ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೃಷಿ ಉಪ ನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರಕ್ಕೆ ಸರ್ಕಾರದ ಅಧೀನ ಕಾರ್ಯದರ್ಶಿಯವರು ಹೊರಡಿಸಿರುವ ಆದೇಶವನ್ನು ತಕ್ಷಣವೇ ರದ್ದುಪಡಿಸಬೇಕೆಂದು ಲಿಂಗಸೂಗೂರು ತಾಲೂಕು ಅಭಿವೃದ್ಧಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಮಿತಿಯ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದರು. ಈಗಾಗಲೇ ತಾಲೂಕಿನ ಮಂಜೂರಾತಿ ಹಂತದಲ್ಲಿದ್ದ ಪ್ರಾದೇಶಿಕ ಸಾರಿಗೆ ಕಚೇರಿ ,ಕೆಪಿಟಿಸಿಎಲ್ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯ ಸೇರಿ ತಾಲೂಕಿನ ಒಂದೊಂದಾಗಿ ಕಚೇರಿಗಳು ಸ್ಥಳಾಂತರವಾಗುತ್ತಿವೆ,ತಾಲೂಕಿನ ಅಭಿವೃದ್ಧಿ ಶೂನ್ಯ ರಾಜಕಾರಣಿಗಳಿಂದಾಗಿ ಕ್ಷೇತ್ರ ಕುಂಠಿತಗೊಂಡಿದೆ ಎಂದು ಆರೋಪಿಸಿದರು.
ಬ್ರಿಟೀಷರ ಆಡಳಿತದಲ್ಲಿ ಲಿಂಗಸುಗೂರು ಜಿಲ್ಲಾ ಕೇಂದ್ರವಾಗಿತ್ತು. ಇಲ್ಲಿನ ಕಟ್ಟಡಗಳು ಇತಿಹಾಸ ಪುಟಗಳಲ್ಲಿ ಬರೆಯಲಾಗಿದೆ. ಸುತ್ತಮುತ್ತ ಹಳ್ಳಿಗಳಿಗೆ ಕೇಂದ್ರ ಬಿಂದುವಾಗಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಕಚೇರಿಗಳಿಗೆ ದಿನನಿತ್ಯ ಅಲೆದಾಡುತ್ತಾರೆ. ಕೆಲವು ಕಚೇರಿಗಳು ಸ್ಥಳಾಂತರವಾಗಿರುವುದರಿಂದ ಜನರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ನಿರ್ಲಕ್ಷ್ಯ ರಾಜಕಾರಣಿಗಳಿದ್ದರೆ ಇಡೀ ತಾಲೂಕು ಸಿಂಧನೂರಿಗೆ ಸ್ಥಳಾಂತರವಾಗದಿರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಸುಗೂರು ತಾಲೂಕು ಅಭಿವೃದ್ಧಿ ಮಾಡುತ್ತೇವೆಂದು ಕಳೆದ 15 ವರ್ಷಗಳಿಂದ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸ್ಥಳೀಯರಾದ ಹಾಲಿ ವಿಧಾನ ಪರಿಷತ್ತು ಸದಸ್ಯರು ಮಾತ್ರ ತಮ್ಮ ಸ್ವಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ವಿನಹ ಕ್ಷೇತ್ರದ ಅಭಿವೃದ್ಧಿಯ ಕಡೆ ಎಳ್ಳಷ್ಟು ಗಮನ ಕೊಟ್ಟಿಲ್ಲ ಎಂದು ದೂರಿದರು.
ಸ್ಥಳೀಯರಾದ ಮಾಜಿ ಸಚಿವರು ಹಾಗೂ ಸಂಸದರು ಈ ಕ್ಷೇತ್ರದಿಂದಲೇ ಸಚಿವರು ಸಂಸದರಾಗಿದ್ದು, ಇವರ ಇಚ್ಚಾಶಕ್ತಿ ಕೊರತೆಯಿಂದ ಲಿಂಗಸುಗೂರಿನ ಒಂದೊಂದೇ ಕಚೇರಿಗಳು ಸ್ಥಳಾಂತರವಾಗುತ್ತಿವೆ. ಈ ವಿಷಯಕ್ಕೆ ಸಂಬಂಧವಿಲ್ಲದಂತೆ, ಸ್ಥಳೀಯರಲ್ಲದಂತೆ ಮೌನವಾಗಿ ಇದ್ದಾರೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಗದಗ | ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆ: ತಡವಾಗಿ ಬೆಳಕಿಗೆ ಬಂದ ಘಟನೆ
ಒಂದು ವಾರದಲ್ಲಿ ಕೃಷಿ ನಿರ್ದೇಶಕರ ಕಚೇರಿ-2 ಸ್ಥಳಾಂತರ ಆದೇಶವನ್ನು ರದ್ದುಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಷ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.
ವಿವಿಧ ಸಂಘಟನೆಗಳ ಮುಖಂಡರಾದ ಶಿವಪುತ್ರಗೌಡ ನಂದಿಹಾಳ, ವಿಜಯ ಪೋಳ್, ಅಮರೇಶ ಗೋಸ್ಲೆ, ಬಾಬಾಜಾನಿ, ಜಿಲಾನಿ ಪಾಷಾ, ಹೆಚ್.ಬಿ.ಬಡಿಗೇರ, ಮಲ್ಲನಗೌಡ ಪಾಟೀಲ್ ಹನುಮಂತ ನಾಯಕ, ಸೈಯದ್ ಯೂನಿಸ್ ಮುಫ್ತಿ, ಎಂ.ಜಿಲಾನಿ ಹನುಮಂತ ಸೇರಿ ಇತರರು ಇದ್ದರು.
