ಗಣೇಶ ಹಬ್ಬದ ಹಿನ್ನಲೆ ಗುಬ್ಬಿ ತಾಲೂಕಿನಲ್ಲಿ ಗಣೇಶ ಪ್ರತಿಷ್ಠಾಪನೆ ಹಾಗೂ ಉತ್ಸವ ಮಾಡುವ ಸಂಘ ಸಂಸ್ಥೆಗಳು ಅನುಮತಿ ಪಡೆಯಲು ಏಕ ಗವಾಕ್ಷಿ ಮೂಲಕ ಅರ್ಜಿ ಸ್ವೀಕಾರಕ್ಕೆ ಅನುವು ಮಾಡಲಾಗುವುದು. ಅಗತ್ಯ ದಾಖಲೆ ಒದಗಿಸಿ ಗಣೇಶ ಪ್ರತಿಷ್ಠಾಪನೆ ಹಬ್ಬ ಆಚರಣೆ ಮಾಡಿಕೊಳ್ಳುವಂತೆ ಗುಬ್ಬಿ ಪಿಎಸ್‌ಐ ಸುನಿಲ್ ಕುಮಾರ್ ಮನವಿ ಮಾಡಿದರು.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನಲೆ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
“ಪ್ರತಿ ವರ್ಷದಂತೆ ಗಣೇಶ ಹಬ್ಬ ಆಚರಣೆಯಲ್ಲಿ ನಡೆಯುವ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಉತ್ಸವ ಸರ್ಕಾರದ ನಿಬಂಧನೆಯಂತೆ ಆಚರಿಸಬೇಕಿದೆ. ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ ಪೆಂಡಾಲ್ ನಿರ್ಮಾಣ ಮಾಡಬೇಕು. ಧ್ವನಿ ವರ್ಧಕ ಅಳವಡಿಕೆಗೆ ಅನುಮತಿ ಹಾಗೂ ಉತ್ಸವಕ್ಕೆ ಪೊಲೀಸ್ ಬಂದೋಬಸ್ತ್ ಎಲ್ಲದಕ್ಕೂ ಅರ್ಜಿ ಮೂಲಕ ಅನುಮತಿ ಪಡೆಯಬೇಕು” ಎಂದು ಸೂಚಿಸಿದರು.
“ಸ್ಥಳೀಯ ಸಂಸ್ಥೆ, ಪೊಲೀಸ್ ಹಾಗೂ ಬೆಸ್ಕಾಂ ಇಲಾಖೆ ಸಿಬ್ಬಂದಿಗಳನ್ನು ಒಂದಡೆ ಒಗ್ಗೂಡಿಸಿ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ಮಾಡದಂತೆ ಮನವಿ ಮಾಡಿ ಮೆರವಣಿಗೆ, ಡಿಜೆ ಸೌಂಡ್ಸ್‌ಗೆ ಯಾವುದೇ ಕಾರಣಕ್ಕೂ ಅನುಮತಿ ನೀಡದಂತೆ ಸರ್ಕಾರ ಆದೇಶಿಸಿದೆ. ಈ ನಿಟ್ಟಿನಲ್ಲಿ ಯಾವುದೇ ಸಾಂಸ್ಕೃತಿಕ ಕಲಾ ತಂಡಗಳು, ವಾದ್ಯವೃಂದ, ಜನಪದ ತಂಡ ಬಳಸಿ ಮೆರವಣಿಗೆ ಮಾಡಬಹುದಾಗಿದೆ. ನಿಗದಿ ಮಾಡಿದ ಸ್ಥಳದಲ್ಲಿ ಗಣೇಶ ವಿಸರ್ಜನೆ ಮಾಡಬೇಕು. ಸಂಜೆಯೊಳಗೆ ಮೆರವಣಿಗೆ ನಡೆಸಬೇಕು. ರಾತ್ರಿ 10 ಗಂಟೆ ಮೇಲೆ ಸೌಂಡ್ ಸಿಸ್ಟಂ ಬಳಸದೆ ಕಾರ್ಯಕ್ರಮ ನಡೆಸಿ ಹಬ್ಬವನ್ನು ಸೌಹಾರ್ದ ರೀತಿಯಲ್ಲಿ ನಡೆಸಬೇಕು” ಎಂದು ಮನವಿ ಮಾಡಿದರು.
“ಗಣೇಶ ಉತ್ಸವದ ಸಂದರ್ಭ ವಿದ್ಯುತ್ ಕಂಬ ಮತ್ತು ತಂತಿ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಇದೇ ಸಂದರ್ಭದಲ್ಲಿ ಈದ್ ಮಿಲಾದ್ ಹಬ್ಬ ಇರುವ ಕಾರಣ ಯಾವುದೇ ಕೋಮು ಪ್ರಚೋದನಾಕಾರಿ ಘಟನೆ ನಡೆಯದಂತೆ ಎಚ್ಚರವಹಿಸಬೇಕಿದೆ. ಬಾವುಟ, ಫ್ಲೆಕ್ಸ್, ಬಂಟಿಂಗ್ ಹಾಕುವಾಗ ಕೇಸರಿ, ಹಸಿರು ಯಾವುದೇ ಇರಲಿ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆದು ಗೊಂದಲ ಇಲ್ಲದೆ ಆಚರಣೆ ಮಾಡಬೇಕು” ಎಂದು ಸಲಹೆ ನೀಡಿದರು.
ಪಟ್ಟಣದ ಟ್ರಾಫಿಕ್ ಸಮಸ್ಯೆ, ಕಾಲೇಜು ಮತ್ತು ಮೈದಾನದ ಬಳಿ ನಡೆಯುವ ಗುಂಪುಗಾರಿಕೆ, ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್ ಓಡಿಸುವುದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ನಡುವೆ ಈ ತುರ್ತು ವಿಚಾರಕ್ಕೆ ಕ್ರಮ ವಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯ ಶೌಕತ್ ಅಲಿ, ಮುಖಂಡರಾದ ಎಚ್ ಟಿ ಭೈರಪ್ಪ, ರಾಮಯ್ಯ, ಸಿ ಆರ್ ಶಂಕರಕುಮಾರ್, ರೈತ ಸಂಘದ ಲೋಕೇಶ್, ಬಿ ಲೋಕೇಶ್, ಜಿ ಆರ್ ರಮೇಶ್, ಅರ್ಜುನ, ಬ್ಯಾಟರಾಯಪ್ಪ, ಯು ರಾಜಣ್ಣ, ಎಚ್ ಕೆ ಮಧು, ಸಚಿನ್, ವಾಸುಗೌಡ ಸೇರಿದಂತೆ ಇತರರು ಇದ್ದರು.
