ್ಸಿ 20%, ಎಸ್‌ಟಿ 7%. ಒಟ್ಟು 27% ಇದ್ದೇವೆ. ಹಳ್ಳಿಯಲ್ಲಿ ಕೇರಿಯಲ್ಲಿದ್ದೇವೆ, ಸಿಟಿಯಲ್ಲಿ ಕೊಳಗೇರಿನಲ್ಲಿದ್ದೇವೆ. ಅಗ್ರಹಾರ ಬೇರೆ, ಊರು ಬೇರೆ, ಗಿರಿಜನರ ಕಾಲನಿ ಬೇರೆ, ದಲಿತರ ಕಾಲನಿ ಬೇರೆ, ಕುರುಬರ ಕಾಲನಿ ಬೇರೆ. ಬೆಂಗಳೂರಿನಲ್ಲಿ ಏರ್ಪೋರ್ಟ್ ಇದೆ. ಅಲ್ಲಿ ನಾವು ಪೈಲೆಟ್ ಆಗಿಲ್ಲ. ಅಲ್ಲಿ ನಾವು ಕಸ ಎತ್ತುವ ಕೆಲಸ ಮಾಡುತ್ತಿದ್ದೇವೆ. ಹತ್ತು ಹನ್ನೆರಡು ಸಾವಿರ ಸಂಬಳ ಕೊಡುತ್ತಿದ್ದಾರೆ. ಅದರಲ್ಲಿ ಬದುಕೋದು ಸಾಧ್ಯವೇ ಎಂದು ಸಿದ್ದರಾಮಯ್ಯ ಅವರನ್ನು ಕೇಳಬೇಕು ಎಂದರು.
ಮಣಿಪಾಲ, ಮಲ್ಯ, ಪೋರ್ಟಿಸ್ ಮುಂತಾದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ವೈದ್ಯರಾಗಿ ನಾವು ಕೆಲಸ ಮಾಡುತ್ತಿಲ್ಲ. ಕಸ, ಮಲ ಬಾಚುವ ಕೆಲಸ ಮಾಡುತ್ತಿದ್ದೇವೆ. ದಿನಕ್ಕೆ ಕನಿಷ್ಠ ಒಂದು ಸಾವಿರ ರೂಪಾಯಿ ಖರ್ಚಿದೆ. 30 ಸಾವಿರ ಕನಿಷ್ಠ ವೇತನ ಕೊಡಿ, ನಿಮ್ಮ ಗಂಟು ಹೋಗಲ್ಲ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಎಂದು ಪ್ರಶ್ನೆ ಮಾಡಿದರು.
ಫೈವ್ ಸ್ಟಾರ್ ಹೋಟೆಲು ಮೆಟ್ರೋ, ಯುನಿವರ್ಸಿಟಿ ಎಲ್ಲ ಕಡೆಯೂ ಹತ್ತು ಸಾವಿರಕ್ಕೆ ದುಡಿತಿದ್ದಾರೆ. ಬಿಬಿಎಂಪಿಯಲ್ಲಿ ಇಪ್ಪತ್ತು ವರ್ಷದಿಂದ ಪರ್ಮನೆಂಟ್ ಮಾಡದೇ ಹದಿನೈದು ಸಾವಿರಕ್ಕೆ ಕಸ ಎತ್ತುತ್ತಿದ್ದಾರೆ. ಕೆಲಸದ ಭದ್ರತೆ, ಕಾನೂನಿನ ಭದ್ರತೆ ಇಲ್ಲ. ಅವರನ್ನೆಲ್ಲ ಖಾಯಂ ಮಾಡಿ. ಕಾಂಗ್ರೆಸ್ ಸರ್ಕಾರ ಬಂದು ಒಂದೂವರೆ ವರ್ಷದಿಂದ ಈ ವಿಷಯದಲ್ಲಿ ಒಂದೇ ಒಂದು ಕಾನೂನು ಮಾಡಿಲ್ಲ. ಇದು ದಲಿತರ ವಿರೋಧಿ ಸರ್ಕಾರ ಎಂದು ಹೇಳಿದರು.
ನಟ ಚೇತನ್ ಮಾತನಾಡಿ, ನಿಜವಾದ ಅಹಿಂದ ನಾಯಕರು ಕೃಷ್ಣ, ಕಾವೇರಿಯಲ್ಲಿ ಕೂತು ಮಾತನಾಡುವವರಲ್ಲ, ಈ ವೇದಿಕೆಯಲ್ಲಿರುವವರು. ನಿನ್ನೆ ಇಲ್ಲೇ ಪ್ರತಿಭಟನೆ ಮಾಡಿದವರು ಚಮಚಾಗಳು. ಅಸಮಾನತೆಯ ವ್ಯವಸ್ಥೆಗೆ ಸಿದ್ದರಾಮಯ್ಯ ಸರ್ಕಾರ ತುಪ್ಪ ಸುರಿಯುತ್ತಿದೆ. ಸಿದ್ದರಾಮಯ್ಯ ಅವರದ್ದು ಆಧುನಿಕ ಮನುವಾದ ಎಂದು ಟೀಕಿಸಿದರು.
ಒಕ್ಕೂಟದ ಸಂಚಾಲಕ ಭಾಸ್ಕರ ಪ್ರಸಾದ್, ಆಪ್ ಮುಖಂಡ ಮೋಹನ ದಾಸರಿ, ದಲಿತ ಮುಖಂಡ ಮೋಹನ್ ರಾಜ್, ಪ್ರಸನ್ನ ಚಕ್ರವರ್ತಿ, ಸಿದ್ದಾಪುರ ಮಂಜುನಾಥ್, ಪ್ರೊ ಹರಿರಾಮ್, ಎಸ್‌ಡಿಪಿಐ ಮುಖಂಡ ವಾಸಿಂ ವೇದಿಕೆಯಲ್ಲಿದ್ದರು.
ಕರ್ನಾಟಕದಲ್ಲಿ ಚಿಗುರೊಡೆದ ಅದೆಷ್ಟೋ ಪ್ರಾದೇಶಿಕ ಪಕ್ಷಗಳು ಹೇಳೆಸರಿಲ್ಲದಂತೆ ಮಾಯವಾಗಿವೆ. ದಲಿತರ ಹೆಸರಿನಲ್ಲಿ ಹೋರಾಟ ನಡೆಸುವ ನಾಟಕವಾಡಿ ದಲಿತರನ್ನೇ ಸುಲಿಗೆ ಮಾಡಿ ತೆರೆ ಮರೆಯಲ್ಲಿ ಬಲಿತರ ಪರ ನಿಂತ ಕೆಲವು ಸಂಘಟನೆಗಳು ಇಂದಿಗೂ ಇವೆ. ( ಪ್ರಾಮಾಣಿಕ ಹೋರಾಟಗಾರರಿಗೆ ಇದು ಅನ್ವಯಿಸುವುದಿಲ್ಲ ) ಇವತ್ತಿನ ಕಾಲಘಟ್ಟದಲ್ಲಿ ಪ್ರತ್ಯೇಕ ಪಕ್ಷ ಕಟ್ಟುವ ಸಾಹಸ ಪ್ರತಿಫಲ ನೀಡಲಾರದು. ಬದಲಾಗಿ ಚದುರಿ ಹೋಗಿರುವ ದಲಿತರೆಲ್ಲರನ್ನೂ ಒಂದುಗೂಡಿಸುವ ಕೆಲಸ ಆಗಬೇಕು. ಒಂದು ಬಲಿಷ್ಠ ಸಮೂಹ ಸರ್ಕಾರದ ಮುಮನದೆ ತನ್ನ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸಮುದಾಯದ ಬೆಂಬಲಕ್ಕೆ ನಿಲ್ಲುವ ಮತ್ತು ಸಾಂವಿಧಾನಿಕ ಸವಲತ್ತುಗಳನ್ನು ನೀಡುವ ಹಾಗೂ ಕಡ್ಡಾಯವಾಗಿ ಅದನ್ನು ಪಡೆಯುವ ಪ್ರಯತ್ನ ಮಾಡಬಹುದು. ಅದರ ಹೊರತಾಗಿ ಹೊಸ ರಾಜಕೀಯ ಪಕ್ಷ ಕಟ್ಟುವುದರಿಂದ ಯಾವುದೇ ಪ್ರಯೋಜನ ಇಲ್ಲ.
ಇಲ್ಲಿ ಕಾಂಗ್ರೆಸ್ ಹಾಟಾವೋ ದಲಿತ ಬಚಾವೋ ಎಂಬ ಘೋಷಣೆ ಯ ಹಿಂದೆ ಕಾಂಗ್ರೇಸೇತರ ಪಕ್ಷವೊಂದು ದಲಿತರ ಪರವಾಗಿದೆ ಎಂಬ ಅರ್ಥ ನೀಡುತ್ತದೆ. ಹಾಗಾದರೆ ಅದು ಯಾವುದು? ಇದುವರೆಗೆ ದಲಿತರಿಗೆ ನಿರೀಕ್ಷಿತ ಬೆಂಬಲ ಅಂತಹ ಪಕ್ಷದಿಂದ ದೊರೆತಿದಿಯೆ ಎಂಬ ಬಗ್ಗೆ ನಮಗೆ ಖಾತರಿ ಇರಬೇಕು. ಇರುವ ವ್ಯವಸ್ಥೆಯಲ್ಲಿ ಸ್ವಲ್ಪ ಉತ್ತಮವಾದುದನ್ನು ಬೆಂಬಲಿಸಿ ಗರಿಷ್ಠ ಪ್ರಯೋಜನ ಪಡೆಯುವ ಪ್ರಯತ್ನ ಮಾಡುವುದು ಒಳ್ಳೆಯದು. ಅದಕ್ಕಾಗಿ ಹೋರಾಟ ಮಾಡಿದರೆ ಫಲ ಸಿಗಬಹುದು.